ಮೇಜಿನ ಮೇಲೆ ಒಂದು ಖಾಲಿ ಬಾಟಲ್ ಮತ್ತು ಒಂದು ಹಗ್ಗದ ತುಂಡನ್ನು ಇಟ್ಟಿದೆ. ಜಾದೂಗಾರನ ಸವಾಲೇನೆಂದರೆ ಆ ಹಗ್ಗದಿಂದ ಬಾಟಲನ್ನು ಎತ್ತಬೇಕು. ಇದೇನು ಮಹಾ? ಹಗ್ಗವನ್ನು ಬಾಟಲಿಯ ಕುತ್ತಿಗೆಗೆ ಕಟ್ಟಿ ಎತ್ತಬಹುದೆಂದು ನೀವು ಯೋಚಿಸುತ್ತಿರಬಹುದಲ್ಲವೇ? ಸವಾಲು ಇಷ್ಟೇ ಅಲ್ಲ. ಹಗ್ಗದ ಒಂದು ತುದಿಯನ್ನು ಬಾಟಲಿಯೊಳಗೆ ಇಳಿಬಿಟ್ಟು ಇನ್ನೊಂದು ತುದಿಯ ಸಹಾಯದಿಂದ ಬಾಟಲನ್ನು ಎತ್ತಬೇಕು. ಯಾವುದೇ ಗಂಟನ್ನು ಹಾಕುವಂತಿಲ್ಲ. ಇದನ್ನು ಮಾಡಲು ಪ್ರೇಕ್ಷಕರು ಪ್ರಯತ್ನಿಸಿ ಸುಸ್ತು ಹೊಡೆಯುತ್ತಾರೆ. ಆದರೆ ಜಾದೂಗಾರ ಯಾವುದೇ ಶ್ರಮವಿಲ್ಲದೆ ಇದನ್ನು ಮಾಡಿ ತೋರಿಸಿ ಪ್ರೇಕ್ಷಕರನ್ನು ಸುಸ್ತು ಹೊಡೆಸುತ್ತಾನೆ.
ಇದನ್ನು ಹೇಗೆ ಮಾಡುವುದೆಂದು ನೀವೂ ತಲೆ ಕೆರೆದುಕೊಳ್ಳುತ್ತಿರಬಹುದಲ್ಲವೇ? ಇದರ ರಹಸ್ಯ ಹೇಳುತ್ತೇನೆ ಕೇಳಿ.
ಈ ಐಟಂಗೆ ಬೇಕಾಗಿರುವುದು ಒಂದು ಕುತ್ತಿಗೆ ಉದ್ದವಾಗಿರುವ ಅಪಾರದರ್ಶಕ ಬಾಟಲ್, ಸುಮಾರು ಕಾಲು ಇಂಚು ದಪ್ಪದ ಒಂದಡಿ ಹಗ್ಗ ಮತ್ತು ಕಾರ್ಕ್ ಅಥವಾ ರಬ್ಬರಿನ ಒಂದು ಚಿಕ್ಕ ಬಾಲ್. ಒಂದು ವೇಳೆ ಅಪಾರದರ್ಶಕ ಬಾಟಲ್ ಸಿಗದೇ ಇದ್ದಲ್ಲಿ ಯಾವುದೇ ಬಾಟಲಿಗೆ ಬಣ್ಣವನ್ನು ಕೊಡಬಹುದು.
ನೀವು ಈ ಐಟಂ ಅನ್ನು ಪ್ರದರ್ಶಿಸುವುದಕ್ಕೆ ಮೊದಲು ಕಾರ್ಕ್ ಅಥವಾ ರಬ್ಬರ್ ಬಾಲನ್ನು ನಿಮ್ಮ ಕೈಯಲ್ಲಿ ರಹಸ್ಯವಾಗಿ ಇಟ್ಟುಕೊಂಡಿರಬೇಕು. ಬಾಟಲನ್ನು ತೋರಿಸುವ ಸಮಯದಲ್ಲಿ ಈ ಬಾಲನ್ನು ಅದರೊಳಗೆ ಸೇರಿಸಿ. ನಂತರ ಹಗ್ಗದ ತುಂಡನ್ನು ಸುಮಾರು ಅರ್ಧದಷ್ಟು ಒಳಗೆ ಇಳಿಬಿಡಿ. ಹ್ರಾಂ, ಹ್ರೀಂ ಎಂದು ಮಂತ್ರ ಹೇಳುತ್ತಾ ಬಾಟಲನ್ನು ಉಲ್ಟಾ ಮಾಡಿ ಹಗ್ಗವನ್ನು ಸ್ವಲ್ಪವೇ ಜಗ್ಗಿ. ಈಗ ಒಳಗಿನ ಬಾಲ್ ಬಾಟಲಿಯ ಕುತ್ತಿಗೆ ಮತ್ತು ಹಗ್ಗದ ನಡುವೆ ಬಂದು ನಿಲ್ಲುತ್ತದೆ. (ಚಿತ್ರವನ್ನು ಗಮನಿಸಿ) ಹಗ್ಗದ ತುದಿಯನ್ನು ಹಿಡಿದುಕೊಂಡು ನಿಧಾನವಾಗಿ ಬಾಟಲನ್ನು ಜೋಕಾಲಿಯಂತೆ ತೂಗಿ. ಚಪ್ಪಾಳೆ ಗಿಟ್ಟಿಸಿ. ಕೊನೆಯಲ್ಲಿ ಬಾಟಲ್ ಮತ್ತು ಹಗ್ಗವನ್ನು ಮತ್ತೊಮ್ಮೆ ಪರೀಕ್ಷೆಗಾಗಿ ಕೊಡಬಹುದು. ಇದನ್ನು ಮಾಡಬೇಕಾದರೆ ಬಾಟಲಿಯನ್ನು ಮೇಲ್ಮುಖವಾಗಿ ಹಿಡಿದು ಹಗ್ಗವನ್ನು ಬಾಟಲಿಯೊಳಗೆ ಸ್ವಲ್ಪವೇ ತೂರಿ. ಆಗ ಬಾಲ್ ಬಾಟಲಿಯೊಳಗೆ ಬೀಳುತ್ತದೆ. ಹಗ್ಗವನ್ನು ಪರೀಕ್ಷಿಸಲು ಕೊಡಿ. ಬಾಟಲಿಯನ್ನು ಕೊಡಬೇಕಾದರೆ ಅದನ್ನು ಉಲ್ಟಾ ಮಾಡಿ ಬಾಲ್ ನಿಮ್ಮ ಕೈಯೊಳಗೆ ಬೀಳುವಂತೆ ಮಾಡಿ ಉಪಾಯವಾಗಿ ಜೇಬಿಗೆ ಸೇರಿಸಿ.
ನಿರೂಪಣೆ: ಉದಯ್ ಜಾದೂಗಾರ್