Advertisement

ಅಲ್ಪ ಮಳೆ: ನಳನಳಿಸುತ್ತಿವೆ ಬೆಳೆ

10:21 AM Jul 01, 2018 | |

ಚಿಂಚೋಳಿ: ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮವಾಗಿ ಬಿಸಿಲಿನ ತಾಪದಿಂದ ಬಾಡುತ್ತಿರುವ ಮುಂಗಾರು ಬೆಳೆಗಳು ಇದೀಗ ಚೇತರಿಕೆಗೊಳ್ಳುತ್ತಿರುವುದರಿಂದ ರೈತರ ಮೊಗದಲ್ಲಿ ಸಂತಸವನ್ನುಂಟು ಮಾಡಿದೆ.

Advertisement

ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಜೂನ್‌ ಮೊದಲ ವಾರದಲ್ಲಿ ಗುಡುಗು, ಮಿಂಚಿನ ಮಳೆ ಬಿದ್ದಿರುವುದರಿಂದ ರೈತರು ಮುಂಗಾರಿನ ಬೆಳೆಗಳಾದ ಹೆಸರು, ತೊಗರಿ, ಉದ್ದು, ಸೋಯಾ ಮತ್ತು ಸಜ್ಜೆ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು.
ಕಳೆದ ಹದಿನೈದು ದಿವಸಗಳಿಂದ ಮಳೆ ಆಗದೇ ಖಡಕ್‌ ಬಿಸಿಲಿನ ತಾಪದಿಂದ ರೈತರು ಮುಂಗಾರು ಬಿತ್ತನೆ ಸ್ಥಗಿತಗೊಳಿಸಿದ್ದರು. ಕೆಲವು ಕಡೆ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆದ್ದರಿಂದ ಬಿಸಿಲಿನ ತಾಪ ಮತ್ತು ತೇವಾಂಶ ಕೊರತೆಯಿಂದಾಗಿ ಬೆಳೆಗಳು ಬಾಡುತ್ತಿರುವುದರಿಂದ ರೈತರ ಮೊಗದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಕಳೆದ ಶುಕ್ರವಾರ ಮತ್ತು ಶನಿವಾರ ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಪರಿಣಾಮವಾಗಿ ಇದೀಗ ಮುಂಗಾರು ಬೆಳೆಗಳಲ್ಲಿ ಚೇತರಿಕೆ ಕಾಣತೊಡಗಿದೆ.  ತಾಲೂಕಿನ ಐನಾಪುರ, ಚಿಮ್ಮನಚೋಡ, ನಿಡಗುಂದಾ, ಸುಲೇಪೇಟ, ಕೋಡ್ಲಿ,
ಚಂದನಕೇರಾ, ರಟಕಲ್‌, ಮಿರಿಯಾಣ, ಕುಂಚಾವರಂ, ಕನಕಪುರ, ಗಡಿಕೇಶ್ವಾರ, ರುದನೂರ, ಮೋಘಾ ಗ್ರಾಮಗಳ ಸುತ್ತಲಿನ ಹಳ್ಳಿಗಳಲ್ಲಿ ಬೆಳೆಗಳು ಇದೀಗ ನಳ ನಳಿಸುತ್ತಿವೆ.

ಸಲಗರ ಬಸಂತಪುರ, ಸಾಲೇಬೀರನಳ್ಳಿ, ತುಮಕುಂಟಾ, ನಾಗಾಇದಲಾಯಿ, ದೇಗಲಮಡಿ, ಕೊರವಿ, ಹೊಡೇಬೀರನಳ್ಳಿ ಗ್ರಾಮಗಳಲ್ಲಿ ಇನ್ನು ಬಿತ್ತನೆ ಕಾರ್ಯ ನಡೆಯುತ್ತಿವೆ ಎಂದು ಕೃಷಿ ಇಲಾಖೆ ತಿಳಿಸಿದೆ. ತಾಲೂಕಿನಲ್ಲಿ ಶೇ. 68 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈಗ ಕೇವಲ ತೊಗರಿ ಬಿತ್ತನೆ ಹೆಚ್ಚು ನಡೆಯುತ್ತಿದೆ. 

ಜುಲೈ ತಿಂಗಳಲ್ಲಿ ಬೆಳೆಗಳಲ್ಲಿ ಹುಲ್ಲು ಕೀಳುವ ಕೆಲಸ ಪ್ರಾರಂಭ ಆಗಲಿದೆ. ಸದ್ಯ ಎಲ್ಲ ಹಳ್ಳಿಗಳಲ್ಲಿ ಮುಂಗಾರಿನ ಬೆಳೆಗಳು ಮಳೆಯಿಂದ ಚೇತರಿಕೆಗೊಂಡು ಅಲ್ಲಲ್ಲಿ ನಳನಳಿಸುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next