ಬೆಂಗಳೂರು: ಮುಂಬರುವ ದಿನಗಳಲ್ಲಿ ಹಗುರ ಮೆಟ್ರೋ ಬೋಗಿಗಳ ನಿರ್ಮಾಣಕ್ಕೆ ಭಾರತ್ ಅರ್ಥ್ ಮೂವರ್ ಲಿ., (ಬೆಮೆಲ್) ಹೆಚ್ಚು ಗಮನಹರಿಸಲಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ಭವಿಷ್ಯದಲ್ಲಿ ಈ ಮಾದರಿಯ ಮೆಟ್ರೋ ರೈಲುಗಳು ಹಳಿಗೆ ಬರಲಿವೆ. ಪ್ರಸ್ತುತ ಇರುವ ಮೆಟ್ರೋ ಬೋಗಿಗಳ ಗಾತ್ರ ದೊಡ್ಡದು. ಭಾರವೂ ಅಧಿಕವಾಗಿರುತ್ತದೆ. ಅದಕ್ಕೆ ತಕ್ಕಂತೆ ನಿಲ್ದಾಣಗಳೂ ಬೃಹದಾಕಾರವಾಗಿರುತ್ತವೆ.
ಆದರೆ, ಕೇಂದ್ರ ಸರ್ಕಾರವು “ಹಗುರ ಮೆಟ್ರೋ’ಗೆ ಒತ್ತುಕೊಡುತ್ತಿದೆ. ಈ ನಿಟ್ಟಿನಲ್ಲಿ ಬೆಮೆಲ್ ಚಿಂತನೆ ನಡೆಸಿದೆ. ಇದರಿಂದ ನಿರ್ಮಾಣ ವೆಚ್ಚ ಹೆಚ್ಚು-ಕಡಿಮೆ ಶೇ.30ರಷ್ಟು ಇಳಿಕೆ ಆಗಲಿದೆ ಎಂದು ಬೆಮೆಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ಹೋಟಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಗರದ “ನಮ್ಮ ಮೆಟ್ರೋ’ ಯೋಜನೆಯ ವಿವಿಧ ಹಂತಗಳಿಗೆ ಬೆಮೆಲ್ ಈಗಾಗಲೇ ಮೆಟ್ರೋ ಬೋಗಿಗಳನ್ನು ಪೂರೈಸಿದ್ದು, ಭವಿಷ್ಯದಲ್ಲಿ ಇನ್ನೂ 200-300 ಮೆಟ್ರೋ ಬೋಗಿಗಳ ಬೇಡಿಕೆ ನಿರೀಕ್ಷೆ ಇದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಪ್ರಸ್ತುತ 150 ಮೆಟ್ರೋ ಬೋಗಿಗಳಿಗೆ ಬೇಡಿಕೆ ಇತ್ತು. ಈ ಪೈಕಿ ಬಹುತೇಕ ಪೂರೈಕೆ ಮಾಡಲಾಗಿದೆ. ಅವುಗಳು ಸೇವೆಗೂ ಲಭ್ಯವಾಗಿವೆ. ಇದಲ್ಲದೆ, ಮತ್ತೆ 42 ಬೋಗಿಗಳಿಗೆ ಬೇಡಿಕೆ ಇಡಲಾಗಿದೆ. ಈ ಮಧ್ಯೆ ಮುಂದಿನ ಹಂತಕ್ಕೆ ಅಗತ್ಯ ಇರುವ 216 ಬೋಗಿಗಳಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಬೆಮೆಲ್ ಕೂಡ ಇದರಲ್ಲಿ ಭಾಗವಹಿಸಿದೆ. ಒಟ್ಟಾರೆ ಭವಿಷ್ಯದಲ್ಲಿ 200ರಿಂದ 300 ಬೋಗಿಗಳ ಪೂರೈಕೆಗೆ ಬೇಡಿಕೆ ನಿರೀಕ್ಷೆ ಇದೆ ಎಂದು ಹೇಳಿದರು.
ಅಲ್ಲದೆ, ಕೊಲ್ಕತ್ತ ಮೆಟ್ರೋ ರೈಲು ಕಾರ್ಪೋರೇಷನ್ ಲಿ.,ನಿಂದ 18 ಬೋಗಿಗಳು, ಎಂಆರ್‌ಎಸ್-1 ಯೋಜನೆಗೆ 378 ಬೋಗಿಗಳ ಪೂರೈಕೆಗೆ ಬೇಡಿಕೆ ಬಂದಿದೆ. ಜತೆಗೆ ವಿವಿಧ ಹಂತಗಳಲ್ಲಿ ಎಂಆರ್‌ಎಸ್‌ನಿಂದ ಇನ್ನೂ 300 ಬೋಗಿಗಳಿಗೆ ಬೇಡಿಕೆ ಬರುವ ಸಾಧ್ಯತೆ ಇದೆ ಎಂದ ಅವರು, ರ್ಯಾಪಿಡ್ ರೈಲ್ವೆ ಟ್ರಾನ್ಸಿಟ್ ಸಿಸ್ಟ್‌ಂ (ಆರ್‌ಆರ್‌ಟಿಎಸ್) ಯೋಜನೆ ಪ್ರಗತಿಯಲ್ಲಿದೆ.
ಇದರ ವ್ಯವಸ್ಥಾಪಕ ನಿರ್ದೇಶಕರು ಕೂಡ ಈಚೆಗೆ ಬೆಮೆಲ್‌ಗೆ ಭೇಟಿ ನೀಡಿ, ಚರ್ಚೆ ನಡೆಸಿದ್ದಾರೆ. ಇಷ್ಟೇ ಅಲ್ಲ, ಹೈಸ್ಪೀಡ್ ರೈಲು ಯೋಜನೆಗೆ ಅಗತ್ಯ ಇರುವ 240 ಬೋಗಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಆರ್.ಎಚ್. ಮುರಳೀಧರ್, ಸುರಜ್ ಪ್ರಕಾಶ್, ಸುರೇಶ್ ವಸ್ತ್ರದ, ರಾಜಶೇಖರ್ ಉಪಸ್ಥಿತರಿದ್ದರು.