ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಡಲ ತೀರಗಳಲ್ಲಿ ಕಾನೂನು ಬಾಹಿರವಾಗಿ ಬೆಳಕು ಅಳವಡಿಸಿ ಮೀನುಗಾರಿಕೆ ನಡೆಸಲಾಗುತ್ತದೆ ಎಂದು ಮಂಗಳೂರಿನ ಮೀನುಗಾರರ ಜತೆ ಸ್ಥಳೀಯರು ಮಾತಿನ ಚಕಮಕಿ ನಡೆಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಬೆಳಕು ಅಳವಡಿಸಿ ಮೀನುಗಾರಿಕೆ ನಡೆಸುವ ಪದ್ಧತಿಯನ್ನು ನಿಷೇಧಿಸಿದ್ದರೂ ಜಿಲ್ಲೆಯಲ್ಲಿ ಹೊರ ಜಿಲ್ಲೆಯ ಮೀನುಗಾರರಿಂದ ಇದು ಮುಂದುವರಿದಿದೆ.
ಇದನ್ನೂ ಓದಿ:- ಮೂಲರಪಟ್ಣ ನೂತನ ಸೇತುವೆ ಸಂಚಾರಕ್ಕೆ ಮುಕ್ತ
ಗುರುವಾರ ಬೆಳ್ಳಂಬೆಳಗ್ಗೆ ಭಟ್ಕಳ ತಾಲೂಕು ವ್ಯಾಪ್ತಿಯ ಕಡಲಿನಲ್ಲಿ ಮಂಗಳೂರು ಭಾಗದ ಮೀನುಗಾರರು ಲೈಟ್ ಫಿಶಿಂಗ್ ನಡೆಸಿದ್ದು, ಇದನ್ನು ವಿಡಿಯೊ ಚಿತ್ರೀಕರಣ ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು, ಲೈಟ್ ಫಿಶಿಂಗ್ ನಡೆಸದಂತೆ ಮಂಗಳೂರು ಮೀನುಗಾರರೊಂದಿಗೆ ಕಡಲಿನಲ್ಲೇ ವಾಗ್ವಾದ ನಡೆಸಿದ್ದಾರೆ.
ಏನಿದು ಲೈಟ್ ಫಿಶಿಂಗ್?: ಬೋಟ್‌ಗಳಿಗೆ ಪ್ರಖರ ಬೆಳಕಿನ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿ ರಾತ್ರಿ ಹೊತ್ತು ಮೀನುಗಾರಿಕೆ ನಡೆಸುವ ಪದ್ಧತಿಯೇ ಲೈಟ್ ಫಿಶಿಂಗ್. ಈ ಮಾದರಿಯ ಮೀನುಗಾರಿಕೆ ನಡೆಸುವ ಬೋಟ್ ಗಳಿಗೆ 1000 ಮೆಗಾವ್ಯಾಟ್ ಸಾಮರ್ಥ್ಯದ ತಲಾ 8 ಎಲ್‌ಇಡಿ ಬಲ್ಬ್ ಅಳವಡಿಸಲಾಗಿರುತ್ತದೆ.
20 ಸಾವಿರ ಮೆಗಾಹರ್ಟ್ಸ್ ಸಾಮರ್ಥ್ಯದ ಜನರೇಟರ್ ಮೂಲಕ ಈ ಬೃಹತ್ ಗಾತ್ರದ ಬಲ್ಬ್ಗಳಿಂದ ಪ್ರಖರ ಬೆಳಕು ಬರುತ್ತದೆ. ಊಹಿಸಲೂ ಸಾಧ್ಯವಿಲ್ಲದಷ್ಟು ಮೀನುಗಳು ವಿದ್ಯುತ್ ಬೆಳಕಿಗೆ ಆಕರ್ಷಿತವಾಗಿ ಬೋಟ್ ಸಮೀಪ ಬರುತ್ತವೆ. ಆಗ ಸಮೀಪದ ಇನ್ನೊಂದು ಬೋಟ್‌ನಿಂದ ಬಲೂನ್ ಆಕಾರದಲ್ಲಿ ಬಲೆ ಬೀಸಿ ಮೀನುಗಳನ್ನು ಹಿಡಿಯಲಾಗುತ್ತದೆ. ಈ ಪದ್ಧತಿಯಲ್ಲಿ ಮೀನಿನ ಮರಿಗಳೂ ಸೇರಿದಂತೆ ನೂರಾರು ಟನ್ ಮೀನುಗಳನ್ನು ಏಕಕಾಲಕ್ಕೆ ಹಿಡಿಯಲಾಗುತ್ತದೆ.
ಲೈಟ್ ಫಿಶಿಂಗ್‌ಗೆ ವಿರೋಧ ಯಾಕೆ?: ಕರಾವಳಿ ತಾಲೂಕುಗಳಲ್ಲಿ ಲಕ್ಷಕ್ಕೂ ಅ ಧಿಕ ಮಂದಿ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಬಂಡವಾಳಶಾಹಿ ಮೀನುಗಾರರು ಈ ರೀತಿ ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿದ್ದು, ಇದು ಮೀನಿನ ಸಂತತಿಗೆ ಮಾರಕವಾಗಿದೆ. ಲೈಟ್ ಫಿಶಿಂಗ್‌ನಿಂದಾಗಿ ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ಬಿದ್ದಿದ್ದು, ಮೀನುಗಾರರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಇತ್ತೀಚೆಗೆ ಕೆಲವು ಜಾತಿಯ ಮೀನುಗಳ ಸಂಖ್ಯೆ ವಿರಳವಾಗಿದ್ದು, ಮೀನುಗಾರಿಕೆ ಉದ್ಯೋಗದ ಮೇಲೆ ಕರಿಛಾಯೆ ಆವರಿಸಿದಂತಾಗಿದೆ ಎನ್ನುತ್ತಾರೆ ಮೀನುಗಾರರು.