Advertisement

ಹದ ಮಳೆ: ಬಿತ್ತನೆ ಕಾರ್ಯ ಚುರುಕು

03:42 PM Aug 09, 2019 | Suhan S |

ಮಂಡ್ಯ: ಕಾವೇರಿ ಕಣಿವೆ ಪ್ರದೇಶದಲ್ಲಿ ಮುಂಗಾರು ಬಹಳ ತಡವಾಗಿ ಬಿರುಸಾಗಿಯೇ ಆರಂಭಗೊಂಡಿದೆ. ಬರಗಾಲದ ಕಾರ್ಮೋಡ ಜಿಲ್ಲೆಯನ್ನು ಆವರಿಸುತ್ತಿರುವಾಗಲೇ ಮಳೆಯ ಮೋಡಗಳ ಆಗಮನವಾಗಿ ರೈತ ಸಮುದಾಯದಲ್ಲಿ ಹೊಸ ಆಶಾಕಿರಣ ಮೂಡಿಸಿವೆ. ವರುಣನ ಅವಕೃಪೆಯಿಂದ ಸ್ತಬ್ಧಗೊಂಡಿದ್ದ ಕೃಷಿ ಚಟುವಟಿಕೆ ಇದೀಗ ಚಾಲನೆ ದೊರಕಿದೆ.

Advertisement

ಬಿತ್ತನೆ ಚುರುಕು: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಹದ ಮಳೆಯಾಗುತ್ತಿದೆ. ಇದರೊಂದಿಗೆ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆಯಾಗುತ್ತಿದೆ. ಪರಿಣಾಮ ರೈತರು ಬಿತ್ತನೆಗೆ ಚುರುಕು ನೀಡಿದ್ದಾರೆ. ಮಳೆ ಅಭಾವದಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ ಮುಂಗಾ ರು ಹಂಗಾಮಿನ ಬಿತ್ತನೆ ಶೇ.12 ಮಾತ್ರ ನಡೆದಿತ್ತು. ಕಾವೇರಿ ಉಗಮ ಸ್ಥಾನದಲ್ಲಿ ಮಳೆ ಚುರುಕುಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಬಿತ್ತನೆ ಪ್ರದೇಶದ ವ್ಯಾಪ್ತಿಯೂ ಹೆಚ್ಚಾಗುವ ಸಾಧ್ಯತೆಗಳಿವೆ.

ಬುಧವಾರ ಜಿಲ್ಲೆಯಲ್ಲಿ ಸುರಿದ ಮಳೆಯಲ್ಲಿ ಕೆ.ಆರ್‌.ಪೇಟೆ, ನಾಗಮಂಗಲ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೆ, ಮಂಡ್ಯ, ಮಳವಳ್ಳಿ, ಶ್ರೀರಂಗಪಟ್ಟಣದಲ್ಲಿ ಅತಿ ಕಡಿಮೆ ಮಳೆಯಾಗಿದೆ. ಬಿದ್ದ ಮಳೆ ಸಮರ್ಪಕವಾಗಿ ಹಂಚಿಕೆಯಾಗದಿರುವುದೂ ಬಿತ್ತನೆಗೆ ಹಿನ್ನಡೆಯಾಗುವುದಕ್ಕೆ ಮತ್ತೂಂದು ಕಾರಣವಾಗಿದೆ.

ಭೂಮಿ ಹದ: ಜಿಲ್ಲೆಯಲ್ಲಿ 2 ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಆಗಾಗ ಜಡಿ ಮಳೆ ಸುರಿಯುತ್ತಿದೆ. ಈ ಮಳೆ ಭೂಮಿಯನ್ನು ಹದಗೊಳಿಸುವುದಕ್ಕೆ ಅನುಕೂಲಕರವಾಗಿದೆ. ಬಿತ್ತನೆಗೆ ಪೂರಕ ಸಿದ್ಧತೆ ಆರಂಭಿಸಲು ಮಳೆ ನೆರವಾಗಿದೆ.

ಜಿಲ್ಲೆಯೊಳಗೆ ಭತ್ತದ ಬಿತ್ತನೆ ಅವಧಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ರಾಗಿ, ಉದ್ದು, ಅವರೆ, ಹುರುಳಿ, ಮುಸುಕಿನ ಜೋಳ, ಅಲಸಂದೆ ಸೇರಿ ದ್ವಿದಳ ಧಾನ್ಯಗಳ ಬಿತ್ತನೆಗೆ ಪೂರಕ ಅವಕಾಶಗಳಿವೆ. ಭತ್ತ ನಾಟಿ ಮಾಡ ಬಯಸುವ ರೈತರು ದೀರ್ಘಾವಧಿ ತಳಿಗೆ ಬದಲಾಗಿ ಅಲ್ಪಾವಧಿ ತಳಿ ಬಿತ್ತನೆ ಮಾಡುವುದಕ್ಕೆ ಅವಕಾಶವಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಹೆಚ್ಚಿದ ನೀರಿನ ಮಟ್ಟ:ಭತ್ತದ ಬಿತ್ತನೆ ಕಾರ್ಯ ಶ್ರೀರಂಗಪಟ್ಟಣದ 22 ಹೆಕ್ಟೇರ್‌ ಹೊರತುಪಡಿಸಿದರೆ ಎಲ್ಲಿಯೂ ನಡೆದಿಲ್ಲ. ಕೊಳವೆ ಬಾವಿ ಆಶ್ರಿತ ಪ್ರದೇಶದ ರೈತರು ಈಗಾಗಲೇ ಭತ್ತದ ಸಸಿ ಮಡಿ ಮಾಡಿಟ್ಟುಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕೃಷ್ಣರಾಜಸಾಗರಕ್ಕೆ ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 3-4 ದಿನದಲ್ಲಿ 100 ಅಡಿ ತಲುಪುವ ಸಾಧ್ಯತೆಗಳಿವೆ. ಆನಂತರ ನಾಲೆಗಳಿಗೂ ನೀರು ಹರಿಸುವ ಸಾಧ್ಯತೆಗಳಿರುವ ಕಾರಣ ಭತ್ತದ ಬಿತ್ತನೆ ಪ್ರದೇಶವೂ ಮುಂದಿನ ದಿನಗಳಲ್ಲಿ ವಿಸ್ತಾರಗೊಳ್ಳುವ ಸಂಭವವಿದೆ. ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದರಿಂದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಶೀಘ್ರಗತಿಯಲ್ಲಿ ಏರಿಕೆಯಾಗುವುದಕ್ಕೆ ಅನುಕೂಲವಾಗಿದೆ. ಜಲಾಶಯಕ್ಕೆ ಈಗಾಗಲೇ 40 ಸಾವಿರಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಒಳಹರಿವಿನ ಪ್ರಮಾಣ ಇನ್ನೂ ಹೆಚ್ಚಾಗಲಿರುವುದರಿಂದ ಕೆಆರ್‌ಎಸ್‌ ಅಣೆಕಟ್ಟು ನಿಧಾನವಾಗಿ ಜೀವಕಳೆ ಪಡೆದುಕೊಳ್ಳುತ್ತಿದೆ.

ಮುಂಗಾರು ಪೂರ್ವ ಮಳೆ ಈ ಬಾರಿ ರೈತರ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿಗೊಳಿಸಿತ್ತು. ಜೂನ್‌-ಜುಲೈನಲ್ಲಿ ಮುಂಗಾರು ಉತ್ತಮವಾಗಿರದೆ ಆತಂಕ ಸೃಷ್ಟಿಸಿತ್ತು. ಇದೇ ಸಮಯಕ್ಕೆ ಕಾವೇರಿ ವಿವಾದವೂ ಭುಗಿಲೆದ್ದು ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಸಿಗದೆ ಜಲಾಶಯದ ನೀರೆಲ್ಲವನ್ನೂ ತಮಿಳುನಾಡಿಗೆ ಹರಿಸಲಾಗುತ್ತಿತ್ತು. ಇದರು ರೈತ ಸಮುದಾಯದಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು.

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗಗಳಲ್ಲಿ ಕುಂಭದ್ರೋಣ ಮಳೆಯಾಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದರೂ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ ಕುಂಠಿತಗೊಂಡಿತ್ತು. 3-4 ದಿನದಿಂದ ಈ ಭಾಗದಲ್ಲೂ ಮುಂಗಾರು ಮಳೆ ಚುರುಕುಗೊಂಡಿದೆ. ಕಬಿನಿ, ಕೆಆರ್‌ಎಸ್‌, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಕೃಷಿ ಹಾಗೂ ಕುಡಿಯುವ ನೀರಿಗೆ ಎದುರಾಗಿದ್ದ ಆತಂಕ ಸದ್ಯದ ಮಟ್ಟಿಗೆ ದೂರವಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next