ನಮ್ಮ ಅದೃಷ್ಟದಲ್ಲಿ ಯಾವುದು ನಮಗೆ ಸಿಗುವುದಿಲ್ಲವೋ, ಅದುವೇ ನಮ್ಮ ಹೃದಯಕ್ಕೆ ತುಂಬಾ ಇಷ್ಟವಾಗುತ್ತದಂತೆ. ಅದಕ್ಕೇ ಇರಬೇಕು; ನೀನು ನನಗೆ ಸಿಗುವುದು, ನಾವು ಜೊತೆಯಾಗಿ ಬಾಳುವುದು ಸಾಧ್ಯವೇ ಇಲ್ಲ ಅಂತ ತಿಳಿದಿದ್ದರೂ ನನ್ನ ಹುಚ್ಚು ಹೃದಯ ನಿನ್ನನ್ನೇ ಬಯಸುತಿರುವುದು. ನೀನೇ ಬೇಕೆಂದು ಹಠ ಹಿಡಿದಿದಿರುವುದು.
ನೀನು ನನಗೆ ಮಾತ್ರ ಸ್ವಂತ, ನನ್ನ ಹೃದಯದ ಅರಸ ಅಂತೆಲ್ಲಾ ಹುಚ್ಚು ಕನಸು ಕಂಡ ಮರುಕ್ಷಣವೇ ವಾಸ್ತವದ ಅರಿವಾಗುತ್ತದೆ. ಪ್ರೀತಿಗೆ ಜಾತಿ, ಅಂತಸ್ತು, ಸೌಂದರ್ಯ ಅಡ್ಡಿಯಾಗದು. ಎರಡು ಹೃದಯಗಳ ಪರಸ್ಪರ ನಂಬಿಕೆ, ಕಾಳಜಿಯೇ ಪ್ರೀತಿಗೆ ಬುನಾದಿ ಅಂತ ನಂಬಿದವಳು ನಾನು. ಆದರೆ, ವಾಸ್ತವ ಜಗತ್ತು ಇದನ್ನು ಮಾನ್ಯ ಮಾಡೋದಿಲ್ಲ. ನನ್ನ ಕಂಗಳಿಗೆ ನಿನ್ನನ್ನು ಬಿಟ್ಟು ಬೇರೆ ಯಾರೂ ಕಾಣುತ್ತಿಲ್ಲ. ಹೃದಯಕ್ಕೆ ನಿನ್ನನ್ನು ಬಿಟ್ಟು ಬೇರೆಯವರನ್ನು ಒಪ್ಪಿಕೊಳ್ಳುವುದೂ ಸಾಧ್ಯವಿಲ್ಲ. ಬದುಕಿನ ಬಂಡಿಯಲ್ಲಿ ನಿನ್ನ ಜೊತೆ ಪ್ರಯಾಣಿಸುವ ಅದೃಷ್ಟ ಇಲ್ಲದೇ ಹೋದರೂ, ನಿನ್ನ ಮನಸ್ಸಿನಲ್ಲಿ ನನಗೊಂದು ಜಾಗವಿದೆಯಲ್ಲ; ಆ ನೆನಪಿನಲ್ಲಿಯೇ ಬಾಳುತ್ತೇನೆ.
ಬದುಕು ಎಷ್ಟು ವಿಚಿತ್ರ ನೋಡು; ಪ್ರಪಂಚದಲ್ಲಿ ಅದೆಷ್ಟೇ ಜನ ಇದ್ರೂ, ಪ್ರೀತಿ ಹುಟ್ಟೋದು ಮಾತ್ರ ಸಿಗದೇ ಇರೋ ಆ ಒಬ್ಬರ ಮೇಲೆ. ಇಷ್ಟಪಟ್ಟಿದ್ದೆಲ್ಲ ಸಿಗುವುದಾದರೆ ಕಣ್ಣೀರಿಗೆ ಬೆಲೆ ಎಲ್ಲಿದೆ? ಸಿಕ್ಕಿದ್ದೆಲ್ಲವನ್ನೂ ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ ಎಲ್ಲಿದೆ, ಅಲ್ವಾ?
ನೀನು ಸಿಗೋದಿಲ್ಲ ಅನ್ನೋ ನೋವಿಗಿಂತ, ನಿನ್ನ ಮರೆಯೋಕೆ ಆಗ್ತಾ ಇಲ್ಲ ಅನ್ನೋ ನೋವೇ ಪ್ರತಿ ಕ್ಷಣ ನನ್ನನ್ನು ಕೊಲ್ಲುತ್ತಿದೆ. ನಿನ್ನ ಜೊತೆ ಎಷ್ಟೇ ಕಿತ್ತಾಡಿದ್ರೂ ನೀನೇ ಬೇಕು ಅಂತ ಹಠ ಹಿಡಿಯೋ ಜೀವ ಇದು. ನಿನ್ನ ನೆನಪಿಸಿಕೊಳ್ಳದ ದಿನವಿಲ್ಲ, ನಿನ್ನ ಪ್ರೀತಿಸದೇ ಇರುವ ಕ್ಷಣವಿಲ್ಲ, ನೀನಿಲ್ಲದೇ ನಾನಿಲ್ಲ.
ಇಂತಿ ನಿನ್ನ ಹೃದಯವಾಸಿ
ಉಮ್ಮೆ ಅಸ್ಮ ಕೆ. ಎಸ್