Advertisement
ವಾಡಾದ ಭಾರತೀಯ ಅಂಗಸಂಸ್ಥೆ ನಾಡಾದಿಂದ ಬಿಸಿಸಿಐ ವ್ಯಾಪ್ತಿಯಲ್ಲಿ ಬರುವ ಕ್ರಿಕೆಟಿಗರು ಪರೀಕ್ಷೆಗೊಳಪಡಲಿದ್ದಾರೆ. ನಿಯಮದ ಪ್ರಕಾರ, ಒಂದು ಕ್ರೀಡಾಸಂಸ್ಥೆಯ ಶೇ. 10ರಷ್ಟು ಕ್ರೀಡಾಪಟುಗಳು ಪರೀಕ್ಷೆಗೊಳಪಟ್ಟರೆ ಮಾತ್ರ ಆ ಸಂಸ್ಥೆಗೆ ವಾಡಾ ಮಾನ್ಯತೆ ಸಿಗಲಿದೆ. ಆ ಪ್ರಕಾರ 6 ತಿಂಗಳ ಕಾಲ ಬಿಸಿಸಿಐ ನಿರ್ಧರಿಸಿದ ಕ್ರಿಕೆಟಿಗರ ಮೂತ್ರ ಸಂಗ್ರಹವನ್ನು ನಾಡಾಗೆ ಕಳುಹಿಸಲಾಗುವುದು ಎಂದು ತಿಳಿಸಲಾಗಿದೆ. ಆದರೆ ಈ ಬಗ್ಗೆ ನಾಡಾಗೆ ಇನ್ನೂ ಯಾವುದೇ ಮಾಹಿತಿ ತಲುಪಿಲ್ಲ ಅಥವಾ ಅಧಿಕೃತ ಒಪ್ಪಂದವೂ ಆಗಿಲ್ಲ.
ಬಿಸಿಸಿಐ ಇದುವರೆಗೆ ನಾಡಾದಿಂದ ಪರೀಕ್ಷೆಗೊಳಪಡಲು ಸತತವಾಗಿ ನಿರಾಕರಿಸಿತ್ತು. ತಾನು ವಾಡಾ ವ್ಯಾಪ್ತಿಯಲ್ಲೇ ಬರುವ ಸ್ವೀಡನ್ನಿನ ಐಡಿಟಿಎಂನಿಂದ ಪರೀಕ್ಷೆಗೊಳಗಾಗುತ್ತಿರುವುದರಿಂದ ತನಗೆ ನಾಡಾ ಪರೀಕ್ಷೆ ಬೇಡವೆಂದು ಹೇಳಿತ್ತು. ನಾಡಾ ಸಾಮರ್ಥ್ಯದ ಬಗ್ಗೆ ಇರುವ ಅನುಮಾನದಿಂದ ಬಿಸಿಸಿಐ ಉದ್ದೀಪನ ಪರೀಕ್ಷೆಯಿಂದ ದೂರವೇ ಉಳಿದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, ನಮಗೆ ನಾಡಾ ಅಧಿಕಾರಿಗಳ ಬಗ್ಗೆ ನಂಬಿಕೆಯಿಲ್ಲ. ಈ ಹಿಂದೆ ಹಲವು ಬಾರಿ ಪರೀಕ್ಷಾ ಮಾದರಿಗಳನ್ನು ಅಸಮರ್ಪಕವಾಗಿ ನಾಡಾ ನಿಭಾಯಿಸಿದ ಬಗ್ಗೆ ಉದಾಹರಣೆಗಳಿವೆ. ಭಾರತದ ಕ್ರೀಡಾ ಇತಿಹಾಸದ ಪ್ರಮುಖರಾದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಕೂಡ ಈ ವ್ಯಾಪ್ತಿಯಲ್ಲಿ ಬರುತ್ತಾರೆ. ಆಗ ನಾವು ಎಚ್ಚರಿಕೆಯಿಂದಲೇ ಹೆಜ್ಜೆಯಿಡಬೇಕೆಂದು ಹೇಳಿದ್ದಾರೆ.
Related Articles
ಆದರೆ ವಾಡಾ ಸತತವಾಗಿ ಬಿಸಿಸಿಐ ಮೇಲೆ ಒತ್ತಡ ಹೇರಿತ್ತು. ಬಿಸಿಸಿಐ ನಾಡಾ ವ್ಯಾಪ್ತಿಗೆ ಬರದಿದ್ದರೆ, ಪೂರ್ಣ ಭಾರತೀಯ ಕ್ರೀಡಾಸಂಸ್ಥೆಗಳನ್ನೇ ವಾಡಾದಿಂದ ಹೊರಗಿಡುತ್ತೇವೆ, ಇದರಿಂದ ಯಾವುದೇ ಅಂತಾರಾಷ್ಟ್ರೀಯ ಕೂಟದಲ್ಲಿ ಭಾರತೀಯರು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲವೆಂದು ಹೆದರಿಸಲಾಗಿತ್ತು. ಅದಕ್ಕೆ ಬಿಸಿಸಿಐ ಸ್ವಲ್ಪವೂ ತಲೆಕೆಡಿಸಿಕೊಂಡಿರಲಿಲ್ಲ. ಕಡೆಗೆ ವಾಡಾ, ಐಸಿಸಿಯನ್ನೇ ತನ್ನ ವ್ಯಾಪ್ತಿಯಿಂದ ಹೊರಹಾಕುವುದಾಗಿ ಹೆದರಿಸಿತ್ತು. ಆದ್ದರಿಂದ ಐಸಿಸಿ, ಬಿಸಿಸಿಐ ಮೇಲೆ ನಾಡಾ ವ್ಯಾಪ್ತಿಗೆ ಬರುವಂತೆ ಒತ್ತಡ ಹೇರಿತ್ತು. ಅದೀಗ ಫಲ ನೀಡಿದೆ.
Advertisement
ತೆರಿಗೆ ಮನ್ನಕ್ಕೆ ಮನವಿ2016ರಲ್ಲಿ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ಗೆ ಕೇಂದ್ರ ಸರಕಾರ ತೆರಿಗೆ ಮನ್ನಾ ಮಾಡಿರಲಿಲ್ಲ. ಪರಿಣಾಮ, ಐಸಿಸಿಗೆ 150 ಕೋಟಿ ರೂ. ನಷ್ಟವಾಗಿತ್ತು. ಇದನ್ನು ಬಿಸಿಸಿಐ ತುಂಬಿಕೊಡಬೇಕೆಂದು ಐಸಿಸಿ ಹೇಳಿತ್ತು. ಕೇಂದ್ರದಲ್ಲಿ ನೂತನ ಸರಕಾರ ಅಸ್ಥಿತ್ವಕ್ಕೆ ಬಂದ ಮೇಲೆ, ಮತ್ತೆ ತೆರಿಗೆ ಮನ್ನಾ ಮಾಡಲು ಒತ್ತಾಯಿಸುತ್ತೇವೆ. ಅದಾದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಐಸಿಸಿಗೆ ಬಿಸಿಸಿಐ ಭರವಸೆ ನೀಡಿದೆ.