Advertisement

ಜೀವಜಲವೀಗ ವಿಷಕಾರಿ ಜಾಲ

12:57 PM Oct 31, 2017 | |

ಹುಬ್ಬಳ್ಳಿ: ಗಣೇಶ ವಿಗ್ರಹಗಳನ್ನು ವಿಸರ್ಜಿಸುವುದರಿಂದ ಜಲಮೂಲಗಳು ಹಾಳಾಗುತ್ತವೆ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಕೆರೆ, ಬಾವಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಹೆಚ್ಚುತ್ತಿದೆ. ಗಣೇಶ ವಿಸರ್ಜನೆ ಮುನ್ನ, ಗಣೇಶ ವಿಸರ್ಜನೆ ಸಂದರ್ಭ ಹಾಗೂ ನಂತರದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅವಳಿನಗರದ ಐದು ಪ್ರಮುಖ ಕೆರೆ  ಹಾಗೂ ಬಾವಿಗಳ ನೀರು ಹಾಗೂ ಮಣ್ಣಿನ ನಮೂನೆ ಪರೀಕ್ಷೆ ಮಾಡಿದ ವರದಿಯಲ್ಲಿ ಹಾನಿಕಾರಕ ರಾಸಾಯನಿಕಗಳ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ. 

Advertisement

ಹುಬ್ಬಳ್ಳಿಯ ಗಾಜಿನಮನೆ ಪಕ್ಕದ ಬಾವಿ, ಉಣಕಲ್‌ ಕೆರೆ, ಹೊಸೂರಿನ ಟ್ಯಾಂಕ್‌, ಧಾರವಾಡದ ನುಚ್ಚಂಬ್ಲಿ ಬಾವಿ, ಕೆಲಗೇರಿ ಕೆರೆಯ ನೀರಿನ ಮಾದರಿ ಪಡೆದು ಪರೀಕ್ಷಿಸಲಾಗಿದೆ. ಇಂದಿರಾ ಗಾಜಿನಮನೆ ಬಾವಿಯಲ್ಲಿ ಕ್ಷಾರ ಗುಣ ಸರಾಸರಿ 7.4 ಮಿಲಿಗ್ರಾಂ/ ಲೀಟರ್‌ಗೆ ಕಂಡುಬಂದಿದ್ದರೆ, ಉಣಕಲ್‌ ಕೆರೆಯಲ್ಲಿ ಸರಾಸರಿ 8.36 ಮಿಲಿಗ್ರಾಂ, ಹೊಸೂರು ಟ್ಯಾಂಕ್‌ನಲ್ಲಿ ಸರಾಸರಿ 8.26 ಕಂಡು ಬಂದಿದೆ.

ಧಾರವಾಡದ ನುಚ್ಚಂಬ್ಲಿ ಬಾವಿಯಲ್ಲಿ ಸರಾಸರಿ 7.56 ಮಿಲಿಗ್ರಾಂ ಕಂಡು ಬಂದಿದೆ. ಕಳೆದ ವರ್ಷದ ವರದಿಗೆ ಹೋಲಿಸಿದರೆ ಈ ಬಾರಿ ನೈಟ್ರೇಟ್‌, ಫೆರಸ್‌, ತೇಲಾಡುವ ಕಣಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಫಾಸೆ#àಟ್‌, ಒಟ್ಟು ಕರಗಿದ ಕಣಗಳ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.

2016ನೇ ಸಾಲಿನಲ್ಲಿ ಸರಾಸರಿ 0.37 ಮಿಲಿಗ್ರಾಂ ಫೆರಸ್‌ ಪತ್ತೆಯಾಗಿದ್ದರೆ, ಈ ವರ್ಷ 1.87 ಮಿಲಿಗ್ರಾಂ ಪತ್ತೆಯಾಗಿದೆ. ಅದೇ ರೀತಿ ನೈಟ್ರೇಟ್‌ ಕಳೆದ ವರ್ಷ 2.35 ಮಿಲಿಗ್ರಾಂ ಪತ್ತೆಯಾಗಿದ್ದರೆ, ಈ ವರ್ಷ 7.17 ಮಿಲಿಗ್ರಾಂ ಪತ್ತೆಯಾಗಿದೆ. ಅದೇ ರೀತಿ ಜಲಮೂಲಗಳಲ್ಲಿನ ಮಣ್ಣು ಪರೀಕ್ಷೆ ಮಾಡಲಾಗಿದ್ದು,

ಹೊಸೂರ ಕೆರೆಯಲ್ಲಿ ಗರಿಷ್ಠ 205 ಮಿಲಿಗ್ರಾಂ/ಕೆಜಿ ಹಾಗೂ ಉಣಕಲ್‌ ಕೆರೆಯಲ್ಲಿ 93.5 ಮಿಲಿಗ್ರಾಂ/ಕೆಜಿ ವಿಷಕಾರಿ ಸೀಸ ಕಂಡುಬಂದಿದೆ. ಕಳೆದ ಬಾರಿ ಗರಿಷ್ಠ ಸೀಸದ ಅಂಶ ಉಣಕಲ್‌ ಕೆರೆಯಲ್ಲಿ 62.1 ಮಿಲಿಗ್ರಾಂ ಇರುವುದು ಪತ್ತೆಯಾಗಿತ್ತು. ಗಣೇಶ ಮೂರ್ತಿಗಳಿಗೆ ಹಚ್ಚುವ ಮೆಟ್ಯಾಲಿಕ್‌ ಕಲರ್‌ಗಳು ಸೀಸ ಸೇರಿದಂತೆ ಹಾನಿಕಾರಕ ರಾಸಾಯನಿಕದ ಪ್ರಮಾಣವನ್ನು ಹೆಚ್ಚಿಸುತ್ತವೆ.

Advertisement

ಆಮ್ಲಜನಕವೇ ಇದಕ್ಕೆ ಮುಖ್ಯ ಕಾರಣ: ನೀರಿನಲ್ಲಿರುವ ಆಮ್ಲಜನಕದ ಪ್ರಮಾಣ ಕಡಿಮೆಯಾದರೆ ಅದರಿಂದ ನೀರು ಮಲಿನವಾಗುತ್ತದೆ. ಮಾಲಿನ್ಯ ಹೆಚ್ಚಾದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಪ್ರಕೃತಿ ತನ್ನ ನ್ಯೂನತೆಯನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. 

ಮಳೆಯ ಪ್ರಮಾಣ ಹೆಚ್ಚಾದಂತೆ ಆಮ್ಲಜನಕದ ಪ್ರಮಾಣ ಹೆಚ್ಚಾಗುವುದು. ಇದರಿಂದ ಖನಿಜ ಪದಾರ್ಥಗಳು ಕರಗಿದ ನೀರು ಡೆಲ್ಯೂಟ್‌ ಆಗುತ್ತದೆ. ಇದರಿಂದ ಜಲಮಾಲಿನ್ಯ ಪ್ರಮಾಣ ಕಡಿಮೆಯಾಗುವುದು. ಮಳೆ ಬೀಳುವ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. 

ಮಾಲಿನ್ಯದ ಪ್ರಮಾಣ ಕಡಿಮೆಯಾಗಿದ್ದರೆ ಕೆರೆ, ಬಾವಿಗಳಲ್ಲಿ ಮೊದಲಿನ ಸ್ಥಿತಿ ಬರಲು ಹಲವು ತಿಂಗಳುಗಳು ಬೇಕಾಗುತ್ತವೆ. ಆದರೆ ಮಾಲಿನ್ಯದ ಪ್ರಮಾಣ ಹೆಚ್ಚಾದರೆ ಅದು ನೀರಿನ ಮೂಲಕ ಭೂಮಿಗೆ ಸೇರಿಕೊಳ್ಳುತ್ತದೆ. ಅಂತರ್ಜಲವನ್ನು ಸೇರಿ ಮತ್ತೆ ದೇಹ ಸೇರುವ ಅಪಾಯವಿರುತ್ತದೆ.

ಜನರಲ್ಲಿ ಜಾಗೃತಿ: ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಪರಿಸರದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸಂಘ-ಸಂಸ್ಥೆಗಳ ಸಹಯೋಗ ದಲ್ಲಿ ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. 

ಇದರಿಂದ 1 ಅಡಿಗಿಂತ ಕಡಿಮೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಲ್ಲಿ ಪಿಒಪಿ ಮೂರ್ತಿಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು. ಮಂಡಳಿ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗೆ ಹುಬ್ಬಳ್ಳಿಯಲ್ಲಿ 3 ಹಾಗೂ ಧಾರವಾಡದಲ್ಲಿ 2 ಸೇರಿದಂತೆ ಒಟ್ಟು 5 ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. 

ಅವಳಿ ನಗರದಲ್ಲಿ ಸುಮಾರು 51,000 ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರೆ, ಸುಮಾರು 31,000 ಪಿಒಪಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. 2-3 ವರ್ಷಗಳ ಹಿಂದೆ ಶೇ. 60ರಷ್ಟು ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು.

* ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next