“ಲೈಟಾಗಿ ಲವ್ವಾಗಿದೆ’ ಅನ್ನೋ ಚಿತ್ರಗೀತೆಯನ್ನು ನೀವೆಲ್ಲ ಕೇಳಿರಬಹುದು. ಈಗ ಇದೇ ಹೆಸರನ್ನು ಇಟ್ಟುಕೊಂಡು ಈಗ ಹೊಸಬರ ಚಿತ್ರವೊಂದು ತೆರೆಗೆ ಬರುತ್ತಿದೆ. ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಗುರುರಾಜ ಗದಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲೂ ಒಮ್ಮೆಯಾದರೂ ಪ್ರೀತಿ ಹುಟ್ಟಿರುತ್ತದೆ. ನಿಜವಾದ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಪ್ರೀತಿ ಮಾಡಿದರೆ ಮೋಸ ಮಾಡಬಾರದು. ನಂಬಿಕೆ -ನಿಯತ್ತಿಗೆ ಇನ್ನೊಂದು ಹೆಸರೇ ಪ್ರೀತಿ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು “ಲೈಟಾಗಿ ಲವ್ವಾಗಿದೆ’ ಚಿತ್ರ ಮಾಡಲಾಗಿದೆಯಂತೆ. ಈ ಹಿಂದೆ ಉತ್ತರ ಕರ್ನಾಟಕದ ಜನಪದ ಶೈಲಿಯ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದ ಮತ್ತು “ಬದುಕಿಗಾಗಿ’ ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದ ಗುರುರಾಜ ಗದಾಡಿ, ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಗಾಂಧಿನಗರಕ್ಕೆ ಪರಿಚಯವಾಗುತ್ತಿದ್ದಾರೆ.
ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ “ಸರಿಗಮಪ ಸೀಸನ್-11’ರ ವಿಜೇತ ಚನ್ನಪ್ಪ ಹುದ್ದಾರ ಈ ಚಿತ್ರದ ಮೂಲಕ ನಾಯಕನಾಗಿ ಮತ್ತು ನಟಿ ದಿವ್ಯಾ ವಾಗುಕರ ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಉಳಿದಂತೆ ಶ್ವೇತಾ ಧಾರವಾಡ, ಸಚ್ಚಿನ್ ತಿಮ್ಮಯ್ಯ, ಪ್ರದೀಪ್ ತಿಪಟೂರು, ಅನ್ವಿತಾ, ಯಲ್ಲೇಶ್ ಕುಮಾರ್, ಚೈತ್ರಾ ಹಿರೇಮಠ, ರತಿಕಾ ಗೋಕಾಕ್, ಅಂಕಿತಾ, ಸೋನಿ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಆಯರ್‌ಸ್ವಾಮಿ ಸಂಕಲನ ಮಾಡುವ ಜೊತೆಗೆ ಸಂಭಾಷಣೆಗೆ ಪದಗಳನ್ನು ಪೋಣಿಸಿದ್ದಾರೆ. ಚಿತ್ರಕ್ಕೆ ಶಿವಪುತ್ರ-ವಿನೋದ್ ಛಾಯಾಗ್ರಹಣ, ಆಯರ್ ಸ್ವಾಮಿ ಸಂಕಲನ ಕಾರ್ಯವಿದೆ. ಆಕಾಶ್ ಪರ್ವ ಸಂಗೀತ ಸಂಯೋಜನೆಯ ಹಾಡುಗಳಿಗೆ ಸಂಜಯ ಕುಮಾರ್, ಕಿನ್ನಾಳರಾಜ್ ಸಾಹಿತ್ಯ ಒದಗಿಸಿದ್ದಾರೆ. “ಲೈಟಾಗಿ ಲವ್ವಾಗಿದೆ’ ಚಿತ್ರದ ಶೇಕಡ 90ರಷ್ಟು ಚಿತ್ರೀಕರಣವನ್ನು ಬೆಳಗಾವಿ, ಕೊಪ್ಪಳದ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಉಳಿದ ಭಾಗವನ್ನು ಬೆಂಗಳೂರು, ಹಾಸನ, ಚಿಕ್ಕಮಗಳೂರು ಮೊದಲಾದ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.
“ಪ್ರಜ್ವಲ್ ಸಿನಿ ಕ್ರಿಯೇಶನ್ಸ್’ ಬ್ಯಾನರ್ ಅಡಿಯಲ್ಲಿ ಎನ್.ಆರ್ ರಜಪೂತ, ಕಿಶೋರ್ ಭಟ್, ಶಫೀಕ್ ಸನದಿ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ “ಯು/ಎ’ ಪ್ರಮಾಣ ಪತ್ರ ಪಡೆದುಕೊಂಡಿರುವ ಈ ಚಿತ್ರ ಫೆಬ್ರವರಿ ವೇಳೆಗೆ ತೆರೆ ಕಾಣುವ ಸಾಧ್ಯತೆ ಇದೆ. ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು ದೊಡ್ಡ ಸಂಖ್ಯೆಯ ಪ್ರತಿಭೆಗಳು ಗಾಂಧಿನಗರಕ್ಕೆ ಅಡಿಯಿಡುತ್ತಿದ್ದು, ಉತ್ತರದ ಮಂದಿಯ “ಲೈಟಾಗಿ ಲವ್ವಾಗಿದೆ’ ಚಿತ್ರ ಸಿನಿ ಮಂದಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಶೀಘ್ರದಲ್ಲಿಯೇ ಗೊತ್ತಾಗಲಿದೆ.