ವೇಣೂರು : 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜರ ಭವ್ಯಮಂಗಲ ಚಾತುರ್ಮಾಸ್ಯ ವರ್ಷಾಯೋಗವು ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಜೈನರ 23ನೇ ತೀರ್ಥಂಕರರಾದ ಭಗವಾನ್ 108 ಶ್ರೀ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣ (ಮುಕುಟ ಸಪ್ತಮಿ) ಆಚರಣೆ ಜರಗಿತು.
ವೇಣೂರು ಶ್ರೀರಾಮ ಭಜನಾ ಮಂದಿರದಿಂದ 24 ಪಲ್ಲಕ್ಕಿಗಳಲ್ಲಿ 24 ತೀರ್ಥಂಕರುಗಳ ಜಿನಬಿಂಬಗಳನ್ನು ಇಟ್ಟು ವಾದ್ಯ ಘೋಷಗಳೊದಿಗೆ ಶ್ರೀ ಬಾಹುಬಲಿ ಸಭಾಭವನದವರೆಗೆ ಭವ್ಯ ಮೆರವಣಿಗೆ ನಡೆಸಿ, ವೇದಿಕೆಯಲ್ಲಿ 24 ತೀರ್ಥಂಕರುಗಳ ಜಿನಬಿಂಬಗಳಿಗೆ ವಿವಿಧ ಗ್ರಾಮದ ಬಂಧುಗಳು ಪಂಚಾಮƒತ ಅಭಿಷೇಕವನ್ನು ನೆರವೇರಿಸಿದರು.
23ನೇ ತೀರ್ಥಂಕರ ಶ್ರೀ ಪಾರ್ಶ್ವನಾಥ ಸ್ವಾಮೀಜಿ 23 ಕೆ.ಜಿ ತೂಕದ ಲಾಡನ್ನು ಹರಾಜಿನ ಮೂಲಕ ಪಡೆದುಕೊಂಡ ಉಪ್ಪಿನಂಗಡಿಯ ವಜ್ರ ಕುಮಾರ್ ದಂಪತಿಗಳು ಶ್ರೀ ಸ್ವಾಮಿಗೆ ಸಮರ್ಪಿಸಿದರು. ಬಳಿಕ 5 ಕೆ.ಜಿ ತೂಕದ ಲಾಡನ್ನು ಹಾಸನದ ಮಹಾವೀರ್ ಜೈನ್ ಕುಟುಂಬಿಕರು, ಕರ್ನಾಟಕ ರಾಜ್ಯ ಜೈನ ಸ್ವಯಂಸೇವಕ ತಂಡದವರು, ಬೆಳ್ತಂಗಡಿಯ ಶ್ರೀ ಪದ್ಮಾವತಿ ಜೈನ ಸ್ವಸಹಾಯ ಸಂಘ ಹಾಗೂ ಉಜಿರೆಯ ಪದ್ಮಪ್ರಸಾದ್ ದಂಪತಿಗಳು ಪಡೆದುಕೊಂಡು ಶ್ರೀ ಸ್ವಾಮಿಗೆ ಸಮರ್ಪಿಸಿದರು. ಬೆಳ್ಳಿತಟ್ಟೆಯ ಆರತಿ ಸೇವೆಯನ್ನು ವೇಣೂರು ಬಾಹುಬಲಿ ಯುವಜನ ಸಂಘದ ಸದಸ್ಯರು ನೆರವೇರಿಸಿದರು.
ಪೂಜಾ ಕಾರ್ಯಕ್ರಮದ ಬಳಿಕ ಶ್ರೀ ಪ್ರಸಂಗ ಸಾಗರ ಮುನಿಮಹಾರಾಜರ ಮಂಗಲ ಪ್ರವಚನ ನೀಡಿ, ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಜೀವನಾದರ್ಶಗಳು ಸಮಾಜಕ್ಕೆ ಪ್ರೇರಣೆಯಾಗಲಿ, ನಾವೆಲ್ಲರೂ ಅವರ ಗುಣಗಳನ್ನು ಧಾರಣೆ ಮಾಡಿಕೊಳ್ಳುವುದರೊಂದಿಗೆ ಆತ್ಮಕಲ್ಯಾಣ ಮಾಡಿಕೊಳ್ಳೋಣ ಎಂದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಪ್ರಧಾನ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಯುವಜನತೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಇದರಿಂದ ಉತ್ತಮ ಚಾರಿತ್ರ್ಯವನ್ನು ರೂಪಿಸಿಕೊಳ್ಳಬಹುದು. ಜೈನಧರ್ಮದ ತತ್ವಗಳು ಸಮಾಜದ ಇತರರಿಗೂ ಪ್ರೇರಣೆಯಾಗಲಿ, ಮುನಿಶ್ರೀಯವರ ಚಾತುರ್ಮಾಸ್ಯ ಕಾರ್ಯಕ್ರಮಗಳು ಧರ್ಮಪ್ರಭಾವನೆಯನ್ನುಂಟು ಮಾಡಲೆಂದು ಹಾರೈಸಿದರು.
ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಕಾರ್ಯಕ್ರಮಕ್ಕೆ ಆಗಮಿಸಿ, ಮುನಿಶ್ರೀಯವರಿಗೆ ಶ್ರೀಫಲ ಸಮರ್ಪಿಸಿ ಆಶೀರ್ವಾದ ಪಡೆದರು. ಜೈನ ವಿದ್ವಾಂಸ ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡಿದರು. ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣರಾವ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ರಾಜ್ಯ ಜೈನ ಸ್ವಯಂಸೇವಕ ತಂಡದ ಸಂಚಾಲಕ ನೇಮಿರಾಜ ಆರಿಗ ಉಪಸ್ಥಿತರಿದ್ದರು. ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.