Advertisement
ಕಳೆದ ಒಂದು ತಿಂಗಳಿನಿಂದ ಬೀಳುತ್ತಿರುವ ಮಳೆಗೆ ಮೈಯೊಡ್ಡಿ ನಿಂತಿರುವ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಈಗ ಎಲ್ಲೆಲ್ಲೂ ಅಚ್ಚ ಹಸಿರಿನ ಮೈಸಿರಿ. ಸಮೃದ್ಧಿಯಾಗಿರುವ ತುಂಬಿರುವ ಕೆರೆ ಕಟ್ಟೆಗಳು. ಸ್ವಚ್ಚಂದವಾಗಿ ವಿಹರಿಸುವ ವನ್ಯ ಜೀವಿಗಳು ಮತ್ತು ಪಕ್ಷಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
Related Articles
Advertisement
ಬೆಂಕಿಯಿಂದ ಒಣಗಿ ನಿಂತಿದ್ದ ಮರಗಿಡಗಳು ಈ ಬಾರಿ ಉತ್ತಮ ಮಳೆಯಿಂದಾಗಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿವೆ. ಎತ್ತ ನೋಡಿದರೂ ದಟ್ಟ ಹಸಿರಿನ ಹೊದಿಕೆ ಹೊದ್ದ ಬಂಡೀಪುರ ವನ್ಯ ಜೀವಿ ಪ್ರಿಯರಲ್ಲಿ ಮಂದಹಾಸ ಮೂಡಿಸುತ್ತಿದೆ.
ಕಾಡೆಲ್ಲಾ ಸುಟ್ಟುಹೋಗಿತ್ತು: ಕಳೆದ ಫೆಬ್ರವರಿಯಲ್ಲಿ ಕಿಡಿಗೇಡಿಗಳ ಕಿಚ್ಚಿಗೆ ಮೂವತ್ತು ಸಾವಿರಕ್ಕೂ ಹೆಚ್ಚು ಎಕರೆಯಷ್ಟು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಬೂದಿಯಾಗಿತ್ತು. ಎಲ್ಲೆಲ್ಲೂ ಒಣಗಿದ ಮತ್ತು ಅರ್ಧಂಬರ್ಧ ಬೆಂದ ಮರಗಳು ಕಾಣಿಸುತ್ತಿದ್ದವು. ಆದರೆ, ಈಗ ಅರಣ್ಯದ ಈ ಹಿಂದಿನ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ 874ಕ್ಕೂ ಹೆಚ್ಚು ಕೆರೆ ಕಟ್ಟೆಗಳು ಈ ಬಾರಿಯ ಉತ್ತಮವಾದ ಮಳೆಯಿಂದ ತುಂಬಿ ತುಳುಕುತ್ತಿವೆ. ಈ ಮೂಲಕ ವನ್ಯ ಜೀವಿಗಳ ನೀರಿನ ತೊಂದರೆ ನೀಗಿದಂತಾಗಿದೆ. ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರದ ಅರಣ್ಯ ಮತ್ತು ಬೆಟ್ಟ ಗುಡ್ಡಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.-ಬಾಲಚಂದ್ರ, ಬಂಡೀಪುರ ಹುಲಿಯೋಜನೆ ನಿರ್ದೇಶಕರು ಬಂಡೀಪುರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕಾಣದಷ್ಟು ಸಂಖ್ಯೆಯಲ್ಲಿ ಜಿಂಕೆ, ಆನೆ, ನವಿಲು, ಕಾಡುಹಂದಿ, ಚಿರತೆ ಹಾಗೂ ಹುಲಿಗಳು ಕಂಡುಬರುತ್ತಿವೆ. ಸಫಾರಿ ಹಾಗೂ ಮಧುಮಲೆ ಮಾರ್ಗದಲ್ಲಿಯೂ ಹೆಚ್ಚಿನ ವನ್ಯಜೀವಿಗಳು ದರ್ಶನ ನೀಡುತ್ತಿದ್ದು ಬಂಡೀಪುರ ಉದ್ಯಾನವನದ ಹಿರಿಮೆ ಸಾರುತ್ತಿದೆ. ಡಿಸೆಂಬರ್‌ನಲ್ಲಿ ಬಂಡೀಪುರವನ್ನು ನೋಡುವುದೇ ಆನಂದ.
-ಜಿ.ಎಸ್.ಗಣೇಶ್ ದರ್ಶನ್, ಪರಿಸರ ಪ್ರೇಮಿ, ಗುಂಡ್ಲುಪೇಟೆ * ಸೋಮಶೇಖರ್