Advertisement

ಆಪತ್ಕಾಲದಲ್ಲಿ ಒದಗಿದ ಜೀವರಕ್ಷಕ ಆ್ಯಂಬುಲೆನ್ಸ್‌

02:32 AM Apr 28, 2020 | Sriram |

ಮಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆ ಸಂದರ್ಭ ಬಂದ ಸಿಡಿಲಿಗೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಗ್ರಾಮವೊಂದರಲ್ಲಿ ತಮಿಳುನಾಡು ಮೂಲದ ಧರ್ಮಪುರಿಯ ಮೂವರು ಕೂಲಿಕಾರ್ಮಿಕರು ಮೃತಪಟ್ಟರು. ಅನಾಥ ಶವಗಳ ಅಂತ್ಯಸಂಸ್ಕಾರವನ್ನು ನಡೆಸಲು ಕೋವಿಡ್ 19 ಕಾರಣದಿಂದ ಸಾಧ್ಯವಾಗಿರಲಿಲ್ಲ. ಈ ಆಪತ್ಕಾಲದಲ್ಲಿ ಉಪಯೋಗಕ್ಕೆ ಬಂದದ್ದು ಕರ್ಣಾಟಕ ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಕಳಸದ “ಕಾವೇರಿ ಮೆಮೋರಿಯಲ್‌ ಆಸ್ಪತ್ರೆಗೆ’ ನೀಡಿದ ಜೀವರಕ್ಷಕ ಉಪಕರಣಗಳನ್ನು ಹೊಂದಿದ ಆ್ಯಂಬುಲೆನ್ಸ್‌.

Advertisement

ಈ ಆ್ಯಂಬುಲೆನ್ಸ್‌ ಎರಡು ಹೊದಿಕೆಗಳ ಸಂಪೂರ್ಣ ಸುರಕ್ಷಾ ಕವಚಗಳನ್ನು ಹೊಂದಿದ್ದು, ಚಾಲಕನಿರುವ ಜಾಗ ಹಾಗೂ ರೋಗಿಗಳನ್ನು ಸಾಗಿಸುವ ಭಾಗ ಸಂಪೂರ್ಣ ಏರ್‌ಟೈಟ್‌ ಕ್ಯಾಬಿನ್‌ಗಳಾಗಿದ್ದು,ಚಾಲಕನಿಗೆ ರೋಗಿಯ ಸೋಂಕು ತಗಲುವ ಭಯವಿಲ್ಲ.

ಈ ವಾಹನವನ್ನು ಆಪತ್ಕಾಲದಲ್ಲಿ ಬಳಸಿಕೊಳ್ಳಬಹುದೆಂಬ ವಿಚಾರ ಹೊಳೆದುದು ಕಾವೇರಿ ಮೆಮೋರಿಯಲ್‌ ಆಸ್ಪತ್ರೆಯ ವೈದ್ಯ ಡಾ| ವಿಕ್ರಮ ಪ್ರಭು ಅವರಿಗೆ. ಅಗತ್ಯ ದಾಖಲೆಗಳೊಂದಿಗೆ ತಮಿಳುನಾಡು ಮೂಲದ ಚಾಲಕ ಮಣಿ ಅವರು 450 ಕಿ.ಮೀ. ದೂರದ ಧರ್ಮಪುರಿಗೆ ಆ್ಯಂಬು
ಲೆನ್ಸ್‌ ಚಾಲನೆಗೆ ಸಿದ್ಧರಾದರು. ಬೆಳಗ್ಗೆ 10 ಗಂಟೆಗೆ ಹೊರಟ ವಾಹನ ಧರ್ಮಪುರಿ ತಲುಪಿದ್ದು ಮಾರನೆಯ ದಿನ ಮುಂಜಾವ 4 ಗಂಟೆಗೆ. ಕೇವಲ ನಾಲ್ಕೇ ನಿಮಿಷಗಳಲ್ಲಿ ಶವಗಳನ್ನಿಳಿಸಿ ವಾಪಸು ಹೊರಟ ಮಣಿ ಆ್ಯಂಬುಲೆನ್ಸ್‌ನ ಕ್ಯಾಬಿನ್‌ನಿಂದ ಹೊರಗೆ ಇಳಿಯಲೇ ಇಲ್ಲ. ಮಾರನೇ ದಿನ ಕಳಸಕ್ಕೆ ಬಂದು ತಲುಪಿದಾಗ ಅಪರಾಹ್ನ 3 ಗಂಟೆಯಾಗಿತ್ತು. ತತ್‌ಕ್ಷಣವೇ ವಾಹನವನ್ನು ತೊಳೆದು ಶುದ್ಧಗೊಳಿಸಿ, ಔಷಧ ಸಿಂಪಡಿಸಿ ಪ್ಯುಮಿಗೇಷನ್‌ ಮಾಡಲಾಯಿತು ಎಂದು ಡಾ| ವಿಕ್ರಮ ಪ್ರಭು ತಿಳಿಸುತ್ತಾರೆ.

ಈ ಆ್ಯಂಬುಲೆನ್ಸನ್ನು ಎಂಆರ್‌ಪಿಎಲ್‌ ಸಂಸ್ಥೆ ದಾನ ಮಾಡಿದ್ದು, ಸುಮಾರು 12 ಲಕ್ಷ ರೂ. ಮೊತ್ತದ ವಿಶೇಷ ಜೀವರಕ್ಷಕ ಉಪಕರಣಗಳನ್ನು ಕರ್ಣಾಟಕ ಬ್ಯಾಂಕ್‌ ನೀಡಿತ್ತು. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದು ಏಕೈಕ ವಿಶೇಷ ಜೀವರಕ್ಷಕ ಉಪಕರಣಗಳುಳ್ಳ ವಾಹನವಾಗಿದೆ.

ಕಳಸದ ಡಾ| ವಿಕ್ರಮ ಪ್ರಭು ಅವರಿಂದ ಈ ವಿಷಯ ತಿಳಿದು ನಾನು ಮೂಕವಿಸ್ಮಿತನಾದೆ. ನಮ್ಮ ಬ್ಯಾಂಕಿನ ಸಾಂಸ್ಥಿಕ ಜವಾಬ್ದಾರಿಯ ಸೌಲಭ್ಯಗಳು ಸಂಕಷ್ಟದ ಸನ್ನಿವೇಶದಲ್ಲೂ ಸ್ಥಳೀಯವಾಗಿ ಸದುಪಯೋಗ ಆಗುತ್ತಿರುವ ಸುದ್ದಿಗಳು ನಮ್ಮನ್ನು ಪುಳಕಿತಗೊಳಿಸುವುದರೊಂದಿಗೆ ಈ ಮಾರ್ಗದಲ್ಲಿ ಇನ್ನಷ್ಟು ಉತ್ಸಾಹದಿಂದ ಮುನ್ನಡೆಯಲು ಪ್ರೇರಣೆಯಾಗುತ್ತದೆ.
– ಮಹಾಬಲೇಶ್ವರ ಎಂ.ಎಸ್‌.,
ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next