Advertisement
ಕಬ್ಬು, ಗೋವಿನಜೋಳ,ಭತ್ತ, ಸೋಯಾ ಅವರೆ ಸೇರಿದಂತೆ ಬಿತ್ತನೆಯಾದ ತಿಂಗಳಲ್ಲಿ ಜಡಿಮಳೆ ಹಿಡಿದಿದ್ದರಿಂದ ಬೆಳೆಗಳ ಮಧ್ಯೆ ವಿಪರೀತ ಕಳೆ ಬೆಳೆದು ನಿಂತಿದೆ. ಒಂದೆಡೆ ಉತ್ತಮ ಮಳೆ ಸಾತ್ ಕೊಟ್ಟಿದ್ದಕ್ಕೆ ರೈತರು ಖುಷಿ ಡುವಷ್ಟರಲ್ಲಿ, ಮಳೆಯಿಂದ ಬೆಳೆ ಮಧ್ಯೆ ರಾಕ್ಷಸನ ಸ್ವರೂಪದಲ್ಲಿ ಕಳೆ, ಕಸ ಬೆಳೆದು ನಿಂತಿದೆ. ಇದನ್ನು ತೆಗೆದು ಹಾಕುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಕಳೆ ತೆಗೆಯಲು ಆಳುಗಳ ಕೊರತೆ ಎದುರಾಗಿದ್ದು, ರೈತರೆಲ್ಲರೂ ಸುಲಭದ ದಾರಿ ಹುಡುಕುತ್ತಿದ್ದು, ಇದಕ್ಕೆಲ್ಲ ಪರಿಹಾರವಾಗಿ ರೈತರು ಕಳೆನಾಶಕಗಳ ಸಿಂಪರಣೆಗೆ ಮೊರೆ ಹೋಗಿದ್ದಾರೆ.
Related Articles
Advertisement
ಇಲ್ಲಿಯವರೆಗೆ ಹೊಲದಲ್ಲಿನ ಕಳೆಯನ್ನು ಕೂಲಿಯಾಳು, ಎತ್ತುಗಳಿಂದ ಕೃಷಿ ಉಪಕರಣ ಬಳಸಿ(ರೆಂಟೆ, ಕುಂಟೆ, ಕೊಡ್ಡ ಬಳಸಿ) ಕಳೆನಾಶ ಮಾಡುತ್ತಿದ್ದರು. ಕೆಲವು ಸಲ ಟ್ರ್ಯಾಕ್ಟರ್ ಗಳಿಂದಲೂ ಮಾಡುವುದಕ್ಕೆ ಅವಕಾಶವಿರುತ್ತದೆ. ಆದರೆ ಕಳೆದ ಐದು ವರ್ಷಗಳ ಹಿಂದೆ ಎರಡು ಕಂಪನಿಗಳು ಅಭಿವೃದ್ಧಿ ಪಡಿಸಿದ ಕಳೆನಾಶಕಗಳು ಇಂದು ಕಳೆನಾಶಕ್ಕೆ ಬರೀ ವಿಷ ಸಿಂಪರಣೆಯೊಂದೇ ದಾರಿ ಎನ್ನುವ ಹಂತಕ್ಕೆತಂದು ನಿಲ್ಲಿಸಿವೆ. ಮೂರು ವರ್ಷಗಳಲ್ಲಿ ಬರೊಬ್ಬರಿ ವಿವಿಧ ಕಂಪನಿಗಳ 12ಕ್ಕೂ ಹೆಚ್ಚು ಅಪಾಯಕಾರಿ ಕಳೆನಾಶಕಗಳು ಮಾರುಕಟ್ಟೆಗೆ ಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಳೆನಾಶಕಗಳ ಮಾರಾಟವೂ ಜೋರಾಗಿ ನಡೆದಿದೆ.ಇದರರ್ಥ ಈ ವರ್ಷ ರೈತರು ಭೂಮಿಯಲ್ಲಿನ ಕಳೆ ತೆಗೆದು ಹಾಕಲು ಅತೀ ಹೆಚ್ಚಿನ ವಿಷವನ್ನೇ ಸಿಂಪರಿಸುತ್ತಿದ್ದಾರೆ.
ಜೀವ ವೈವಿಧ್ಯಕ್ಕೆ ಧಕ್ಕೆ: ಕಳೆನಾಶಕದಿಂದ ಬರೀ ಕಳೆ ಮತ್ತು ಬೇಡವಾದ ಹುಲ್ಲು ನಾಶವಾಗುತ್ತಿಲ್ಲ. ಬದಲಿಗೆ ಅದರ ಅಕ್ಕಪಕ್ಕ ಹರಿದಾಡುವ ಸರಿಸೃಪಗಳು, ಮಣ್ಣಲ್ಲಿನ ಅಣುಜೀವಿಗಳು ಕೂಡ ನಾಶವಾಗುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಲ್ಲಿ ಪಕ್ಷಿಗಳು ಕೂಡ ಸಾಯುತ್ತಿವೆ. ಹುಲಕೊಪ್ಪ, ಹಸರಂಬಿ ಗ್ರಾಮದ ಬಳಿಯ ಬೇಡ್ತಿ ಹಳ್ಳದ ಸುತ್ತ ಸಿಂಪರಿಸಿದ ಕಳೆನಾಶಕದಲ್ಲಿ ಸುತ್ತಾಡಿದ ನವಿಲುಗಳು ಮೃತಪಟ್ಟಿವೆ. ಕಬ್ಬಿನ ತೋಟಕ್ಕೆ ಕಳೆನಾಶಕ ಸಿಂಪರಿಸಿದ ಮರುದಿನವೇ ಹಾವುಗಳು ರಸ್ತೆ ಬದಿಗೆ ಬಂದು ಸಾಯುತ್ತಿವೆ. ಇನ್ನು ಕಪ್ಪೆ, ಬಸವನ ಹುಳು, ಎರೆಹುಳುಗಳು ಕೂಡಾ ಸಾಯುತ್ತಿವೆ. ಇದು ಹೀಗೆ ಮುಂದುವರಿದರೆ ರೈತರು ಇನ್ನೊಂದು ಹೊಸ ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುತ್ತಿದ್ದಾರೆ ಕೃಷಿ ತಜ್ಞರು.
13ಕ್ಕೂ ಹೆಚ್ಚುಜಾನುವಾರು ಸಾವು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಕಳೆನಾಶಕ ಹೊಡೆದ ಹುಲ್ಲು, ಮೇವು ತಿಂದು 13ಕ್ಕೂ ಅಧಿಕ ಜಾನುವಾರು ಮೃತಪಟ್ಟಿವೆ. ಮೊದಲೇ ಜಾನುವಾರುಗಳಿಗೆ ಜೀವವಿಮೆ ಸರಿಯಾಗಿ ನೀಡುತ್ತಿಲ್ಲ. ಇನ್ನು ಎರಡ್ಮೂರು ಜಾನುವಾರುಗಳನ್ನಿಟ್ಟುಕೊಂಡು ಹೈನುಗಾರಿಕೆ ಮಾಡುತ್ತಿರುವ ಬಡ ರೈತ ಕುಟುಂಬಗಳಲ್ಲಿನ ಜಾನುವಾರುಗಳು ಸಾಯುತ್ತಿರುವುದು ರೈತರನ್ನು ಮತ್ತಷ್ಟು ಕಂಗಾಲು ಮಾಡಿದೆ. ಕಲಘಟಗಿ ತಾಲೂಕಿನ ದೇವಿಕೊಪ್ಪ, ಗುಂಗಾರಗಟ್ಟಿ, ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ, ಬಾಡ, ಮನಗುಂಡಿ ಸೇರಿದಂತೆ ಅನೇಕ ಕಡೆಗಳಲ್ಲಿ ಜಾನುವಾರುಗಳು ಮೃತಪಟ್ಟಿವೆ.
ರೈತರಿಗೆ ಆಳುಗಳ ಕೊರತೆ ತಪ್ಪುತ್ತಿಲ್ಲ. ಉಚಿತ ಅಕ್ಕಿ ಕೊಟ್ಟಿದ್ದರ ಪರಿಣಾಮಯಾರೂ ಹೊಲಗಳಲ್ಲಿ ಕಳೆ ಕೀಳಲು ಅಥವಾ ಕೂಲಿಗೆ ಬರುತ್ತಿಲ್ಲ. ಹೀಗಾಗಿ ಬೆಳೆ ಬೆಳೆಯಬೇಕಾದರೆ ನಾವು ಕಳೆನಾಶಕ ಬಳಸಲೇಬೇಕಿದೆ. ಇದರಿಂದ ಹಾನಿಯಾಗುತ್ತದೆ ಎಂಬುದು ಗೊತ್ತಿದೆ. ಆದರೂ ಇಂದಿನ ಕೃಷಿ ಪರಿಸ್ಥಿತಿಗೆ ಇದು ಅನಿವಾರ್ಯ. .ಸೋಮಲಿಂಗ ಪಾಟೀಲ, ಕಳಸನಕೊಪ್ಪ ರೈತ
- ಬಸವರಾಜ ಹೊಂಗಲ್