“ಸಾವಿರ ರೂಪುಗಳುಳ್ಳ ಕಾಯಿಲೆ’ ಎಂಬುದಾಗಿಯೂ ಬಣ್ಣಿಸಲಾಗುವ ಲೂಪಸ್ ಜಾಗತಿಕವಾಗಿ ಲಕ್ಷಾಂತರ ಮಂದಿಯನ್ನು ಬಾಧಿಸುವ ಒಂದು ಸಂಕೀರ್ಣ ಅನಾರೋಗ್ಯ. ಈ ಲೇಖನದಲ್ಲಿ ಈ ಕಾಯಿಲೆಯ ಆರಂಭಿಕ ಲಕ್ಷಣಗಳು, ರೋಗಪತ್ತೆ ಮತ್ತು ನಿರ್ವಹಣ ಕಾರ್ಯತಂತ್ರಗಳನ್ನು ವಿವರಿಸಲಾಗಿದೆ.
ಸಿಸ್ಟೆಮಿಕ್ ಲೂಪಸ್ ಎರಿತಮಾಟೋಸಸ್ (ಎಸ್‌ಎಲ್‌ಇ/ ಲೂಪಸ್) ಎಂದರೇನು?
ಇದು ದೇಹದ ಯಾವುದೇ ಅಂಗವನ್ನು ಬಾಧಿಸಬಹುದಾದ ಒಂದು ಆಟೊಇಮ್ಯೂನ್ ಕಾಯಿಲೆ. ಆಟೊಇಮ್ಯೂನ್ ಕಾಯಿಲೆ ಎಂದರೆ ದೇಹದ ರೋಗ ನಿರೋಧಕ ಶಕ್ತಿಯು ಪ್ರಮಾದವಶಾತ್ ದೇಹದ ಮೇಲೆಯೇ ಆಕ್ರಮಣ ಮಾಡುವ ಸ್ಥಿತಿ. ಇಲ್ಲಿ ರೋಗ ನಿರೋಧಕ ಶಕ್ತಿಯು ಸೋಂಕುಗಳ ವಿರುದ್ಧ ಹೋರಾಡುವುದರ ಬದಲಾಗಿ ದೇಹದ ಅಂಗಾಂಗಗಳ ಮೇಲೆ ದಾಳಿಗಿಳಿಯುತ್ತದೆ.
ಯಾರಿಗೆ ಲೂಪಸ್ ಉಂಟಾಗಬಹುದು?
ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಲೂಪಸ್ ಹೆಚ್ಚು ಉಂಟಾಗುತ್ತದೆ. ಇದು ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದರೂ 16ರಿಂದ 55ರ ವಯೋಮಾನದವರಲ್ಲಿ ಉಂಟಾಗುವ ಸಾಧ್ಯತೆ ಹೆಚ್ಚು.
ಲೂಪಸ್ ಉಂಟಾಗಲು ಕಾರಣವೇನು?
ಲೂಪಸ್ ಉಂಟಾಗುವುದಕ್ಕೆ ನಿರ್ದಿಷ್ಟ ಕಾರಣವೆಂದೇನೂ ಇಲ್ಲ. ದೇಹದ ರೋಗ ನಿರೋಧಕ ಶಕ್ತಿಯನ್ನು ಬಾಧಿಸುವ ಅಸಹಜ ವಂಶವಾಹಿಗಳ ಸಂಯೋಜಿತ ಕಾರಣದಿಂದ ಇದು ಕಾಣಿಸಿಕೊಳ್ಳುತ್ತದೆ. ವೈರಾಣು ಸೋಂಕು, ಸೂರ್ಯನ ಬೆಳಕು, ಒತ್ತಡ ಮತ್ತು ಕೆಲವು ಔಷಧಗಳಿಂದ ಇದು ಪ್ರಚೋದನೆಗೊಳ್ಳಬಹುದು.
ಎಸ್‌ಎಲ್‌ಇಯ ಚಿಹ್ನೆಗಳೇನು?
1. ದಣಿವು.
2. ಸಂಧಿನೋವು ಮತ್ತು ಬಾವು, ಬೆಳಗಿನ ಸಮಯದಲ್ಲಿ ಇದು ಹೆಚ್ಚುತ್ತದೆ.
3. ಮುಖದಲ್ಲಿ ಚಿಟ್ಟೆಯ ಆಕಾರದ ಕಲೆಗಳು ಉಂಟಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದು ಹೆಚ್ಚುತ್ತದೆ. ಜತೆಗೆ ಬಾಯಿ ಹುಣ್ಣು, ತಲೆಕೂದಲು ಅತಿಯಾಗಿ ಉದುರುವುದು.
4. ಲಘುವಾದ ಜ್ವರ.
5. ಎದೆನೋವು ಮತ್ತು ಆಳವಾಗಿ ಉಸಿರೆಳೆದುಕೊಂಡಾಗ ಕಷ್ಟ.
6. ಉಸಿರಾಡಲು ಕಷ್ಟವಾಗುವುದು.
7. ಸ್ಮರಣ ಶಕ್ತಿ ನಷ್ಟ, ತಲೆನೋವು, ಖನ್ನತೆ, ಸೈಕೋಸಿಸ್, ಸೆಳವುಗಳು.
8. ಪದೇ ಪದೆ ಗರ್ಭಪಾತವಾಗುವುದು.
ಲೂಪಸ್ ದೃಢಪಡಿಸಿಕೊಳ್ಳುವುದು ಹೇಗೆ?
- ರೂಢಿಗತ ಪರೀಕ್ಷೆಗಳ ಹೊರತಾಗಿ, ಎಎನ್‌ಎ, ಸಿ3 ಸಿ4, ಆ್ಯಂಟಿ-ಡಿಎಸ್‌ಡಿಎನ್‌ಎ – ಇವುಗಳು ಲೂಪಸ್‌ನ್ನು ದೃಢಪಡಿಸಿಕೊಳ್ಳುವುದಕ್ಕೆ ನಡೆಸಲಾಗುವ ಕೆಲವು ಪರೀಕ್ಷೆಗಳು. ಎಎನ್‌ಎ ಪಾಸಿಟಿವ್ ಫಲಿತಾಂಶ ಬಂದ ಎಲ್ಲರಿಗೂ ಲೂಪಸ್ ಇರುವುದಿಲ್ಲ. ಲೂಪಸ್ ದೃಢಪಡಿಸಿಕೊಳ್ಳಲು ಪರೀಕ್ಷಾ ಫಲಿತಾಂಶವನ್ನು ರುಮಟಾಲಜಿಸ್ಟ್ ವ್ಯಾಖ್ಯಾನಿಸಬೇಕು.
- ಎಲ್ಲ ಅಂಗಾಂಗಗಳ ವಿವರವಾದ ತಪಾಸಣೆಯನ್ನು ನಡೆಸಲಾಗುತ್ತದೆ. ಶ್ವಾಸಕೋಶಗಳ ತಪಾಸಣೆಗೆ ಎದೆಯ ಎಕ್ಸ್‌ರೇ, ಹೃದಯದ ತಪಾಸಣೆಗೆ ಎಕೋ ಮತ್ತು ಮೂತ್ರಪಿಂಡಗಳ ತಪಾಸಣೆಗೆ ಮೂತ್ರ ಪರೀಕ್ಷೆ ನಡೆಸಲಾಗುತ್ತದೆ.
ಲೂಪಸ್‌ಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ?
ಆರಂಭಿಕ ಹಂತಗಳಲ್ಲಿ ಇದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ಮಧುಮೇಹ, ಅಧಿಕ ರಕ್ತದೊತ್ತಡಗಳಂತೆಯೇ ಔಷಧಗಳನ್ನು ದೀರ್ಘಕಾಲ ತೆಗೆದುಕೊಳ್ಳಬೇಕಾಗಿರುತ್ತದೆ. ಉಪಯೋಗಿಸುವ ಕೆಲವು ಔಷಧಗಳಲ್ಲಿ ಎಚ್‌ಸಿಕ್ಯು, ಮೈಕೊನೊಲೇಟ್, ಸೈಕ್ಲೊಫಾಸ್ಫಮೈಡ್ ಸೇರಿವೆ. ಕಳೆದ 10 ವರ್ಷಗಳಲ್ಲಿ ಚಿಕಿತ್ಸಾ ವಿಧಾನಗಳಲ್ಲಿ ಆಗಿರುವ ಪ್ರಗತಿಯಿಂದಾಗಿ ಲೂಪಸ್ ರೋಗಿಗಳಿಗೆ ನೀಡುವ ಚಿಕಿತ್ಸೆಯ ಫಲಿತಾಂಶವು ಸಾಕಷ್ಟು ಉತ್ತಮವಾಗಿರುತ್ತದೆ.
ಲೂಪಸ್ ಕಾಯಿಲೆಯೊಂದಿಗೆ ಬದುಕುವುದಕ್ಕಾಗಿ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಡುಗಳೇನು?
- ಸರಿಯಾದ ಸಮಯಕ್ಕೆ ಚಿಕಿತ್ಸೆ ಒದಗಿಸಿದರೆ ಲೂಪಸ್ ರೋಗಿಗಳು ಎಲ್ಲರಂತೆ ಜೀವಿಸಬಹುದಾಗಿದೆ. ವಿವಾಹಿತ ಯುವತಿಯರು ವೈದ್ಯಕೀಯ ಪರಿವೀಕ್ಷಣೆಯಡಿ ಸಂತಾನೋತ್ಪತ್ತಿ ಆಯ್ಕೆಗಳನ್ನು ಪರಿಗಣಿಸಬಹುದಾಗಿದೆ.
- ಜೀವನ ಶೈಲಿ ಬದಲಾವಣೆಗಳು: ಅತಿಯಾದ ಸೂರ್ಯದ ಬೆಳಕಿಗೆ ಒಡ್ಡಿಕೊಳ್ಳುವಂತಹ ಲೂಪಸ್ ಪ್ರಚೋದಕಗಳನ್ನು ತಪ್ಪಿಸಿಕೊಳ್ಳುವುದು, ಸನ್‌ಸ್ಕ್ರೀನ್ ಹಚ್ಚಿಕೊಳ್ಳುವುದು, ಸಮತೋಲಿತ ಆಹಾರಶೈಲಿ ಅನುಸರಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಜೀವನ ಗುಣಮಟ್ಟವನ್ನು ವೃದ್ಧಿಸಿಕೊಳ್ಳಬಹುದಾಗಿದೆ.
- ನೆರವು ಮತ್ತು ಹೊಂದಿಕೊಳ್ಳುವುದು: ಲೂಪಸ್ ರೋಗಿಗಳಿಗೆ ನೆರವು ಗುಂಪುಗಳಿವೆ. ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆಯಿಂದ ಲೂಪಸ್‌ನೊಂದಿಗೆ ಬದುಕುವ ಭಾವನಾತ್ಮಕ ಮತ್ತು ಮನಶಾಸ್ತ್ರೀಯ ಅಂಶಗಳನ್ನು ನಿಭಾಯಿಸಬಹುದಾಗಿದೆ.
ಕೊನೆಯದಾಗಿ
ಲೂಪಸ್ ಕಾಯಿಲೆಗೆ ತುತ್ತಾಗಿ ಜೀವಿಸುವುದು ಸವಾಲು ನಿಜವಾದರೂ ಸರಿಯಾದ ಚಿಕಿತ್ಸೆ, ಆರೈಕೆ ಮತ್ತು ನೆರವಿನಿಂದ ಅನೇಕ ಮಂದಿ ಲೂಪಸ್ ರೋಗಿಗಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬಹುದಾಗಿದೆ. ಲೂಪಸ್ ಬಗ್ಗೆ ಸಂಶೋಧನೆ, ಅಧ್ಯಯನ ಮುಂದುವರಿದಿದ್ದು, ಚಿಕಿತ್ಸೆಯಲ್ಲಿ ಆಗುತ್ತಿರುವ ಪ್ರಗತಿ, ರೋಗದ ಬಗ್ಗೆ ತಿಳಿವಳಿಕೆಗಳು ಲೂಪಸ್ ರೋಗಿಗಳ ಭವಿಷ್ಯಕ್ಕೆ ಆಶಾಕಿರಣಗಳಾಗಿವೆ. ನಿಮಗೆ ಲೂಪಸ್ ಇದೆ ಎಂಬ ಸಂಶಯ ನಿಮಗಿದ್ದರೆ ಅಥವಾ ನೀವು ಲೂಪಸ್ ಹೊಂದಿರುವುದು ದೃಢವಾಗಿದ್ದರೆ ಈ ಅನಾರೋಗ್ಯವನ್ನು ನಿಭಾಯಿಸುತ್ತ ಬದುಕುವುದಕ್ಕೆ ವೈದ್ಯಕೀಯ ಸಲಹೆ ಪಡೆಯುವುದು ಮತ್ತು ಬಲವಾದ ಸಾಮಾಜಿಕ ಬೆಂಬಲ ಜಾಲವನ್ನು ರೂಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
–
ಡಾ| ಪ್ರತ್ಯುಷಾ ಮಣಿಕುಪಮ್,
ಅಸಿಸ್ಟೆಂಟ್ ಪ್ರೊಫೆಸರ್
-ಡಾ| ಶಿವರಾಜ್ ಪಡಿಯಾರ್
ಅಸೋಸಿಯೇಟ್ ಪ್ರೊಫೆಸರ್
ಕ್ಲಿನಿಕಲ್ ಇಮ್ಯುನಾಲಜಿ ಮತ್ತು ರುಮಟಾಲಜಿ ವಿಭಾಗ,
ಕೆಎಂಸಿ ಅತ್ತಾವರ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು,ಕ್ಲಿನಿಕಲ್ ಇಮ್ಯುನಾಲಜಿ ಮತ್ತು ರುಮಟಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)