Advertisement

ಬದುಕೇ ಕೊಚ್ಚಿಹೋಯ್ತು

12:03 PM Aug 11, 2019 | Team Udayavani |

ನರಗುಂದ: ಗದಗ ಮತ್ತು ಬೆಳಗಾವಿ ಜಿಲ್ಲೆಗಳ ಗಡಿಭಾಗವಾಗಿರುವ ತಾಲೂಕಿನ ಲಖಮಾಪುರ ಗ್ರಾಮದ ಗೋಳು ಇನ್ನೂ ತೀರದಾಗಿದೆ. ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡು ನಡುಗಡ್ಡೆಯಾಗಿರುವ ಈ ಗ್ರಾಮದ ಏಕೈಕ ಮುಖ್ಯ ರಸ್ತೆಯೂ ಕೊಚ್ಚಿಕೊಂಡು ಹೋದ ಪರಿಣಾಮ ಪ್ರವಾಹ ತೀರಿದರೂ ಹೊರಪ್ರಪಂಚಕ್ಕೆ ಇದು ಇನ್ನೂ ದೂರವಾಗಿದೆ.

Advertisement

ನರಗುಂದ ಕೇಂದ್ರ ಸ್ಥಾನದಿಂದ 25 ಕಿಮೀ ದೂರದ ಲಖಮಾಪುರ ಮಲಪ್ರಭಾ ನದಿ ಪ್ರವಾಹಕ್ಕೆ ಪ್ರಥಮವಾಗಿ ಧಕ್ಕೆಯಾಗುವ ಗ್ರಾಮ. ನದಿಯಿಂದ ಕೇವಲ ಅರ್ಧ ಕಿಮೀಗೂ ಕಡಿಮೆ ಅಂತರದಲ್ಲಿರುವ ಗ್ರಾಮ ಮೂರು ದಿನಗಳಿಂದ ಸಂಪೂರ್ಣ ಜಲಾವೃತ ಗೊಂಡಿದೆ. ಗ್ರಾಮದ ಮುಂಭಾಗ ಸೇತುವೆ ಎರಡೂ ಕಡೆಗೆ 100 ಮೀಟರ್‌ಗೂ ಹೆಚ್ಚು ರಸ್ತೆ ಕೊಚ್ಚಿಹೋಗಿದೆ.

ಪ್ರವಾಹ ಪೂರ್ವವೇ ಇಲ್ಲಿನ ಎಲ್ಲ ಗ್ರಾಮಸ್ಥರನ್ನು ಸ್ಥಳಾಂತರ ಮಾಡಿದ್ದರಿಂದ ಜಾನುವಾರು ಸಹಿತ ಒಂದು ನರಪಿಳ್ಳೆಯೂ ಗ್ರಾಮದಲ್ಲಿ ಉಳಿದಿಲ್ಲ. ಪ್ರವಾಹ ತೀರಿದ ಬಳಿಕ ವಾಹನ ಮಾತ್ರವಲ್ಲ ಜನರು ನಡೆದುಕೊಂಡು ಹೋಗಲೂ ಈ ಗ್ರಾಮಕ್ಕೆ ಅವಕಾಶ ಇಲ್ಲದಂತಾಗಿದ್ದು, ಗ್ರಾಮಸ್ಥರನ್ನು ಚಿಂತೆಗೀಡಾಗಿಸಿದೆ.

ಗ್ರಾಮದಲ್ಲಿ 1100 ಜನಸಂಖ್ಯೆ ಹೊಂದಿದ್ದು, 250 ಮನೆಗಳಿವೆ. ಗ್ರಾಮ ವ್ಯಾಪ್ತಿಗೆ 208 ಎಕರೆ ಕೃಷಿ ಭೂಮಿಯಿದ್ದು, ಕಬ್ಬು, ಗೋವಿನಜೋಳ, ಹತ್ತಿ, ಈರುಳ್ಳಿ, ಕಾಯಿಪಲ್ಯೆ ಬೆಳೆ ಸಂಪೂರ್ಣ ಜಲಾವೃತಗೊಂಡಿವೆ.

ಸ್ಥಳಾಂತರ ಬೇಡಿಕೆ: ಹಿಂದಿನಿಂದಲೂ ಗ್ರಾಮ ಸ್ಥಳಾಂತರಕ್ಕೆ ವಿರೋಧಿಸಿದ್ದ ಲಖಮಾಪುರ ಗ್ರಾಮಸ್ಥರು ಈ ಬಾರಿಯ ಪ್ರವಾಹ ಭೀಕರತೆಗೆ ಸ್ಥಳಾಂತರವೇ ಸೂಕ್ತವೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಗಡಿ ಭಾಗದಲ್ಲಿದ್ದರೂ ನರಗುಂದ ತಾಲೂಕು ವ್ಯಾಪ್ತಿಗೆ ಒಳಪಡುವ ಇಚ್ಛೆ ಹೊಂದಿದ ಗ್ರಾಮಸ್ಥರು ಕೂಡಲೇ ನಮ್ಮ ಗ್ರಾಮ ಸ್ಥಳಾಂತರ ಮಾಡಿ ನಮ್ಮ ಬದುಕು ಕಟ್ಟಿಕೊಡಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

Advertisement

 

ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next