Advertisement

ಕಹಿಯೇ ಜೀವನ ಲೆಕ್ಕಾಚಾರ!

07:39 PM Oct 28, 2020 | Suhan S |

ಹಿಂದೆಲ್ಲ ಹೆಚ್ಚಿನ ಸಂಸಾರಗಳಲ್ಲಿ  - “ನಾಳೆ ಹುಡುಗ ನಿನ್ನ ನೋಡೋಕೆ ಬರ್ತಿದ್ದಾನೆ, ತಯಾರಾಗಿರು’ ಎಂಬ ಮಾತಷ್ಟೇ ಹುಡುಗಿಯ ಕಿವಿಗೆ ಬೀಳ್ತಿತ್ತು. ಅವನ ಕುರಿತು ಹೆಚ್ಚಿನ ಮಾಹಿತಿ ಪಡೆಯುವ ಸ್ವಾತಂತ್ರ್ಯ ಅವಳಿಗೆ ಇರಲಿಲ್ಲ . ಆ ಹುಡುಗಿಯ ತಾಯಿ ಹೆದರುತ್ತಲೇ ಗಂಡನನ್ನು ಕೇಳಿ, ಅವರೇನಾದರೂ ಹೇಳಿದರೆ, ಅದು ಮಗಳಿಗೆ ತಿಳಿಯುತ್ತಿತ್ತಷ್ಟೆ. ನೋಡಲು ಬಂದ ಹುಡುಗ, ಅವನ ಮನೆಯವರು ಹಲವು ಪರೀಕ್ಷೆ ನಡೆಸಿ, ಹುಡುಗಿಯನ್ನು ಒಪ್ಪಿದರೆ ಕನ್ಯಾಪಿತೃಗಳ ಮನಸಿನಲ್ಲಿ ಒಂದು ರೀತಿಯ ನಿರಾಳ ಭಾವ. ಹುಡುಗ ಒಪ್ಪಿದ ನಂತರ ಮದುವೆಯ ತಯಾರಿ ಆರಂಭವಾಗುತ್ತಿತ್ತು. ಹುಡುಗಿಯ ಇಷ್ಟ- ಕಷ್ಟಗಳ ಕುರಿತು ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

Advertisement

ಎಷ್ಟೋ ಹೆಣ್ಣು ಮಕ್ಕಳು ಅಳುತ್ತ ಅಮ್ಮನ ಹತ್ತಿರ, ತಮಗೀ ಸಂಬಂಧ ಬೇಡವೆಂದು ಹೇಳಿಕೊಂಡು, ಅದು ಅಪ್ಪನಿಗೋ, ಮನೆ ಹಿರಿಯರಿಗೋ ತಲುಪಿದರೂ, ಎಲ್ಲ ನಿರಾಕರಣೆಗೂ ಉತ್ತರ ತಯಾರಾಗಿರುತ್ತಿತ್ತು. ಉದಾಹರಣೆಗೆ, ಹುಡುಗ ಕಪ್ಪು, ಅಂದವಿಲ್ಲ ಎಂದರೆ…”ಬಣ್ಣ, ಅಂದವನ್ನೇನು ಅರೆದು ಕುಡಿಯುತ್ತಾರ?’ ಅನ್ನುವುದು … “ಕುಳ್ಳು ಎಂದರೆ, ಅವರಿಗಿಲ್ಲದ ತಲೆಬಿಸಿ ಇವಳಿಗ್ಯಾಕೆ?’ ಎಂದು ಕೇಳುವುದು… ಹುಡುಗನಿಗೆ ವಿದ್ಯೆ ಇಲ್ಲವೆಂದರೆ, ಇವಳಿಗೆ ಊಟ ಬಟ್ಟೆಗೇನೂ ಅವರ ಮನೆಯಲ್ಲಿ ಕೊರತೆ ಇಲ್ವಲ್ಲ ಅನ್ನುವುದು… ಹೀಗೆ ಏನಾದರೂ ಹೇಳಿ ಅವಳ ಬಾಯಿ ಮುಚ್ಚಿಸುತ್ತಿದ್ದರು. ಅವಳ ಬೆನ್ನ ಹಿಂದೆ ತಂಗಿಯರಿದ್ದರಂತೂ ಕೇಳ್ಳೋದೇ ಬೇಡ. ಸ್ವಲ್ಪ ಜಾಸ್ತಿ ಧೈರ್ಯದ (?) ಹುಡುಗಿಯರೇನಾದರೂ ವಿರೋಧಿಸಿದರೆ ಪೆಟ್ಟು ಕೊಟ್ಟಾದರೂ ಒಪ್ಪಿಸುತ್ತಿದ್ದರೇ ವಿನಃ ಅವಳ ಭಾವನೆಗಂತೂ ಬೆಲೆ ಇರಲಿಲ್ಲ. ಕೊನೆಗೆ ತಾಯಿಯೇ- “ನಾನೂ ಇಷ್ಟವಿರದೇನೇ ನಿನ್ನ ಅಪ್ಪನನ್ನು ಮದುವೆಯಾಗಿದ್ದು. ಈಗ ನಮಗೇನಾಗಿದೆ?

ನಾವು ಚೆನ್ನಾಗಿಲ್ವಾ? ಮದುವೆಯಾದಮೇಲೆ ಎಲ್ಲಾ ಸರಿ ಹೋಗುತ್ತದೆ, ಒಪ್ಪಿಕೊಂಡುಬಿಡು’ ಅಂತ ಹೇಳಿ ಒಪ್ಪಿಸುತ್ತಿದ್ದರು. ಅಪರೂಪಕ್ಕೆ ಇದಕ್ಕೆ ಕೆಲ ಗಂಡು ಮಕ್ಕಳೂ ಹೊರತಲ್ಲ. ಮಾತು ಕೊಟ್ಟಿದ್ದೇವೆಂದೋ, ಆರ್ಥಿಕವಾಗಿ ಸಹಾಯವಾಗುತ್ತದೆಂದೋ, ಸಂಬಂಧ ಮುಂದುವರಿಸಬೇಕೆಂದೋ ಇಷ್ಟವಿಲ್ಲದ ಮದುವೆಯಾಗುವ ಸಂದರ್ಭವನ್ನು ಅವರೂ ಎದುರಿಸಬೇಕಾಗುತ್ತಿತ್ತು…. ಹೀಗೆ, ನಿಟ್ಟುಸಿರಿನೊಂದಿಗೆ ಸಾಕಷ್ಟು ಜೋಡಿಗಳು ವಿವಾಹ ಬಂಧನದಲ್ಲಿ ಸಿಲುಕುತ್ತಿದ್ದವು. ಸ್ವಾರಸ್ಯವೇನು ಗೊತ್ತೆ? ಅಂಥಹವರಲ್ಲಿ ಹೆಚ್ಚಿನವರು ಒಬ್ಬರಿಗೊಬ್ಬರು ಹೊಂದಿಕೊಂಡು, ಐದಾರು ದಶಕಗಳ ಕಾಲ ಯಶಸ್ವಿ ದಾಂಪತ್ಯವನ್ನು ನಿರ್ವಹಿಸುತ್ತಿದ್ದ ಪರಿ. ಗಂಡನ ಮನೆಯವರನ್ನೆಲ್ಲ ತನ್ನವರೆಂದುಕೊಂಡು, ತನ್ನ ಸಂಸಾರದ ಜವಾಬ್ದಾರಿಯನ್ನೆಲ್ಲ ಹೆಣ್ಣು ನಿಭಾಯಿಸುತ್ತಿದ್ದ ರೀತಿ ಅನನ್ಯ.

ಈಗಿನ ಕಾಲದಲ್ಲಿ, ಹಿರಿಯರ ಮಾತಿಗೆ ಕೇರ್‌ ಮಾಡದ ಮಕ್ಕಳು ತಾವು ಇಷ್ಟ ಪಟ್ಟವರನ್ನೇ ಮದುವೆಯಾಗುತ್ತಾರೆ. ಆದರೆ, ಎರಡು ವರ್ಷ ಕಳೆವ ಮೊದಲೇ ವಿಚ್ಛೇದನಕ್ಕೆ ಅರ್ಜಿ ಹಾಕಿ ಬಿಡುತ್ತಾರೆ. ಸಣ್ಣಪುಟ್ಟ ಕಾರಣಗಳಿಗೆಲ್ಲ ಡೈವೋರ್ಸ್‌ ಆಗೋದು ನೋಡಿದ್ರೆ ಈಗಿನ ಮಕ್ಕಳಲ್ಲಿ ಹೊಂದಾಣಿಕೆ ಎಂಬ ಶಬ್ದಕ್ಕೆ ಅರ್ಥವೇ ಇಲ್ಲವೇನೋ. ಹೆಣ್ಣು ಮಕ್ಕಳೂ ಆರ್ಥಿಕವಾಗಿ ಸಬಲವಾಗಿರೋದು, ಪರಸ್ಪರರಲ್ಲಿ ನಿರೀಕ್ಷೆಗಳು ಜಾಸ್ತಿಯಾಗಿರೋದೂ ಸಂಸಾರದಲ್ಲಿ ವಿರಸ ಹೆಚ್ಚಲು ಮುಖ್ಯ ಕಾರಣವೆನಿಸುತ್ತದೆ. ಯಾರೂ ಪರಿಪೂರ್ಣರಲ್ಲ, ಒಬ್ಬರ ಕುಂದು-ಕೊರತೆಗಳನ್ನು ತಿಳಿದು ಅನುಸರಿಸಿಕೊಂಡು ಹೋದರೇನೆ, ಜೀವನದಲ್ಲಿ ನೆಮ್ಮದಿ ಸಾಧ್ಯವೆಂದು ತಿಳಿಸಿಕೊಡಬೇಕಿದೆ.­

 

Advertisement

ಜ್ಯೋತಿ ರಾಜೇಶ್‌

Advertisement

Udayavani is now on Telegram. Click here to join our channel and stay updated with the latest news.

Next