Advertisement

ಕೃಷಿ ಅಗತ್ಯ ಅಲ್ಯೂಮಿನಿಯಂ ಏಣಿಗೆ ಜೀವರಕ್ಷಕ ಕವಚ

09:53 PM Jan 18, 2020 | mahesh |

ಕೃಷಿ ಭೂಮಿಯಲ್ಲಿ ಅಡಿಕೆ ಮರ, ತೆಂಗಿನ ಮರ ಏರುವವರಿಗೆ, ಸೊಪ್ಪು ಕಡಿಯಲು ಹಾಗೂ ಇತರ ಚಟುವಟಿಕೆಗಳಿಗೆ ಏಣಿ ಅತಿ ಅಗತ್ಯ. ಹಿಂದೆ ಬಿದಿರಿನ ಏಣಿ ಬಳಸುತ್ತಿದ್ದರೆ, ಈಗ ಅಲ್ಯೂಮಿನಿಯಂ ಏಣಿ ಕೃಷಿ ಭೂಮಿಗೆ ಲಗ್ಗೆ ಇಟ್ಟಿದೆ. ಒಂದಷ್ಟು ಅಪಾಯಕ್ಕೂ ಕಾರಣವಾಗಿದ್ದ ಅಲ್ಯೂಮಿನಿಯಂ ಏಣಿಗೆ ಈಗ ರಕ್ಷಾ ಕವಚವೂ ಬಂದಿದೆ.

Advertisement

ಅವಘಡ ಸಂಭವಿಸದು!
ತೋಟದೊಳಗೆ ಅಲ್ಯೂಮಿನಿಯಂ ಏಣಿಯನ್ನು ಅಚೀಚೆ ಒಯ್ಯುವಾಗ ವಿದ್ಯುತ್‌ ವಯರಿಗೆ ತಾಗಿ ಇನ್ನು ಅವಘಡ ಸಂಭವಿಸದು. ಬೊಳುವಾರಿನ ಎಸ್‌.ಆರ್‌.ಕೆ. ಅಲ್ಯೂಮಿನಿಯಂ ಫೈಬರ್ಸ್‌ ಸಂಸ್ಥೆಯು ಅಲ್ಯೂಮಿನಿಯಂ ಏಣಿಗೆ ವಿದ್ಯುತ್‌ ನಿರೋಧ ರಕ್ಷಾ ಕವಚವನ್ನು (ಇನ್ಸೂಲೇಶನ್‌) ತೊಡಿಸಿದ್ದಾರೆ. ವಿದ್ಯುತ್‌ ಶಾಕ್‌ಗೆ ಎಷ್ಟೋ ಜೀವ ಹಾನಿ ಸಂಭವಿಸಿದೆ. ಇದು ವಿದ್ಯುತ್‌ ಶಾಕ್‌ ಆಗುವುದನ್ನು ತಪ್ಪಿಸುತ್ತದೆ. ರಕ್ಷಾ ಕವಚ ಹೊದೆಸಿದ ಏಣಿಗಳನ್ನು ಇನ್ನು ನಿರ್ಭೀತಿಯಿಂದ ತೋಟದೊಳಗೆ ಬಳಸಬಹುದು.

ಈಗಾಗಲೇ ಮಾರುಕಟ್ಟೆಯಲ್ಲಿರುವ ಅಲ್ಯೂಮಿನಿಯಂ ಏಣಿಗೆ ಪೈಪು, ಮೆಟ್ಟಿಲು ಸೇರಿ ರಕ್ಷಾ ಕವಚವನ್ನು ತೊಡಿಸಿ ಕೊಡುವಂತಹ ನೂತನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಇವರಲ್ಲಿ ಹೊಸ ಅಲ್ಯೂಮಿನಿಯಂ ಏಣಿಯೂ ಲಭ್ಯ.

ಹೀಗೆ ತಯಾರಿ
ಮೂರಿಂಚು ವ್ಯಾಸದ ಪೈಪಿಗೆ ಇನ್ಸೂಲೇಶನ್‌ ಕವಚವನ್ನು ತೂರಿಸಿ, ಅದಕ್ಕೆ ಶಾಖ ಪ್ರಕ್ರಿಯೆಯನ್ನು ಮಾಡಿದಾಗ ಕವಚವು ಪೈಪಿಗೆ ಅಂಟಿಕೊಳ್ಳುತ್ತದೆ. ಇದೊಂದು ಹೊಸ ತಂತ್ರಜ್ಞಾನ. ಅಲ್ಯೂಮಿನಿಯಂ ಏಣಿಗೆ ರಕ್ಷಾ ಕವಚ ಹೊದೆಸಿರುವುದು ಇದೇ ಮೊದಲು. ಹಳೆಯ ಏಣಿಯು ಅದಾಗಲೇ ಸ್ಟೆಪ್‌ಗ್ಳನ್ನು ಹೊಂದಿರುವುದರಿಂದ ಅದಕ್ಕೆ ಪ್ರತ್ಯೇಕವಾಗಿ ಕವಚ ತೊಡಿಸಲು ಕಷ್ಟಸಾಧ್ಯ. ಕೆಲವೊಮ್ಮೆ ಹೆಚ್ಚು ಬಳಕೆ ಮಾಡಿದ್ದರಿಂದಾಗಿ ಏಣಿಗಳು ಬೆಂಡ್‌ ಆಗಿರುವ ಸಾಧ್ಯತೆಯೂ ಹೆಚ್ಚು. ಹಾಗಾಗಿ ಹೊಸ ಏಣಿಗೆ ಮಾತ್ರ ಇನ್ಸೂಲೇಶನ್‌ ಕವಚವನ್ನು ಹೊದೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಎಸ್‌.ಆರ್‌.ಕೆ. ಅಲ್ಯೂಮಿನಿಯಂ ಫೈಬರ್ನ ಸದಾಶಿವ ಭಟ್‌.

ಸಲೀಸಾಗಿ ಏರಬಹುದು
ಇಪ್ಪತ್ತು, ಹತ್ತು ಅಡಿ ಎತ್ತರದ ಎರಡು ಏಣಿಗಳನ್ನು ಒಂದಕ್ಕೊಂದು ಜೋಡಿಸಿಕೊಂಡರೆ ಸಲೀಸಾಗಿ ಮೂವತ್ತು ಅಡಿ ಎತ್ತರದ ಮರಗಳನ್ನು ಏರಬಹುದು. ಅಡಿಕೆ ಮರ, ತೆಂಗಿನಮರಗಳನ್ನು ಏರಬಹುದು. ಹೊಸ ತಂತ್ರಜ್ಞಾನದ ಇನ್ಸೂಲೇಶನ್‌ ಏಣಿಯು ಕೆಲವೇ ದಿನಗಳಲ್ಲಿ ಕೃಷಿಕರ ಕೈಗೆ ಲಭ್ಯವಾಗಲಿದೆ.

Advertisement

ಬೇಡಿಕೆಯಿದೆ
ಸಂಸ್ಥೆಯಲ್ಲಿ ಏಣಿಗೆ ಈಗಾಗಲೇ ಬುಕ್ಕಿಂಗ್‌ ಆರಂಭವಾಗಿದೆ. ಏಣಿಗೆ ರಕ್ಷಾಕವಚದ ಬಳಕೆಯನ್ನು ಮನಗಂಡು ಹಾಗೂ ಪ್ರಯೋಜನವನ್ನು ಅರಿತು ಅನೇಕರು ಉತ್ಸುಕರಾಗಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಏಣಿಯ ರಕ್ಷಾ ಕವಚ ಹೊದಿಕೆಯನ್ನು ಪರೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next