Advertisement
ನಿಮಿರು ದೌರ್ಬಲ್ಯವು ಜಾಗತಿಕವಾಗಿ ಲಕ್ಷಾಂತರ ಮಂದಿಯನ್ನು ಬಾಧಿಸುತ್ತದೆ, ಇದರಿಂದ ಅವರ ಜೀವನ ಗುಣಮಟ್ಟ ಮತ್ತು ಆಪ್ತ ಸಂಬಂಧದ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ತೃಪ್ತಿದಾಯಕವಾದ ಲೈಂಗಿಕ ಸಂಬಂಧವನ್ನು ಪೂರೈಸಲು ಅಗತ್ಯವಾದ ನಿಮಿರುವಿಕೆಯನ್ನು ಸಾಧಿಸಲು ಅಥವಾ ಕಾಯ್ದುಕೊಳ್ಳುವ ಅಸಾಮರ್ಥ್ಯವೇ ನಿಮಿರು ದೌರ್ಬಲ್ಯ.
Related Articles
Advertisement
ನಿಮಿರುವಿಕೆಯ ಆರೋಗ್ಯಕ್ಕಾಗಿ ಆಹಾರಾಭ್ಯಾಸ ಕಾರ್ಯತಂತ್ರ (ಮೆಡಿಟರೇನಿಯನ್ ಶೈಲಿಯ ಆಹಾರಾಭ್ಯಾಸ)
ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳು, ಕಡಿಮೆ ಪ್ರೊಟೀನ್ ಇರುವ ಮಾಂಸ ಮತ್ತು ಆರೋಗ್ಯಕರ ಕೊಬ್ಬಿನಂಶಗಳು ಸಂತೃಪ್ತಿದಾಯಕ ನಿಮಿರುವಿಕೆ ಆರೋಗ್ಯದ ತಳಹದಿಯಾಗಿದೆ. ಬಸಳೆ, ಟೊಮ್ಯಾಟೊ, ಬೆರಿ ಹಣ್ಣುಗಳು, ಕೊಬ್ಬಿರುವ ಮೀನು, ಬೀಜಗಳು ಮತ್ತು ಕಾಳುಗಳು ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮತ್ತು ಜನನಾಂಗ ಪ್ರದೇಶಕ್ಕೆ ರಕ್ತಪರಿಚಲನೆಯು ಚೆನ್ನಾಗಿ ನಡೆಯಲು ಅತ್ಯುತ್ತಮ ಆಯ್ಕೆಗಳಾಗಿವೆ.
ಸೂಕ್ಷ್ಮ ಪೋಷಕಾಂಶಗಳ ಪಾತ್ರ
ರಕ್ತನಾಳಗಳ ಕಾರ್ಯಚಟುವಟಿಕೆ, ನ್ಯುರೊಟ್ರಾನ್ಸ್‌ಮಿಟರ್ ಸಂಶ್ಲೇಷಣೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಸರಿಯಾಗಿ ಇರಿಸಿಕೊಳ್ಳುವ ಮೂಲಕ ನಿಮಿರು ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವಲ್ಲಿ ಕೆಲವು ಸೂಕ್ಷ್ಮ ಪೋಷಕಾಂಶಗಳು ಪ್ರಧಾನ ಪಾತ್ರ ವಹಿಸುತ್ತವೆ. ಟೆಸ್ಟೊಸ್ಟಿರೋನ್ ಸಂಶ್ಲೇಷಣೆ ಮತ್ತು ಎಂಡೊಥೇಲಿಯಲ್ ಕಾರ್ಯಚಟುವಟಿಕೆಗೆ ಝಿಂಕ್ ಒಂದು ಸಹ ಅಂಶವಾಗಿದ್ದು, ಇದು ಚಿಪ್ಪು ಮಾಂಸ ಮತ್ತು ಕೋಳಿಮಾಂಸ, ಮೊಟ್ಟೆಯಲ್ಲಿ ಸಮೃದ್ಧವಾಗಿದೆ. ಉರಿಯೂತ ನಿರೋಧಕ ಮತ್ತು ರಕ್ತನಾಳಗಳನ್ನು ವಿಕಸನಗೊಳಿಸುವ ಗುಣದಿಂದಾಗಿ ವಿಟಮಿನ್ ಡಿಯು ರಕ್ತನಾಳಗಳ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ ಮತ್ತು ನಿಮಿರು ದೌರ್ಬಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ.
ಸಂಭಾವ್ಯ ಅಪಾಯ ಕಾರಣಗಳಿಂದ ದೂರವಿರುವುದು
ಆಹಾರಾಭ್ಯಾಸದ ಕೆಲವು ಅಂಶಗಳು ನಿಮಿರು ದೌರ್ಬಲ್ಯಕ್ಕೆ ಕೊಡುಗೆ ನೀಡುತ್ತವೆ, ಹೀಗಾಗಿ ಅವುಗಳನ್ನು ಮಿತಿಯಲ್ಲಿ ಸೇವಿಸಬೇಕು ಅಥವಾ ಸಂಪೂರ್ಣವಾಗಿ ವರ್ಜಿಸಬೇಕು. ಸಂಸ್ಕರಿತ ಆಹಾರಗಳು, ಸಕ್ಕರೆ ಭರಿತ ಪಾನೀಯಗಳು ಅಥವಾ ಕೆಂಪು ಮಾಂಸ ಅಥವಾ ಹೆಚ್ಚು ಸ್ಯಾಚುರೇಟೆಡ್ ಹಾಗೂ ಟ್ರಾನ್ಸ್ ಫ್ಯಾಟ್ ಹೆಚ್ಚು ಇರುವ ಆಹಾರಗಳನ್ನು ಹೆಚ್ಚು ಸೇವಿಸುವುದು ಹೃದಯ – ರಕ್ತನಾಳ ವ್ಯೂಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಶಿಶ°ಕ್ಕೆ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಬಲ್ಲುದು. ಇಂತಹ ಆಹಾರಗಳನ್ನು ಕಡಿಮೆ ಮಾಡುವುದರ ಜತೆಗೆ ಸಂಪೂರ್ಣ, ಪೌಷ್ಟಿಕಾಂಶ ಸಮೃದ್ಧವಾಗಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ನಿಮಿರು ದೌರ್ಬಲ್ಯದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
ದೇಹದಲ್ಲಿ ದ್ರವಾಂಶ ಕಾಯ್ದುಕೊಳ್ಳುವುದರ ಪ್ರಾಮುಖ್ಯ
ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ದ್ರವಾಂಶ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಇದು ಲೈಂಗಿಕ ಆರೋಗ್ಯಕ್ಕೆ ಕೂಡ ಕೊಡುಗೆ ನೀಡುತ್ತದೆ. ಪ್ರಧಾನವಾಗಿ ನೀರು ಮತ್ತು ಇತರ ದ್ರವಾಹಾರಗಳನ್ನು ಕುಡಿಯುವ ಮೂಲಕ ದೇಹದಲ್ಲಿ ದ್ರವಾಂಶ ಕಾಪಾಡಿಕೊಳ್ಳುವುದರಿಂದ ರಕ್ತ ಪ್ರಮಾಣ ಹೆಚ್ಚುತ್ತದೆ. ಇದರಿಂದ ಕೆವರ್ನೋಸಲ್ ರಕ್ತನಾಳಗಳ ಸಹಿತ ಅಂಗಾಂಶ ಪ್ರವರ್ಧನೆ ಚೆನ್ನಾಗಿ ನಡೆದು ಶಿಶ° ನಿಮಿರುವುದಕ್ಕೆ ಸಹಾಯವಾಗುತ್ತದೆ. ವಿಶೇಷವಾಗಿ ದೈಹಿಕ ವ್ಯಾಯಾಮ, ದೈಹಿಕ ಶ್ರಮದ ಕೆಲಸಗಳು ಮತ್ತು ದೇಹದ ದ್ರವಾಂಶ ನಷ್ಟವಾಗುವಂತಹ ಪರಿಸರದಲ್ಲಿ ಸಂದರ್ಭದಲ್ಲಿ ಪುರುಷರು ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳುವುದಕ್ಕೆ ಗಮನ ನೀಡಬೇಕಿದೆ.
ನಿಮಿರು ದೌರ್ಬಲ್ಯವು ಪುರುಷರ ಒಟ್ಟಾರೆ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರಬಲ್ಲಂತಹ ಒಂದು ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆಯಾದರೂ ಜೀವನ ವಿಧಾನ ಮತ್ತು ಆಹಾರ ಶೈಲಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದು ಇದರ ತಡೆ ಮತ್ತು ಚಿಕಿತ್ಸೆಗೆ ಬುನಾದಿಗಳಾಗಿವೆ. ನಿಯಮಿತವಾದ ದೈಹಿಕ ವ್ಯಾಯಾಮ, ಒತ್ತಡ ನಿರ್ವಹಣೆಯಂತಹ ಜೀವನ ಶೈಲಿ ಬದಲಾವಣೆಗಳು ಹಾಗೂ ಪೌಷ್ಟಿಕಾಂಶ ಸಮೃದ್ಧ ಸಮತೋಲಿತ ಆಹಾರ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಪುರುಷರು ಸಂತೃಪ್ತಿದಾಯಕ ನಿಮಿರುವಿಕೆಯನ್ನು ಕಾಪಾಡಿಕೊಳ್ಳಬಹುದು ಹಾಗೂ ತಮ್ಮ ಲೈಂಗಿಕ ಜೀವನವನ್ನು ಚೆನ್ನಾಗಿರಿಸಿಕೊಳ್ಳಬಹುದಾಗಿದೆ.
-ಡಾ| ಸನ್ಮಾನ್ ಗೌಡ,
ಕನ್ಸಲ್ಟಂಟ್ ಯುರಾಲಜಿ
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಯುರಾಲಜಿ ವಿಭಾಗ, ಕೆಎಂಸಿ, ಮಂಗಳೂರು)