Advertisement
ಭಾರತದಲ್ಲಿ ಸೋಂಕು ಪತ್ತೆಹಚ್ಚಲು ಇದುವರೆಗೂ 20ಲಕ್ಷಕ್ಕಿಂತ ಅಧಿಕ ಟೆಸ್ಟ್‌ಗಳನ್ನು ನಡೆಸಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಮೇ ಅಂತ್ಯದ ವೇಳೆಗೆ ಇಷ್ಟೊಂದು ಟೆಸ್ಟ್‌ಗಳನ್ನು ನಡೆಸಬೇಕು ಎಂದು ಭಾರತ ಗುರಿ ಹಾಕಿಕೊಂಡಿತ್ತಾದರೂ, ದೇಶದ ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳ ಅವಿರತ ಪರಿಶ್ರಮದಿಂದಾಗಿ, ಈ ಪ್ರಮಾಣದ ಪರೀಕ್ಷೆಗಳು ಬೇಗನೆ ಸಾಧ್ಯವಾದವು.
Related Articles
Advertisement
ಕೋವಿಡ್ ಕೂಡ ಎಚ್‌ಐವಿಯಂತೆ ನಮ್ಮ ನಡುವೆಯೇ ಇರುವಂತಾಗಬಹುದು, ಅದು ತಗುಲದಂತೆ ಎಚ್ಚರಿಕೆಯ ಕ್ರಮಗಳನ್ನು ಪಾಲಿಸಬೇಕಷ್ಟೇ ಎಂಬ ಎಚ್ಚರಿಕೆಯು ನಿರಾಶೆ ಹುಟ್ಟಿಸುವಂಥ ಸಂಗತಿಯೇ. ಹಾಗೆಂದು, ಇದೇ ಸತ್ಯವಾಗಬೇಕು ಎಂದೇನೂ ಇಲ್ಲ.
ಈಗಾಗಲೇ ಹಲವು ಸಂಶೋಧನೆಗಳು ಆರಂಭಿಕ ಹಂತದಲ್ಲಿ ಪ್ರಾಣಿಗಳ ಮೇಲೆ ಯಶಸ್ಸು ತೋರಿದ್ದು, ಹ್ಯೂಮನ್ ಟ್ರಯಲ್ಸ್‌ನ ನಂತರ ಏನಾಗುತ್ತದೋ ನೋಡಬೇಕು. ಈ ವಿಚಾರದಲ್ಲಿ ಹೆಚ್ಚು ಆಶಾವಾದ ಅಥವಾ ನಿರಾಶಾವಾದ ಎರಡೂ ಅಗತ್ಯವಿಲ್ಲ.
ಲಸಿಕೆ ಲಭ್ಯವಾಗಲಿ ಬಿಡಲಿ, ನಮ್ಮ ಸುರಕ್ಷತೆಯಲ್ಲಿ ನಾವಿರುವುದು ಅತ್ಯಗತ್ಯ. ಜನವರಿ ತಿಂಗಳಿಂದ ವಿಶ್ವಾದ್ಯಂತ ಹಲವು ದೇಶಗಳು ಒಂದರ್ಥದಲ್ಲಿ ಲಾಕ್‌ಡೌನ್‌ನಲ್ಲಿಯೇ ಇವೆ. ಅಂತಾರಾಷ್ಟ್ರೀಯ ವಿಮಾನಯಾನಗಳು ನಿಂತಿವೆ, ಸಾಮಾಜಿಕ ಅಂತರದ ಪಾಲನೆಯಿಂದ ಹಿಡಿದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನಗಳು ನಡೆದೇ ಇವೆ.
ಆದರೆ ಹೆಚ್ಚು ದಿನಗಳವರೆಗೆ ಲಾಕ್‌ಡೌನ್ ಅನ್ನು ಮುಂದುವರಿಸುವುದು ಯಾವ ದೇಶದ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ ಎನ್ನುವುದನ್ನು ಜಾಗತಿಕ ವಿತ್ತ ಪರಿಸ್ಥಿತಿಯ ದುಃಸ್ಥಿತಿ ಸಾರುತ್ತಿದೆ. ಹೀಗಾಗಿ, ಭಾರತದಲ್ಲೂ ಉದ್ಯೋಗ ಕ್ಷೇತ್ರ ಸೇರಿದಂತೆ, ಆರ್ಥಿಕ ಚಕ್ರಕ್ಕೆ ಮರುಚಾಲನೆ ನೀಡುವ ಕೆಲಸಗಳೂ ವೇಗಪಡೆದಿವೆ.
ನಿಸ್ಸಂಶಯವಾಗಿಯೂ ಇದು ಮಾನವಕುಲಕ್ಕೆ ಬಂದೆರಗಿರುವ ಅತಿದೊಡ್ಡ ಕಂಟಕವೇ ಸರಿ. ಆದರೆ, ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ರೂಢಿಸಿಕೊಳ್ಳದೇ ಮೊದಲಿನಂತೆಯೇ ಅಜಾಗರೂಕತೆಯಿಂದ ಬದುಕಿದರೆ ಈ ಕಂಟಕದ ಜಟಿಲತೆ ಮತ್ತಷ್ಟು ಹೆಚ್ಚುತ್ತದೆ ಎನ್ನುವುದನ್ನು ಮರೆಯದಿರೋಣ.