ಚಿಕ್ಕೋಡಿ: ಕಷ್ಟಪಟ್ಟ ಕಟ್ಟಿದ ಮನಿ ಕಣ್ಣುಮುಂದ ಮುಳುಗಿ ಹೋಯಿತು. ಮಕ್ಕಳಾಂಗ ಬೆಳೆಸಿದ ಬೆಳಿ ನೀರಪಾಲಾಯಿತು. ಬಂಗಾರದಂತಹ ಬಾಳ್ವೆ ಬೀದಿಗೆ ಬಿತ್ತು. ನಮ್ಮೂರು ನೀರಪಾಲಾಗಿ ನಮ್ಮನ್ನು ಜೀವಂತ ಕೊಂದ ಹಾಕಿತ್ರೀ, ನಿಮ್ಮ ಪರಿಹಾರ ನಮಗ ಬ್ಯಾಡರ್ರೀ, ನಮ್ಮ ಸಾಲ ಮನ್ನಾ ಮಾಡಬೇಕು ಮತ್ತು ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಕೃಷ್ಣಾ ನದಿ ತೀರದ ಕಲ್ಲೋಳ ಗ್ರಾಮಸ್ಥರು ಪ್ರವಾಹ ಭೀಕರೆತೆಯಲ್ಲಿ ಮನೆ ಮಠ ಕಳೆದುಕೊಂಡ ಸಂತ್ರಸ್ತರ ನೋವಿನ ಮಾತುಗಳು.
ಕೃಷ್ಣಾ, ದೂಧಗಂಗಾ ಸಂಗಮ ಸ್ಥಳವಾದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮವು ಪ್ರವಾಹದಲ್ಲಿ ಸಂಪೂರ್ಣ ಮುಳುಗಿರುವ ಗ್ರಾಮ. ಈಗ ಪ್ರವಾಹ ಇಳಿದ ಮೇಲೆ ಸ್ವ-ಗ್ರಾಮಕ್ಕೆ ತೆರಳಿ ಪ್ರವಾಹದಿಂದ ಉಂಟಾದ ಹಾನಿಯನ್ನು ನೋಡಿ ಮಮ್ಮಲನೆ ಮರುಗುತ್ತಾ ಇಂತಹ ಸಂಕಷ್ಟ ಮುಂದ ಯಾರಿಗೂ ಬರಬಾರದು ರೀ ಎಂದು ಕಣ್ಣಿರು ಹಾಕಿದರು.
ನಾವ್ ರೈತರು, ನಮಗ ಹೊಲದ ಕೆಲಸ ಬಿಟ್ರೆ ಬ್ಯಾರೇ ಯಾವುದು ಗೊತ್ತಿಲ್ಲರ್ರೀ. ಆದ್ರ ಹಿರಿಹೊಳಿ ಪ್ರವಾಹದಿಂದ ನಮ್ ಬದುಕನ್ನು ಮೂರಾಬಟ್ಟೆ ಮಾಡಿ ಬಿಟ್ಟೈತ್ರಿ. ಹೊಳಿಗಿ ನೀರ ಹೆಚ್ಚಾಗಾನಾ ಉಟ್ ಬಟ್ಟಿ ಮ್ಯಾಲ ಊರ್ ಬಿಟ್ಟಿವು. ಆದ್ರ ಈಗ ಬಂದು ನೋಡಿದ್ರ ಎಲ್ಲ ಸತ್ಯಾನಾಸ್ ಆಗಿದ್ರೆ ಎಂದು ಸಂತ್ರಸ್ತರು ಅಳಲು ವ್ಯಕ್ತಪಡಿಸಿದರು.
ನೀರಿನ ಹೊಡೆತಕ್ಕೆ ವಸ್ತುಗಳು ಹಾಳು: ಕೃಷ್ಣಾ ನದಿ ಪ್ರವಾಹ ಇಳಿಮುಖವಾಗಿ ಗ್ರಾಮದಲ್ಲಿನ ನೀರು ಕಡಿಮೆಯಾಗಿದ್ದರಿಂದ ಕಳೆದ ಎರಡು ದಿನಗಳಿಂದ ಕಲ್ಲೋಳ ಗ್ರಾಮದ ಸಂತ್ರಸ್ತರು ಪರಿಹಾರ ಕೇಂದ್ರದಿಂದ ಗ್ರಾಮಗಳತ್ತ ಹೊಗುತ್ತಿದ್ದಾರೆ. ಆದರೆ ಪ್ರವಾಹದಿಂದ ಉಂಟು ಮಾಡಿದ ಅವಾಂತರ ಸಂತ್ರಸ್ತರನ್ನು ಮತ್ತಷ್ಟು ಹೈರಾಣಾಗಿಸಿದೆ. ಮನೆಗಳಲ್ಲಿ ಎರಡೆರಡು ಅಡಿಯಷ್ಟು ಕೆಸರು ತುಂಬಿಕೊಂಡಿದೆ. ಬಟ್ಟೆ, ಹಾಸಿಗೆಗಳೆಲ್ಲ ನೀರಿನ ಹೊಡೆತಕ್ಕೆ ಸಿಲುಕಿ ಹಾಳಾಗಿ ಹೋಗಿವೆ.ಕೆಲ ಮನೆಗಳ ವಸ್ತುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.
ಕಲ್ಲೋಳ ಗ್ರಾಮವು ತಗ್ಗು ಪ್ರದೇಶದಲ್ಲಿ ಇರುವುದರಿಂದ ಗ್ರಾಮದಲ್ಲಿ ಹೆಚ್ಚಿನ ನೀರು ನುಗ್ಗಿದೆ. ಹೀಗಾಗಿ ಮಣ್ಣಿನ ಸುಮಾರು ನೂರಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ. ಕೆಲವೊಂದು ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ. ಕೆಲವು ಸಿಮೆಂಟ ಮನೆಗಳಲ್ಲಿ ಬಿರುಕು ಬಿಟ್ಟಿದೆ. ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮೈದಾನದಲ್ಲಿ ಸಾಕಷ್ಟು ನೀರು ನಿಂತುಕೊಂಡಿದೆ. ಶಾಲೆ ಆರಂಭವಾಗಲು ಇನ್ನು ಎರಡು ದಿನ ಬೇಕು. ಶಾಲೆಯಲ್ಲಿರುವ ಪ್ರಮುಖ ದಾಖಲಾತಿಗಳು, ಸಾಮಗ್ರಿಗಳು ನೀರಿನಲ್ಲಿ ಹಾನಿಯಾಗಿವೆ.
ಜಾನುವಾರು ಬದುಕಿಸಿಕೊಳ್ಳುವುದು ದೊಡ್ಡ ಸವಾಲು: ಯಾರು ಕಂಡರೀಯದ ಭೀಕರ ಪ್ರವಾಹದಿಂದ ಹೊಲ-ಮನೆ ಮುಳುಗಿವೆ. ಜಮೀನುಗಳಲ್ಲಿದ್ದ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿ ಸಂಪೂರ್ಣ ಹಾನಿಯಾಗಿದೆ. ಇದರಿಂದ ಜಾನುವಾರಗಳಿಗೆ ಮೇವಿನ ಸಮಸ್ಯೆ ಉಲ್ಭಣಗೊಂಡಿದೆ.
ಅಗತ್ಯ ವಸ್ತುಗಳು ನೀರುಪಾಲು:
ಕಳೆದ 2005 ಮತ್ತು 2006ರಲ್ಲಿ ಬಂದಿರುವ ಪ್ರವಾಹಕ್ಕಿಂತ ಇದು ಭಯಾನಕವಾಗಿದೆ. ಅಂದು ಮನೆ ಮುಳುಗಿತ್ತು. ಇಂದು ಮನೆ ಮತ್ತು ಮನೆಯಲ್ಲಿನ ವಸ್ತುಗಳನ್ನು ಕಸಿದುಕೊಂಡಿದೆ. ಇಂತಹ ಪ್ರವಾಹಕ್ಕೆ ಸಿಕ್ಕು ನಮ್ಮ ಬದುಕು ನೀರಪಾಲಾಗಿದೆ. ಮನೆ ಬಿದ್ದಿದೆ. ಮನೆಯಲ್ಲಿನ ಉಪ್ಪು, ಸಕ್ಕರೆ ಹಿಡಿದು ಜೀವನಕ್ಕೆ ಬೇಕಾಗುವ ಪ್ರತಿಯೊಂದು ವಸ್ತುಗಳನ್ನು ಖರೀದಿ ಮಾಡಬೇಕಾಗಿದೆ. ಮನೆಯಲ್ಲಿದ್ದ ಜೋಳ, ಬೆಳೆ, ಅಕ್ಕಿ ಹಾಳಾಗಿವೆ. ಮನೆ ವಸ್ತುಗಳು, ಕೃಷಿ ಚಟುವಟಿಕೆ ವಸ್ತುಗಳು ಎಲ್ಲವು ನೀರಿನ ಪಾಲಾಗಿವೆ ಎಂದು ಗ್ರಾಮದ ಚಂದ್ರಕಾಂತ ಪಾಟೀಲ ನೋವು ತೊಡಿಕೊಂಡರು.
•ಮಹಾದೇವ ಪೂಜೇರಿ