ರಾಮದುರ್ಗ: ತಾಲೂಕಿನಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದಾಗಿ ಸಾವಿರಾರು ಸಂಖ್ಯೆಯ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಗಳು ನೆಲಕಚ್ಚಿ ಕತ್ತಲಾಯಿತೆಂದರೆ ಜನ ಅಂಧಕಾರದಲ್ಲಿ ಕಾಲ ಕಳೆಯುವಂತಾಗಿದೆ.
ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ತ್ವರಿತಗತಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡರೂ, ಸಮರ್ಪಕವಾಗಿ ಕೆಲಸ ನಡೆದು ಪುರ್ನಗೊಳ್ಳಲು ಇನ್ನೂ ತಿಂಗಳು ಕಳೆಯಬೇಕಿದೆ.
ಪ್ರವಾಹದ ಹೊಡೆತಕ್ಕೆ ಮನೆ, ಆಸ್ತಿ, ಬೆಳೆಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಜನರು ನದಿ ಪ್ರವಾಹದ ನಂತರವಾದರೂ ಬಿತ್ತನೆ ಮಾಡಿ ನೀರು ಹಾಯಿಸಬೇಕೆಂಬ ಮಹದಾಸೆಯಲ್ಲಿದ್ದರು. ಇಂಥ ಸಂದರ್ಭದಲ್ಲಿ ರೈತ ಸಮೂಹಕ್ಕೆ ವಿದ್ಯುತ್ ಸಮಸ್ಯೆ ದುಬಾರಿಯಾಗಿ ಪರಿಣಮಿಸಿದೆ.
ತಾಲೂಕಿನ ಮಾಗನೂರ, ಮಲ್ಲಾಪೂರ, ಸುನ್ನಾಳ, ರಂಕಲಕೊಪ್ಪ, ಚಿಕ್ಕತಡಸಿ, ಹಿರೇತಡಸಿ, ಹಂಪಿಹೊಳಿ, ಅವರಾದಿ, ಹುಲಗೊಪ್ಪ, ಲಿಂಗದಾಳ, ಹಲಗತ್ತಿ ಹಾಗೂ ಪಟ್ಟಣದ ಕೆಲ ವಾರ್ಡ್‌ಗಳು ಸೇರಿದಂತೆ ಸುಮಾರು 29 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಈಗ ಈ ನದಿ ಪಾತ್ರದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹೆಸ್ಕಾಂ ಸಿಬ್ಬಂದಿಗೆ ಸಾಹಸದ ಕೆಲಸವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಂಬಗಳು, ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳು ನೆಲಕಚ್ಚಿದ್ದು ರೈತರ ಬೋರ್‌ವೆಲ್ಗಳಿಗೆ ಸಂಪರ್ಕ ಕಲ್ಪಿಸಲು ಪ್ರಯಾಸ ಪಡುವಂತಾಗಿದೆ.
•ಈರನಗೌಡ ಪಾಟೀಲ