Advertisement

ಭಾರತೀಯ ಹಾಕಿಗೆ ಇವಳೇ ರಾಣಿ: ಬಡತನದಲ್ಲಿ ಅರಳಿದ ಹಾಕಿ ಪ್ರತಿಭೆ

05:18 PM Oct 30, 2020 | keerthan |

ಆ ಹುಡುಗಿಗೆ ಆಗಿನ್ನೂ ಆರು ವರ್ಷ ವಯಸ್ಸು. ಆಗಲೇ ಹಾಕಿ ಕ್ರೀಡೆಯಲ್ಲಿ ಮಹೋನ್ನತ ಸಾಧನೆ ಮಾಡುವ ಕನಸು ಅವಳಿಗೆ. ಅಪ್ಪ ಅಮ್ಮನ ಬಳಿ ತನ್ನ ಕನಸನ್ನು ವ್ಯಕ್ತಪಡಿಸಿದಾಗ ಅದಕ್ಕವರು ಒಪ್ಪಲಿಲ್ಲ. ನೆರೆ ಹೊರೆಯವರು ಹಾಗೂ ಸಂಬಂಧಿಕರೂ ಕೊಂಕು ನುಡಿದರು.

Advertisement

“ಹಾಕಿ ಆಡಿ ಯಾರನ್ನ ಉದ್ದಾರ ಮಾಡ್ತೀಯಾ… ಸ್ಕರ್ಟ್‌ ಹಾಕಿಕೊಂಡು ಅಂಗಳದ ತುಂಬಾ ಓಡಾಡ್ತಾ ಇದ್ದರೆ ಕುಟುಂಬದ ಮರ್ಯಾದೆ ಬೀದಿ ಪಾಲಾಗುತ್ತದೆ ಅಷ್ಟೇ…” ಎಂದು ಮೂದಲಿಸಿದ್ದರು.

ಅಷ್ಟಾದರೂ ಆಕೆ ಎದೆಗುಂದಲಿಲ್ಲ. ಹಾಕಿಯನ್ನೇ ಉಸಿರಾಗಿಸಿಕೊಂಡಿದ್ದ ಆ ಹುಡುಗಿ ದೃಢ ಸಂಕಲ್ಪ ತೊಟ್ಟಳು. ಹರ ಸಾಹಸ ಪಟ್ಟು ಪೋಷಕರ ಮನ ಒಲಿಸಿದಳು. ಕಿತ್ತು ತಿನ್ನುವ ಬಡತನವನ್ನೂ ಲೆಕ್ಕಿಸದೇ ಹಗಲಿರುಳು ಕಠಿನ ಅಭ್ಯಾಸ ನಡೆಸಿ ಹದಿನಾಲ್ಕನೇ ವಯಸ್ಸಿನಲ್ಲೇ ಸೀನಿಯರ್‌ ಮಹಿಳಾ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದಳು. ಈ ಸಾಧನೆ ಮಾಡಿದ ಭಾರತದ ಅತೀ ಕಿರಿಯ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರಳಾದಳು. ಆ ಹುಡುಗಿ ಬೇರ್ಯಾರೂ ಅಲ್ಲ. ತನ್ನ ಕಲಾತ್ಮಕ ಆಟ ಹಾಗೂ ಚಾಣಾಕ್ಷ ನಾಯಕತ್ವದ ಮೂಲಕ ಭಾರತೀಯ ಹಾಕಿಯ ರಾಣಿಯಾಗಿ ಮೆರೆಯುತ್ತಿರುವ ಆ ಸಾಧಕಿ .

.

ಹರಿಯಾಣದಲ್ಲಿ ಜನನ

Advertisement

ಹರಿಯಾಣದ ಶಹಬಾದ್‌ ಮಾರ್ಕಂಡದಲ್ಲಿ ಜನಿಸಿದ ರಾಣಿ, ಈಗಾಗಲೇ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದಾರೆ. 25 ವರ್ಷ ವಯಸ್ಸಿನ ರಾಣಿ “ವರ್ಲ್ಡ್ ಗೇಮ್ಸ್‌ ಆ್ಯತ್ಲೀಟ್‌ ಆಫ್ ದಿ ಇಯರ್‌’ ಗೌರವಕ್ಕೆ ಭಾಜನರಾದ ವಿಶ್ವದ ಮೊದಲ ಮತ್ತು ಏಕೈಕ ಹಾಕಿಪಟು ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಭಾರತೀಯ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್‌ರತ್ನವನ್ನು ಇದೇ ವರ್ಷ ಪಡೆದುಕೊಂಡಿದ್ದು ಕೂಡ ಇವರ ಸಾಧನೆಯಾಗಿದೆ.

 ಒಲಿಂಪಿಕ್ಸ್‌ ಮೂಂದೂಡಿಕೆಯಿಂದ ನಿರಾಶೆ

ಈ ವರ್ಷವೇ ಒಲಿಂಪಿಕ್‌ ಕೂಟ ನಡೆಯುತ್ತದೆ ಎಂದು ಭಾವಿಸಿದ್ದೆವು. ಹೀಗಾಗಿ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದ್ದೆವು. ಕೂಟ ಮುಂದೂಡಿರುವುದರಿಂದ ನಿರಾಸೆಯಾಗಿದೆ. ಕಳೆದ ಎರಡು ವರ್ಷಗಳಿಂದ ನಾವು ತುಂಬಾ ಚೆನ್ನಾಗಿ ಆಡುತ್ತಿದ್ದೇವೆ. ರ್‍ಯಾಂಕಿಂಗ್‌ನಲ್ಲಿ ನಮಗಿಂತ ಮೇಲಿನ ಸ್ಥಾನದಲ್ಲಿರುವ ತಂಡಗಳ ವಿರುದ್ಧ ಅಮೋಘ ಸಾಮರ್ಥ್ಯ ತೋರಿದ್ದೇವೆ. ಇದೀಗ ಒಲಿಂಪಿಕ್ಸ್‌ ಮುಂದೂಡಲ್ಪಟ್ಟ  ಕಾರಣ ಇನ್ನಷ್ಟು ಕಠಿನ ಅಭ್ಯಾಸ ನಡೆಸಿ ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ರಾಂಪಾಲ್‌ ಅಭಿಪ್ರಾಯಪಟ್ಟಿದ್ದಾರೆ.

 ಇಂಗ್ಲಿಷ್‌ ಮಾತಾಡಲು ಬರುತ್ತಿರಲಿಲ್ಲ

ಗ್ರಾಮೀಣ ಭಾಗದಿಂದ ಬಂದ ಕಾರಣ ಇಂಗ್ಲಿಷ್‌ನಲ್ಲಿ ಮಾತನಾಡುವುದು ಮತ್ತು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತಿತ್ತು. ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸುವ ಸಂದರ್ಭ ಆಟಗಾರ್ತಿಯರೊಂದಿಗೆ ಸಂವಹನ ಮಾಡಲು ಒದ್ದಾಡಿದೆ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿ ತಪ್ಪಾದರೂ ಪರವಾಗಿಲ್ಲ ಇಂಗ್ಲಿಷ್‌ನಲ್ಲಿಯೇ ವ್ಯವಹರಿಸಬೇಕೆಂದು ದೃಢವಾಗಿ ನಿಶ್ಚಯ ಮಾಡಿದೆ. ಹೀಗಾಗಿ ಈ ಭಾಷೆಯನ್ನು ಬೇಗನೆ ಕಲಿಯಲು ಸಾಧ್ಯವಾಯಿತು. ಗುರಿಯೊಂದಿದ್ದರೆ ಏನನ್ನು ಸಾಧಿಸಬಹುದು ಎನ್ನುವುದು ರಾಣಿಯ ಸ್ಫೂರ್ತಿದಾಯಕ ಮಾತುಗಳು.

ಹೆಣ್ಣು ಎಂದರೆ ಆಕೆ ನಾಲ್ಕು ಗೋಡೆಗಳ ಮಧ್ಯೆ ಇರಲಷ್ಟೇ ಸೀಮಿತ ಎಂಬ ಸಂಕುಚಿತ ಮನಃಸ್ಥಿತಿಯ ಜನರ ನಡುವೆಯೇ ಬೆಳೆದು, ಕ್ರಮೇಣ ಈ ಸಂಪ್ರದಾಯ ಹಾಗೂ ಕಟ್ಟುಪಾಡುಗಳನ್ನು ಧಿಕ್ಕರಿಸಿದ ರಾಣಿ, ಅವಿರತ ಪರಿಶ್ರಮ ಹಾಗೂ ಬದ್ಧತೆಯ ಮೂಲಕವೇ ಸಾಧನೆಯ ಶಿಖರ ಏರಿದ್ದಾರೆ. ಭಾರತೀಯ ತಂಡವು 36 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವಲ್ಲಿ (2016ರ ರಿಯೊ ಒಲಿಂಪಿಕ್ಸ್‌) ರಾಣಿ ಅವರ ಪಾತ್ರ ಮಹತ್ವದ್ದಾಗಿತ್ತು.

ಧೋನಿ ರೋಲ್‌ ಮಾಡಲ್‌

ನಾಯಕತ್ವ ಎನ್ನುವುದು ಬಹುದೊಡ್ಡ ಜವಾಬ್ದಾರಿ. ತಂಡದಲ್ಲಿರುವ ಎಲ್ಲರ ಅಭಿಪ್ರಾಯಗಳಿಗೂ ಮನ್ನಣೆ ನೀಡಬೇಕು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುಂದೆ ಸಾಗಬೇಕು. ಕಿರಿಯ ಆಟಗಾರ್ತಿಯರಿಗೆ ಅಗತ್ಯ ಮಾರ್ಗದರ್ಶನ ನೀಡಿ ಅವರ ಆಟದ ಗುಣಮಟ್ಟ ಹೆಚ್ಚಿಸಲು ನೆರವಾಗಬೇಕು. ಇದನ್ನು ಸವಾಲೆಂದು ಭಾವಿಸುವುದಿಲ್ಲ. ನಾನು ಧೋನಿಯವರ ಕಟ್ಟ ಅಭಿಮಾನಿ. ಅವರೇ ನನಗೆ ರೋಲ್‌ ಮಾಡಲ್‌ ಎಂತಹ ಸನ್ನಿವೇಶದಲ್ಲಿಯೂ ನಾಯಕರಾಗಿ ತಂಡವನ್ನು ಮುನ್ನಡೆಸುವ ಅವರ ಕಲೆಯೇ ನನಗೆ ಸ್ಫೂರ್ತಿ ಎನ್ನುತ್ತಾರೆ ರಾಣಿ.

ಅಭಿ

Advertisement

Udayavani is now on Telegram. Click here to join our channel and stay updated with the latest news.

Next