ಕೆಲವು ವರ್ಷಗಳಿಂದ ಸೆರೆಮನೆವಾಸ ಅನುಭವಿಸುತ್ತಿರುವ ಸೌದಿ ಅರೇಬಿಯಾದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಲೌಜೈನ್ ಅಲ್-ಹಥ್ಲೌಲ್ ಬಿಡುಗಡೆಗೆ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಹೆಚ್ಚುತ್ತಿದೆ. ಜೈಲಿನಲ್ಲಿ ಲೌಜೈನ್ ಅಲ್-ಹಥ್ಲೌಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಆಕೆಯನ್ನು ಬಿಡುಗಡೆ ಮಾಡಬೇಕು ಎಂದು ಆಕೆಯ ಕುಟುಂಬಿಕರು ಜಿ20 ನಾಯಕರಿಗೆ ಒತ್ತಡ ಹೇರುತ್ತಿದ್ದಾರೆ.
ಯಾರು ಈ ಲೌಜೈನ್ ಅಲ್-ಹಥ್ಲೌಲ್: ಲೌಜೈನ್ ಅಲ್-ಹಥ್ಲೌಲ್ 31 ವರ್ಷದ ಸೌದಿ ಅರೇಬಿಯಾದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ದಿಂದ ಪದವಿ ಪಡೆದಿರುವ ಈಕೆ ತನ್ನ ಹೋರಾಟದ ಕಾರಣದಿಂದ ಹಲವು ಬಾರಿ ಜೈಲು ಸೇರಿದ್ದಾರೆ.
ಮಹಿಳೆಯರಿಗೆ ವಾಹನ ಚಲಾವಣೆ ನಿಷೇಧ ಕಾನೂನಿನ ವಿರುದ್ಧ ಹೋರಾಟದಲ್ಲಿ ಈಕೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ. 2014ರ ಡಿಸೆಂಬರ್ 1ರಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಿಂದ ಸೌದಿ ಅರೇಬಿಯಾಕ್ಕೆ ತನ್ನ ಕಾರಿನಲ್ಲಿ ಗಡಿ ದಾಟಲು ಯತ್ನಿಸಿದ ಆರೋಪದಲ್ಲಿ ಮೊದಲ ಬಾರಿಗೆ ಬಂಧಿಸಲಾಯಿತು. 73 ದಿನಗಳ ಕಾಲ ಲೌಜೈನ್ ಅಲ್-ಹಥ್ಲೌಲ್ ಜೈಲಿನಲ್ಲಿರಬೇಕಾಗಿತ್ತು. ಆಕೆ ಯುಎಇ ನ ಡ್ರೈವಿಂಗ್ ಲೈಸನ್ಸ್ ಹೊಂದಿದ್ದರೂ ಆಕೆಯನ್ನು ಸೌದಿ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು.
ಸೌದಿಯ ಪುರುಷ ಗಾರ್ಡಿಯನ್ ಶಿಪ್ ವ್ಯವಸ್ಥೆಯನ್ನು ವಿರೋಧಿಸಿದ ಲೌಜೈನ್ ಅಲ್-ಹಥ್ಲೌಲ್, ಅದನ್ನು ರದ್ದುಗೊಳಿಸುವಂತೆ ಕೋರಿ 14,000 ಜನರೊಂದಿಗೆ ಸೇರಿ 2016 ರ ಸೆಪ್ಟೆಂಬರ್‌ನಲ್ಲಿ ರಾಜ ಸಲ್ಮಾನ್‌ಗೆ ಮನವಿ ಸಲ್ಲಿಸಿದ್ದರು. 4 ಜೂನ್ 2017 ರಂದು ಆಕೆಯನ್ನು ದಮ್ಮಂನ ಕಿಂಗ್ ಫಹಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಆಕೆಯ ಬಂಧನಕ್ಕೆ ಅಧಿಕೃತ ಕಾರಣವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಆಕೆಯನ್ನು ಮಾನವ ಹಕ್ಕುಗಳ ಹೋರಾಟದ ಕಾರಣಕ್ಕಾಗಿ ಬಂಧಿಸಲಾಗಿದೆ ಎನ್ನುತ್ತವೆ ವರದಿಗಳು.
ಮಾರ್ಚ್ 2018 ರಲ್ಲಿ ಲೌಜೈನ್ ಅಲ್-ಹಥ್ಲೌಲ್ ಅವರನ್ನು ಯುಎಇಯಿಂದ ಅಪಹರಿಸಿ ಸೌದಿ ಅರೇಬಿಯಾಕ್ಕೆ ಗಡೀಪಾರು ಮಾಡಲಾಯಿತು, ಅಲ್ಲಿ ಕೆಲವು ದಿನಗಳ ಕಾಲ ಆಕೆಯನ್ನು ಬಂಧಿಸಲಾಗಿತ್ತು ಮತ್ತು ನಂತರ ಆಕೆಗೆ ಪ್ರಯಾಣ ನಿಷೇಧ ಹೇರಲಾಗಿತ್ತು.
ಇದಾದ ಕೆಲವೇ ದಿನಗಳಲ್ಲಿ ಅಂದರೆ 15 ಮೇ 2018ರಂದು ಸೌದಿ ಅರೇಬಿಯಾದಲ್ಲಿ ಮಹಿಳೆಯರ ಹಕ್ಕುಗಳ ಅಭಿಯಾನದಲ್ಲಿ ಭಾಗಿಯಾಗಿರುವ ಇಮಾನ್ ಅಲ್-ನಫ್ಜನ್, ಆಯಿಷಾ ಅಲ್-ಮನ, ಅಜೀಜಾ ಅಲ್-ಯೂಸೆಫ್, ಮಡೆಹಾ ಅಲ್-ಅಜ್ರೌಶ್ ಮತ್ತು ಕೆಲವು ಪುರುಷರೊಂದಿಗೆ ಲೌಜೈನ್ ಅಲ್-ಹಥ್ಲೌಲ್ ಅವರನ್ನು ಮತ್ತೆ ಬಂಧಿಸಲಾಯಿತು.
2018ರ ಜೂನ್ ನಲ್ಲಿ ಸೌದಿ ಅರೇಬಿಯಾ ಮಹಿಳೆಯರಿಗೆ ವಾಹನ ಚಲಾಯಿಸಲು ಮುಕ್ತ ಅವಕಾಶ ನೀಡಿತು. ಆದರೆ ಇದಕ್ಕಾಗಿ ಹೋರಾಡಿದ ಲೌಜೈನ್ ಅಲ್-ಹಥ್ಲೌಲ್ ಬಂಧನದಲ್ಲೇ ಇದ್ದರು. ಜೈಲಿನಲ್ಲಿ ಅಲ್-ಹಥ್ಲೌಲ್ ಮತ್ತು ಇತರ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಲಾಗಿತ್ತು. ಕಾಲಿನಲ್ಲಿ ಒದೆಯುವುದು, ವಿದ್ಯುತ್ ಶಾಕ್ ನೀಡುವುದು, ಚಾಟಿ ಏಟು ಮುಂತಾದ ರೀತಿಯಲ್ಲಿ ಹಿಂಸೆ ನೀಡಲಾಗಿತ್ತು. ಒಮ್ಮೆ ಲೌಜೈನ್ ಅಲ್-ಹಥ್ಲೌಲ್ ಕುಟುಂಬಿಕರು ಆಕೆಯನ್ನು ಭೇಟಿಯಾದಾಗ ಆಕೆಯ ತೊಡೆಯ ಭಾಗ ಕಪ್ಪಾಗಿತ್ತು ಎನ್ನುತ್ತಾರೆ ಆಕೆಯ ಸಹೋದರಿ ಆಲಿಯಾ.
1 ಮಾರ್ಚ್ 2019 ರಂದು, ಸೌದಿ ಅರೇಬಿಯಾದ ಸಾರ್ವಜನಿಕ ಅಭಿಯೋಜಕರ ಕಚೇರಿ ಪ್ರಾಥಮಿಕ ತನಿಖೆ ಪೂರ್ಣಗೊಂಡಿದೆ ಎಂದು ಘೋಷಿಸಿತು ಮತ್ತು ಅವರು ರಾಜ್ಯ ಭದ್ರತೆಯನ್ನು ದುರ್ಬಲಗೊಳಿಸಿದ್ದಕ್ಕಾಗಿ ಅಲ್-ಹಥ್ಲೌಲ್ ಮತ್ತು ಇತರ ಕಾರ್ಯಕರ್ತರನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ರಾಜ್ಯ ಭದ್ರತೆಯನ್ನು ದುರ್ಬಲಗೊಳಿಸಿದ ಕಾರಣಕ್ಕಾಗಿ ಲೌಜೈನ್ ಅಲ್-ಹಥ್ಲೌಲ್ ಮತ್ತು ಇತರರ ವಿರುದ್ಧ 13 ಮಾರ್ಚ್ 2019 ರಂದು ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭಿಸಲಾಯಿತು. ಆದರೆ ವಿಚಾರಣೆಯ ವೇಳೆ ವರದಿಗಾರರು ಮತ್ತು ರಾಜತಾಂತ್ರಿಕರಿಗೆ ಹಾಜರಾಗುವುದನ್ನು ನಿರ್ಬಂಧಿಸಲಾಗಿತ್ತು. ಏಪ್ರಿಲ್ 2019 ರಲ್ಲಿ, ಆಕೆಯ ಪ್ರಕರಣದ ವಿಚಾರಣೆಯನ್ನು ಯಾವುದೇ ಕಾರಣ ನೀಡದೆ ಮುಂದೂಡಲಾಯಿತು. ನಂತರ 2020ರಲ್ಲಿ ಕೋವಿಡ್ ನೆಪವೊಡ್ಡಿ ವಿಚಾರಣೆಯನ್ನು ಮತ್ತೆ ಮುಂದೂಡಲಾಗಿದೆ.
2020ರಲ್ಲಿ ಆಕೆಗೆ ಮತ್ತೆ ಹಿಂಸಾತ್ಮಕ ಶಿಕ್ಷೆ ನೀಡಲಾಗುತ್ತಿದೆ ಎಂದು ಆಕೆ ಸಹೋದರಿ ದೂರಿದ್ದರು. ಕುಟುಂಬಿಕರಿಗೆ ದೂರವಾಣಿ ಕರೆ ಮಾಡಲು ಅವಕಾಶ ನಿರಾಕರಿಸಿದಾಗ ಲೌಜೈನ್ ಅಲ್-ಹಥ್ಲೌಲ್ ಉಪವಾಸ ಧರಣಿ ಆರಂಭಿಸಿದರು. ಪರಿಣಾಮ ಆಕೆಯನ್ನು ಭೇಟಿಯಾಗಲು ಕುಟುಂಬಿಕರಿಗೆ ಅವಕಾಶ ನೀಡಲಾಯಿತು.
ಸೆಪ್ಟೆಂಬರ್ 15, 2020 ರಂದು, ಜೈಲಿನಲ್ಲಿದ್ದ ಮಹಿಳಾ ಹಕ್ಕುಗಳ ಕಾರ್ಯಕರ್ತ ಲೌಜೈನ್ ಅಲ್-ಹಥ್ಲೌಲ್ ರನ್ನು ಬಿಡುಗಡೆ ಮಾಡುವಂತೆ ಸುಮಾರು 30 ದೇಶಗಳು ಸೌದಿ ಅರೇಬಿಯಾಕ್ಕೆ ಸೂಚನೆ ನೀಡಿದ್ದವು. ಅಕ್ಟೋಬರ್ 8 ರಂದು, ಯುರೋಪಿಯನ್ ಪಾರ್ಲಿಮೆಂಟ್ ಮಾನವ ಹಕ್ಕುಗಳ ವಿಚಾರವಾಗಿ ನಿರ್ಣಯವೊಂದನ್ನು ಅಂಗೀಕರಿಸಿದ್ದು, ಎಲ್ಲಾ ಮಾನವ ಹಕ್ಕುಗಳ ಕಾರ್ಯಕರ್ತರನ್ನು, ಅದರಲ್ಲೂ ವಿಶೇಷವಾಗಿ ಲೌಜೈನ್ ಅಲ್-ಹಥ್ಲೌಲ್ ರನ್ನು ಬಿಡುಗಡೆ ಮಾಡುವಂತೆ ಸೌದಿ ಅರೇಬಿಯಾಗೆ ಸೂಚನೆ ನೀಡಿದೆ.
ಲೌಜೈನ್ ಅಲ್-ಹಥ್ಲೌಲ್ ತನ್ನ ಬಿಡುಗಡೆಗೆ ಒತ್ತಾಯಿಸಿ ಅಕ್ಟೋಬರ್ 26ರಂದು ಮತ್ತೆ ಉಪವಾಸ ಧರಣಿ ಆರಂಭಿಸಿದ್ದಾರೆ. ಸದ್ಯ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಬೇರೆ ಬೇರೆ ದೇಶಗಳು ಆಕೆಯ ಬಿಡುಗಡೆಗಾಗಿ ಸೌದಿ ಅರೇಬಿಯಾ ದೇಶದ ಮೇಲೆ ಒತ್ತಡ ಹೇರುತ್ತಿದೆ.