ಮುಂಬಯಿ: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಪುಣೆ ಮೂಲದ ಸಾಗರ್ ಬರ್ವೆ(32) ಎಂಬಾತನನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ರವಿವಾರ ( ಜೂ.11 ರಂದು) ಬಂಧಿಸಿದ್ದಾರೆ.
ಆರೋಪಿ ಶರದ್ ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಅವರ ವಾಟ್ಸಾಪ್ ಗೆ ಸಂದೇಶವನ್ನು ಕಳುಹಿಸಿ ಜೀವ ಬೆದರಿಕೆಯನ್ನು ಹಾಕಿದ್ದ. ಈ ಸಂಬಂಧ ಸುಪ್ರಿಯಾ ಸುಳೆ ಮುಂಬೈ ಪೊಲೀಸರಿಗೆ ದೂರು ನೀಡಿ, ಮಹಾರಾಷ್ಟ್ರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು.
ಇದನ್ನೂ ಓದಿ: Wedding Bus: ಮದುವೆ ಮನೆ ಬಸ್ ಪಲ್ಟಿ; 10 ಮಂದಿ ದಾರುಣ ಸಾವು
ಫೇಸ್ ಬುಕ್ ನಲ್ಲಿ ನರೇಂದ್ರ ದಾಭೋಲ್ಕರ್ ಹತ್ಯೆಯನ್ನು ಉಲ್ಲೇಖಿಸಿ, ಶರದ್ ಪವಾರ್ ಅವರಿಗೆ ಜೀವ ಬೆದರಿಕೆಯ ಪೋಸ್ಟನ್ನು ಆರೋಪಿ ಹಾಕಿದ್ದ. ಈ ಸಂಬಂಧ ಲೋಕಮಾನ್ಯ ತಿಲಕ್ ಮಾರ್ಗ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ನೀಡಲಾಗಿತ್ತು, ಪೊಲೀಸರು ಐಪಿ ಅಡ್ರಸ್ ನ್ನು ಪತ್ತೆ ಮಾಡಿ ಆರೋಪಿ ಸಾಗರ್ ನನ್ನು ಬಂಧಿಸಿದ್ದಾರೆ.
ಟ್ವಿಟರ್ ನಲ್ಲೂ ಜೀವ ಬೆದರಿಕೆ ಬಂದಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಆರೋಪಿಯನ್ನು ಜೂ. 14 ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.