Advertisement

ಕಸದಿಂದ ನಗರದ ಬೀದಿಗಳಿಗೆ ಬೆಳಕು

12:01 PM Aug 21, 2018 | |

ಬೆಂಗಳೂರು: ಒಂದೆಡೆ ರಾಜಧಾನಿ ಬೆಂಗಳೂರು ತ್ಯಾಜ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಮತ್ತೂಂದೆಡೆ ಗ್ರಾಮಗಳಲ್ಲಿನ ತ್ಯಾಜ್ಯ ಬಳಸಿ ಬೀದಿ ದೀಪ ಬೆಳಗಿಸುವ ಕೆಲಸಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಂದಾಗಿದೆ.

Advertisement

ಗ್ರಾಮೀಣ ಭಾಗದಲ್ಲಿ ಉತ್ಪತ್ತಿಯಾಗುವ ಘನ ಹಾಗೂ ದ್ರವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸಿ, ಅದನ್ನು ವಿದ್ಯುತ್‌ ಆಗಿ ಪರಿವರ್ತಿಸಿ ಉಪಯೋಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ಗೋಬರ್‌ಧನ್‌’ ಯೋಜನೆ ಜಾರಿಗೆ ನಗರ ಜಿ.ಪಂ ಸಿದ್ಧತೆ ನಡೆಸಿದೆ.

ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ಸಗಣಿ, ಕೋಳಿ ಹಿಕ್ಕೆ, ತರಕಾರಿ ತ್ಯಾಜ್ಯ ಸೇರಿದಂತೆ ಇತರೆ ಘನ ಹಾಗೂ ದ್ರವ ತ್ಯಾಜ್ಯವನ್ನು ಬಳಸಿಕೊಂಡು ಜೈವಿಕ ಅನಿಲ ಉತ್ಪಾದಿಸುವುದು; ಹೀಗೆ ಉತ್ಪಾದನೆಯಾಗುವ ಇಂಧನವನ್ನು ನಿರ್ದಿಷ್ಟ ಪ್ರಕ್ರಿಯೆ ಮೂಲಕ ವಿದ್ಯುತ್‌ ಆಗಿ ಪರಿವರ್ತಿಸಿ ಹಳ್ಳಿಯ ಶಾಲೆ, ಪಂಚಾಯಿತಿ ಕಚೇರಿ ಹಾಗೂ ಬೀದಿ ದೀಪಗಳಿಗೆ ಬಳಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಗೋಬರ್‌ಧನ್‌ ಯೋಜನೆ ಘೋಷಿಸಿದೆ. ಈ ನೂತನ ಯೋಜನೆಗೆ ಬೆಂಗಳೂರು ನಗರ ಜಿ.ಪಂ ಸೇರಿ ರಾಜ್ಯದ 16 ಜಿಲ್ಲೆಗಳು ಆಯ್ಕೆಯಾಗಿವೆ. ಅದರಂತೆ ಬೆಂಗಳೂರು ನಗರ ಜಿಲ್ಲಾಡಳಿತ ಯೋಜನೆ ಜಾರಿಗೆ ಹೆಜ್ಜೆ ಇರಿಸಿದೆ. 

ತಾಲೂಕಿಗೊಂದು ಗೋಬರ್‌ಧನ್‌: ಗೋಬರ್‌ಧನ್‌ ಯೋಜನೆಗೆ ಆಯ್ಕೆಯಾಗಿರುವ ಜಿಲ್ಲೆಗಳ ಪ್ರತಿ ತಾಲೂಕಿಗೆ ಒಂದರಂತೆ ಘಟಕ ನಿರ್ಮಿಸಲಾಗುತ್ತದೆ. ಅದರಂತೆ ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ತಾಲೂಕುಗಳಿದ್ದು, ಬೆಂಗಳೂರು ದಕ್ಷಿಣ ತಾಲೂಕಿನ ಸೋಮನಹಳ್ಳಿ, ಪೂರ್ವ ತಾಲೂಕಿನ ಮಂಡೂರು, ಉತ್ತರ ತಾಲೂಕಿನ ಸೊಣ್ಣೇನಹಳ್ಳಿ ಮತ್ತು ಅನೇಕಲ್‌ ತಾಲೂಕಿನ ಮುತ್ತನಲ್ಲೂರಿನಲ್ಲಿ ಶೀಘ್ರವೇ ಯೋಜನೆ ಅನುಷ್ಠಾನಗೊಳ್ಳಲಿದೆ.

Advertisement

ಯೋಜನೆ ಕಾರ್ಯಗತ ಮಾಡುವ ಜವಬ್ದಾರಿಯನ್ನು ಎನ್‌ಜಿಒ ಅಥವಾ ಒಂದು ಸಂಸ್ಥೆಗೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಲೇ ಕೆಲವು ಎನ್‌ಜಿಒಗಳು ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿವೆ. ಸದ್ಯದಲ್ಲೇ ಯಾವ ಸಂಸ್ಥೆಗೆ ನಿರ್ವಹಣೆ ಹೊಣೆ ನೀಡಬೇಕು ಎಂಬುವುದನ್ನು ಜಿಲ್ಲಾಡಳಿತ ಅಂತಿಮಗೊಳಸಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

60:40ರ ಅನುಪಾತದ ಅನುದಾನ: “ಗೋಬರ್‌ ಧನ್‌’ಯೋಜನೆ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 60:40ರ ಅನುಪಾತದಲ್ಲಿ ಅನುದಾನ ನೀಡಲಿವೆ. ಅದರಂತೆ ನಿಗದಿ ಮಾಡಿದ ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿಯ ಜನಸಂಖ್ಯೆಗೆ ಅನುಗುಣವಾಗಿ 3.5 ಲಕ್ಷ ರೂ.ಗಳಿಂದ 10 ಲಕ್ಷ ರೂ.ವರೆಗೆ ಅನುದಾನ ಲಭ್ಯವಾಗಲಿದೆ. ಜತೆಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲೂ ಅನುದಾನ ದೊರೆಯಲಿದೆ.

ಅನುದಾನ ಲಭ್ಯತೆ ಪ್ರಮಾಣ: ಸ್ವತ್ಛ ಭಾರತ ಮಿಷನ್‌ (ಗ್ರಾಮೀಣ) ಅಡಿಯಲ್ಲಿ ಯೋಜನೆಗೆ ಅನುದಾನ ಒದಗಿಸಲಾಗುತ್ತದೆ. 150 ಕುಟುಂಬಗಳಿರುವ ಗ್ರಾಮಕ್ಕೆ 3.5 ಲಕ್ಷ ರೂ. ಅನುದಾನ ನೀಡಲಾಗುತ್ತದೆ. 300 ಕುಟುಂಬಗಳಿರುವ ಗ್ರಾಮಗಳಿಗೆ 6 ಲಕ್ಷ ರೂ., 500 ಕುಟುಂಬಗಳು ವಾಸವಿರುವ ಗ್ರಾಮಕ್ಕೆ 7.5 ಲಕ್ಷ ರೂ. ಹಾಗೂ 500ಕ್ಕೂ ಅಧಿಕ ಕುಟುಂಬಗಳು ವಾಸವಿರುವ ಗ್ರಾಮಕ್ಕೆ 10 ಲಕ್ಷ ರೂ. ಅನುದಾನ ದೊರೆಯಲಿದೆ.

ಯಾವ ಗ್ರಾಮದಲ್ಲಿ ಯೋಜನೆ ಜಾರಿಗೊಳಿಸಬೇಕು ಎಂಬುದನ್ನು ಆಯಾ ಪಂಚಾಯಿತಿಗಳೇ ನಿರ್ಧರಿಸಲಿವೆ. ಒಂದೊಮ್ಮೆ ಪಂಚಾಯಿತಿಗಳು ಅನುದಾನವನ್ನು ಸಮರ್ಪಕವಾಗಿ ಬಳಸಿದ್ದರೆ ಅನುದಾನ ವಾಪಸ್‌ ಹೋಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯೋಜನೆ ಅನುಕೂಲವೇನು?: ಬೆಂಗಳೂರು ಮಿತಿಮೀರಿ ಬೆಳೆದಿರುವುದರಿಂದ ನಿತ್ಯ ಸಾವಿರಾರು ಟನ್‌ ತ್ಯಾಜ್ಯ ಸೃಷ್ಟಿಯಾಗಿ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ತಾಲೂಕುಗಳು ಬಿಬಿಎಂಪಿ ವ್ಯಾಪ್ತಿಗೆ ಹೊಂದಿಕೊಂಡಿರುವುದರಿಂದ ಅಂತಹ ಪರಿಸ್ಥಿತಿ ಈ ಭಾಗಗಳಲ್ಲಿ ಏರ್ಪಡಬಾರದೆಂಬ ಉದ್ದೇಶ ಕೂಡ ಇದರಲ್ಲಿ ಅಡಗಿದೆ. ಹಳ್ಳಿಗಳಲ್ಲಿ ಸಂಗ್ರಹವಾಗುವ ಘನ ಹಾಗೂ ದ್ರವ ತ್ಯಾಜ್ಯವನ್ನು ಒಟ್ಟುಗೂಡಿಸಿ ಜೈವಿಕ ಇಂಧನವಾಗಿ ಬಳಕೆ ಮಾಡುವುದರಿಂದ ಸಾರ್ವಜನಿಕ ಉಪಯೋಗಕ್ಕೂ ಬರಲಿದೆ.ಹಾಗೆ ತ್ಯಾಜ್ಯ ಸಮಸ್ಯೆಗೂ ರಾಮಬಾಣವಾಗಲಿದೆ.

ಸ್ವತ್ಛ ಭಾರತ ಮಿಷನ್‌ ಅಡಿಯಲ್ಲಿ ಕೇಂದ್ರ ಸರ್ಕಾರ ಗೋಬರ್‌ಧನ್‌ ಯೋಜನೆ ರೂಪಿಸಿದೆ. ಗ್ರಾಮಗಳನ್ನು ಸ್ವತ್ಛವಾಗಿಡುವುದು ಕೂಡ ಇದರಲ್ಲಿ ಸೇರಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಈ ಯೋಜನೆ ಜಾರಿಗೆ ಬೆಂಗಳೂರು ನಗರ ಜಿಲ್ಲಾಡಳಿತ ಮುಂದಾಗಿದೆ.
ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ

* ದೇವೇಶ ಸೂರಗುಪ್ಪ 

Advertisement

Udayavani is now on Telegram. Click here to join our channel and stay updated with the latest news.

Next