Advertisement

ಲತಾ ಮಂಗೇಶ್ಕರ್: ಮಂದ ಸ್ವರ ಎಂದು ತಿರಸ್ಕರಿಸಿದವರೇ ಒಂದು ಹಾಡಿಗಾಗಿ ದುಂಬಾಲು ಬಿದ್ದಿದ್ದರು

09:49 AM Sep 29, 2019 | keerthan |

ಲತಾ ಮಂಗೇಶ್ಕರ್. ಈ ಹೆಸರನ್ನು ಕೇಳದವರು ಭಾರತದಲ್ಲಿ ಯಾರೂ ಇರಲಿಕ್ಕಿಲ್ಲ ಬಿಡಿ. ಹಿನ್ನಲೆ ಗಾಯಕಿಯಾಗಿ ಲತಾ ಅವರು ಏರಿದ ಎತ್ತರ ಉಳಿದ ಗಾಯಕರಿಗೆ ದಾರಿದೀಪ. ಇಂದು ಲತಾಜೀ ಅವರ 90ನೇ ಹುಟ್ಟುಹಬ್ಬ. ಹಾಗಾಗಿ ಭಾರತ ರತ್ನ ಪುರಸ್ಕೃತ ಗಾಯಕಿಯ ಬದುಕಿನ ಮೇಲೆ ಬೆಳಕು ಚೆಲ್ಲುವ ಸಣ್ಣ ಲೇಖನ ನಿಮಗಾಗಿ.

Advertisement

ಲತಾ ಮಂಗೇಶ್ಕರ್ ಅವರು ಜನಿಸಿದ್ದು ಸೆಪ್ಟೆಂಬರ್ 28 1929ರಂದು ಇಂಧೋರ್ ನಲ್ಲಿ. ತಂದೆ ಶಾಸ್ತ್ರೀಯ ಸಂಗೀತಕಾರ, ರಂಗನಟ ಪಂಡಿತ್ ದೀನನಾಥ್ ಮಂಗೇಶ್ಕರ್. ತಾಯಿ ಶೇವಾಂತಿ (ನಂತರ ಶುಧಮತಿ ಎಂದು ಬದಲಾಯಿಸಲಾಯಿತು). ಮೀನಾ, ಆಶಾ, ಉಶಾ ಇವರು ಲತಾರವರ ತಂಗಿಯವರಾದರೆ ಹೃದಯವಂತ್ ಮಂಗೇಶ್ಕರ್ ತಮ್ಮ.

ಲತಾ ಅವರ ಬಾಲ್ಯದ ಹೆಸರು ಹೇಮಾ. ತಂದೆ ದೀನನಾಥ್ ಮಂಗೇಶ್ಕರ್ ಅವರ ಭವಬಂಧನ್ ನಾಟಕದಲ್ಲಿ ‘ಲತಿಕ’ ಪಾತ್ರದಲ್ಲಿ ಹೇಮಾ ಅವರ ಹೆಸರು ಲತಾ ಎಂದು ಬದಲಾಯಿತು.

ಬಾಲ್ಯದಿಂದಲೇ ತಂದೆಯಿಂದ ಸಂಗೀತಾಭ್ಯಾಸ ಮಾಡಿದ್ದ ಲತಾ ಅವರು ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಒಂದು ದಿನ ಲತಾ ಅವರು ತನ್ನೊಂದಿಗೆ ತಂಗಿ ಆಶಾ ಅವರನ್ನು ಶಾಲೆಗೆ ಕರೆದುಕೊಂಡು ಹೋದಾಗ ಅಧ್ಯಾಪಕರು ಗದರಿದ್ದರಂತೆ. ಶಾಲೆಗೆ ಹೋದರೆ ತಂಗಿಯ ಜೊತೆಗೆ ಮಾತ್ರ ಎಂದು ನಿರ್ಧರಿಸಿದ್ದ ಲತಾ ಮುಂದೆಂದೂ ಶಾಲೆಯ ಮೆಟ್ಟಿಲು ತುಳಿಯಲಿಲ್ಲ.

13ನೇ ಹರೆಯದಲ್ಲಿ(1942) ಲತಾ ತಂದೆ ದೀನನಾಥ ಮಂಗೇಶ್ಕರ್ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಮೃತರಾದರು. ನಂತರ ಲತಾ ಅವರ ಕುಟುಂಬವನ್ನು ನೋಡಿಕೊಂಡಿದ್ದು ನವಯುಗ್ ಚಿತ್ರಪಟ ಮೂವಿ ಕಂಪನಿಯ ಮಾಲಕ ಮಾಸ್ಟರ್ ವಿನಾಯಕ್ . ಅವರೇ ಮುಂದೆ ಲತಾ ಅವರ ಸಿನಿಪಯಣದ ಆರಂಭಕ್ಕೆ ಕಾರಣರಾದರು. ಇದೇ ವರ್ಷ ಮರಾಠಿ ಚಿತ್ರ ‘ಕಿತಿ ಹಸಾಲ್’ ಚಿತ್ರಕ್ಕೆ ಲತಾ ಮಂಗೇಶ್ಕರ್ ಮೊದಲ ಬಾರಿ ಹಾಡಿದರು. ಆದರೆ ಅಂತಿಮವಾಗಿ ಈ ಹಾಡನ್ನು ಚಿತ್ರದಲ್ಲಿ ಸೇರಿಸಲಿಲ್ಲ. ನಂತರ ‘ಪೆಹಲಿ ಮಂಗಳಾ ಗೌರ್’ ಚಿತ್ರಕ್ಕೆ ಲತಾ ಹಾಡಿದರು.

Advertisement

1945ರಲ್ಲಿ ಇಂಧೋರ್ ನಿಂದ ಮುಂಬೈಗೆ ಬಂದ ಲತಾ, ‘ಆಪ್ ಕಿ ಸೇವಾ ಮೆ’ ಎಂಬ ಹಾಡಿನ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿರಿಸಿದರು.  ಉಸ್ತಾದ್ ಅಮಾನ್ ಆಲಿ ಖಾನ್ ಅವರಿಂದ ಹಿಂದೂಸ್ಥಾನಿ ಸಂಗೀತ ಅಭ್ಯಾಸ ಆರಂಭಿಸಿದ ಲತಾ, ‘ಭಡೀ ಮಾ’ ಚಿತ್ರದಲ್ಲಿ ಆಶಾ ಅವರೊಂದಿಗೆ ಸಣ್ಣ ಪಾತ್ರವೊಂದರಲ್ಲಿ ನಟಿಸಿದರು.

ಬಾಲಿವುಡ್ ನಲ್ಲಿ ತನ್ನ ನೆಲೆ ಕಂಡುಕೊಳ್ಳಲು ಇನ್ನೂ ಹೆಣಗಾಡುತ್ತಿದ್ದ ಸಂದರ್ಭದಲ್ಲಿ ಕೆಲವು ಸಂಗೀತ ನಿರ್ದೇಶಕರು ಲತಾ ಅವರು ಧ್ವನಿ ತುಂಬಾ ಕ್ಷೀಣ ಎಂದು ತಿರಸ್ಕರಿಸಿದ್ದರು. ಮುಂದೆ ಅದೇ ನಿರ್ದೇಶಕರು ಲತಾ ಅವರಿಂದ ಒಂದು ಹಾಡು ಹಾಡಿಸಲು ದುಂಬಾಲು ಬೀಳುವಂತೆ ಲತಾ ಮಂಗೇಶ್ಕರ್ ಬೆಳೆದರು.

1948ರಲ್ಲಿ ಮಜಬೂರ್ ಚಿತ್ರಕ್ಕೆ ಲತಾ ಹಾಡಿದ ಘುಲಾಂ ಹೈದರ್ ಸಂಗೀತದ ‘ದಿಲ್ ಮೇರಾ ತೋಡಾ’ ಹಾಡು ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಹೈದರ್ ಅವರು ನನ್ನಲ್ಲಿ ವಿಶ್ವಾಸವಿರಿಸಿ ನನಗೆ ದೊಡ್ಡ ಅವಕಾಶ ನೀಡಿದ್ದರು ಎಂದು ಲತಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ನಂತರದ ದಿನಗಳಲ್ಲಿ ಶಂಕರ್ ಜೈಕಿಶನ್, ನೌಶದ್ ಆಲಿ, ಎಸ್.ಡಿ. ಬರ್ಮನ್, ಹೇಮಂತ್ ಕುಮಾರ್, ಕಲ್ಯಾಣ್ ಜಿ- ಆನಂದ್ ಜಿ, ಮದನ್ ಮೋಹನ್ ಮುಂತಾದ ಪ್ರಸಿದ್ದ ಸಂಗೀತ ನಿರ್ದೇಶಕರ ಹಾಡುಗಳನ್ನು ಲತಾ ತಮ್ಮ ಕಂಠದಿಂದ ಶ್ರೀಮಂತಗೊಳಿಸಿದರು. ಹಿಂದಿ ಚಿತ್ರರಂಗದ ಪ್ರತಿಯೊಬ್ಬ ಗಾಯಕರೊಂದಿಗೆ, ಬಹುತೇಕ ನಟಿಯರಿಗಾಗಿ ಹಾಡಿದ ಕೀರ್ತಿ ಲತಾ ಅವರದ್ದು.

ಹಿಂದಿ ಮಾತ್ರವಲ್ಲದೇ ಮರಾಠಿ, ಕನ್ನಡ, ಬೆಂಗಾಲಿ ಸೇರಿದಂತೆ ದೇಶದ ಸುಮಾರು 25ಕ್ಕೂ ಹೆಚ್ಚು ಭಾಷೆಗಳ 50 ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿದ್ದಾರೆ.

1962ರ ಚೀನಾ ಭಾರತ ಯದ್ಧದ ಸಮಯದಲ್ಲಿ ಕವಿ ಪ್ರದೀಪ್ ರಚನೆಯ ಸಿ ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು ಹಾಡಿದ್ದ ‘ ಏ ಮೇರೆ ವತನ್ ಕೆ ಲೋಗೋಂ’ ಹಾಡು ದೇಶಭಕ್ತಿ ಗೀತೆಯಾಗಿ ಪ್ರಸಿದ್ದವಾಗಿತ್ತು. ಈ ಹಾಡನ್ನು ಕೇಳಿದ್ದ ಅಂದಿನ ಪ್ರಧಾನಿ ಜವಹರಲಾಲ್ ನೆಹರು ‘ ನೀನು ನನ್ನನ್ನು ಅಳಿಸಿಬಿಟ್ಟೆ’ ಎಂದು ಲತಾ ಅವರಲ್ಲಿ ಹೇಳಿದ್ದರಂತೆ.

‘ಆಪ್ ಕಿ ನಜರೋ ನೆ ಸಮಝಾ ಪ್ಯಾರ್ ಕೆ ಕಾಬಿಲ್ ಮುಝೆ’, ‘ಬಾಹೋಂ ಮೇನ್ ಚಲೇ ಆವೋ’, ‘ಲಗ್ ಗಲೇ ಸೆ ಫಿರ್’, ‘ದೇಖಾ ಏಕ್ ಖ್ವಾಬ್’, ‘ಏ ಕಹಾಂ ಸೇ ಆಗಯೆ ಹಮ್’ ಮುಂತಾದ ಹಾಡುಗಳು ಲತಾ ಅವರು ಹಾಡಿದ ಎವರ್ ಗ್ರೀನ್ ಹಾಡುಗಳು.

ಲತಾ ಅವರ ಸಾಧನೆಗೆ ಸರ್ವೋಚ್ಛ ನಾಗರಿಕ ಪ್ರಶಸ್ತಿ ಭಾರತ ರತ್ನ, ಪದ್ಮ ಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವಾರು ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ. ನ್ಯೂಯಾರ್ಕ್ ವಿಶ್ವ ವಿದ್ಯಾಲಯ ಸೇರಿದಂತೆ ಒಟ್ಟು ಒಂಬತ್ತು ಗೌರವ ಡಾಕ್ಟರೇಟ್ ಗಳು, ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ಫ್ರಾನ್ಸ್ ಸರಕಾರ ನೀಡುವ ‘ಆಫಿಸರ್ ಆಫ್ ದಿ ಲಿಜಿಯನ್ ಆಫ್ ಆನರ್’ ಪ್ರಶಸ್ತಿಗಳು ಲತಾ ಅವರ ಸಾಧನೆಗೆ ಒಲಿದ ಗೌರವಗಳು.

ಅವಿವಾಹಿತರಾಗಿರುವ ಲತಾ ಮಂಗೇಶ್ಕರ್ ಅವರು ತಮ್ಮ ಜೀವನವನ್ನು ಸಂಗೀತಕ್ಕೆ ಮುಡಿಪಾಗಿಟ್ಟವರು. ಅಂದಿಗೂ ಇಂದಿಗೂ ಸಂಗೀತದ ಸೂಪರ್ ಸ್ಟಾರ್ ಆಗಿರುವ ಲತಾ ಮಂಗೇಶ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next