Advertisement

ಜೀವ ಬೆದರಿಕೆ; ರಕ್ಷಣೆಗೆ ಶೃತಿ ಮನವಿ

11:28 AM Apr 27, 2019 | pallavi |

ಧಾರವಾಡ: ಪ್ರತ್ಯೇಕ ಧರ್ಮ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದ ಶೃತಿ ಬೆಳ್ಳಕ್ಕಿ, ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು ಸೂಕ್ತ ರಕ್ಷಣೆ ನೀಡಬೇಕು ಎಂದು ರಾಜ್ಯಪಾಲರು ಸೇರಿದಂತೆ ಅನೇಕರಿಗೆ ದೂರು ಸಲ್ಲಿಸಿದ್ದಾರೆ.

Advertisement

ನಗರದ ಡಿಸಿ ಕಚೇರಿ ಎದುರು ಬಿಜೆಪಿ ಮುಖಂಡರೊಂದಿಗೆ ಪ್ರತಿಭಟನೆ ಕೈಗೊಂಡ ಬಳಿಕ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು, ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಜಿಲ್ಲಾ ನ್ಯಾಯಾಧೀಶರಿಗೆ ದೂರು ಸಲ್ಲಿಸಿದ್ದಾರೆ.

ನಾನು ಮತ್ತು ನನ್ನ ಪತಿ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದು, ನಾನು ಹಿಂದು ಪಂಚಮಸಾಲಿ ಲಿಂಗಾಯತ ಮತಕ್ಕೆ ಸೇರಿದವರಾಗಿದ್ದೇವೆ. ಕೆಲ ದಿನಗಳಿಂದ ನಾವು ಬಿಜೆಪಿಯಲ್ಲಿ ಸಕ್ರಿಯವಾಗಿರುವುದರಿಂದ ಕಾಂಗ್ರೆಸ್‌ ಪಕ್ಷದ ಕೆಲ ಜನರು ನನಗೆ ಹಾಗೂ ನನ್ನ ಪತಿಗೆ ದೂರವಾಣಿ ಕರೆ ಮಾಡಿ ಕಾಂಗ್ರೆಸ್‌ ಬೆಂಬಲಿಸಬೇಕೆಂಬ ಒತ್ತಡ ಹೇರಿದ್ದಾರೆ. ನನ್ನ ಕುಟುಂಬಕ್ಕೆ ಮಾಜಿ ಮಂತ್ರಿ ವಿನಯ ಕುಲಕರ್ಣಿ ಮತ್ತು ಅವರ ಬೆಂಬಲಿಗರಿಂದ ಪ್ರಾಣ ಭಯ ಇದೆ. ಈ ಬಗ್ಗೆ ರಕ್ಷಣೆ ಕೊಡುವಂತೆ ಮನವಿಯಲ್ಲಿ ಉಲ್ಲೇಖೀಸಿದ್ದಾರೆ. ಇದಲ್ಲದೇ ಬಿಜೆಪಿ ಪಕ್ಷದ ಧಾರವಾಡ ಗ್ರಾಮೀಣ ಘಟಕದಿಂದಲೂ ಪ್ರತ್ಯೇಕವಾಗಿ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ.

ವಿನಯ್‌ ವಿರುದ್ಧ ಕ್ರಮ ವಹಿಸಿ: ಬಿಜೆಪಿ ನಾಯಕ ಪ್ರಹ್ಲಾದ ಜೋಶಿ ಮಾತನಾಡಿ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಹಾಗೂ ನನ್ನನ್ನು ನಿಂದಿಸಿದವರ ಮೇಲೆ ಕೇಸ್‌ ಕೊಟ್ಟಿದ್ದೇವೆ. ಅವರ ವಿರುದ್ಧ ಈವರೆಗೆ ಯಾವ ಕ್ರಮ ಕೈಗೊಂಡಿಲ್ಲ ಏಕೆ? ಎಂದು ಜೋಶಿ ಖಾರವಾಗಿ ಪ್ರಶ್ನಿಸಿದರು. ಶೃತಿ ಬೆಳ್ಳಕ್ಕಿ ಮಾತನಾಡಿದ್ದು ಫೇಸ್‌ಬುಕ್‌ನಲ್ಲಿ. ಅದು ಸೈಬರ್‌ ಕ್ರೈಂ ವ್ಯಾಪ್ತಿಗೆ ಬರುತ್ತದೆ. ಸೈಬರ್‌ ಕ್ರೈಂ ಪ್ರಕರಣ ದಾಖಲಿಸುವುದು ಬಿಟ್ಟು ನೇರವಾಗಿ ಪ್ರಕರಣ ದಾಖಲಿಸಿಕೊಳ್ಳುವುದು ಸರಿಯಲ್ಲ. ಯೋಗೀಶಗೌಡ ಕೊಲೆ ಪ್ರಕರಣದ ಸಾಕ್ಷ್ಯ ನಾಶ ಪ್ರಕರಣದಲ್ಲಿ ಜೆಎಂಎಫ್‌ ನ್ಯಾಯಾಲಯದ ಸೂಚನೆ ಮೇಲೆ ಪ್ರಕರಣ ದಾಖಲಾಗಿದ್ದರೂ ಮಾಜಿ ಮಂತ್ರಿ ಮೇಲೆ ಯಾಕೆ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೂಡಲೇ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಲು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಜೋಶಿ ಎಚ್ಚರಿಸಿದರು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಈರಣ್ಣ ಜಡಿ, ಶಶಿ ಕುಲಕರ್ಣಿ, ಶಂಕರಣ್ಣ ಮುಗದ, ನಾಗರಾಜ ಗಾಣಿಗೇರ, ಸಂಗನಗೌಡ ರಾಮನಗೌಡರ, ಶಿವು ಹಿರೇಮಠ, ಈರಪ್ಪ ಹಪ್ಪಳಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next