Advertisement

ಕೇರಳ ಮೂಲದವನಾದರೂ ಕರ್ನಾಟಕದಲ್ಲಿ ಮಿಂಚುತ್ತಿರುವ ನೂತನ ಕ್ರಶ್ ದೇವದತ್ತ್ ಪಡಿಕ್ಕಲ್

03:09 PM Apr 23, 2021 | ಕೀರ್ತನ್ ಶೆಟ್ಟಿ ಬೋಳ |

ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ತಂಡದ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಶತಕ ಬಾರಿಸಿ ಮಿಂಚಿದರು. ನಾಯಕ ವಿರಾಟ್ ಕೊಹ್ಲಿಯೊಂದಿಗೆ ಅದ್ಭುತ ಇನ್ನಿಂಗ್ಸ್ ಕಟ್ಟಿದ ಪಡಿಕ್ಕಲ್ ಐಪಿಎಲ್ ನಲ್ಲಿ ತನ್ನ ಮೊದಲ ಶತಕ ಬಾರಿಸಿದರು. ಕಳೆದ ಸೀಸನ್ ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಿಂಚುತ್ತಿರುವ ಕರ್ನಾಟಕದ ಈ ಯುವಕ ಜನಿಸಿದ್ದು ಕೇರಳದಲ್ಲಿ.

Advertisement

20ರ ಹರೆಯದ ದೇವದತ್ತ ಪಡಿಕ್ಕಲ್ ಜನಿಸಿದ್ದು ಕೇರಳ ರಾಜ್ಯದ ಎಡಪ್ಪಲ್ ಎಂಬ ಪಟ್ಟಣದಲ್ಲಿ. ಜುಲೈ ಏಳು 2000 ಇಸವಿಯಲ್ಲಿ. ಕೇರಳದಲ್ಲಿ ಹುಟ್ಟಿದ್ದರೂ ಪಡಿಕ್ಕಲ್ ಬಾಲ್ಯ ಕಳೆದಿದ್ದು ಹೈದರಾಬಾದ್ ನಲ್ಲಿ. ದೇವದತ್ತ್ ಗೆ 11 ವರ್ಷವಿದ್ದಾಗ ಬೆಂಗಳೂರಿಗೆ ಬಂದರು. ಇಲ್ಲಿನ ಸೈಂಟ್ ಜೋಸೆಫ್ ಹೈಸ್ಕೂಲ್ ಸೇರಿದ ದೇವದತ್ತ್ ಅಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೂಡಾ ಇದೇ ಶಾಲೆಯಲ್ಲಿ ಕಲಿತವರು.

ಚಿಕ್ಕವನಿದ್ದಾಗಿನಿಂದಲೂ ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ನಿಂದ ಪಡಿಕ್ಕಲ್ ಪ್ರಭಾವಿತರಾಗಿದ್ದರು. ಬೆಂಗಳೂರಿನ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ನಲ್ಲಿ ಕ್ರಿಕೆಟ್ ಪಟ್ಟುಗಳನ್ನು ಕಲಿತ ದೇವದತ್ತ್, ತನ್ನ ಆಟದಿಂದಲೇ ಗಮನ ಸೆಳೆದಿದ್ದರು. ಕರ್ನಾಟಕ ವಯೋಮಿತಿ ತಂಡದಲ್ಲಿ ಸ್ಥಾನ ಪಡೆದ ಪಡಿಕ್ಕಲ್, ಕೆಪಿಎಲ್ ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದಲ್ಲಿ ಮಿಂಚಿದ್ದರು.

2017ರ ಕೆಪಿಎಲ್ ಸೀಸನ್ ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ 72 ರನ್ ಬಾರಿಸಿ ಮಿಂಚು ಹರಿಸಿದ್ದರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ದೇವದತ್ತ್ ಆ ಋತುವಿನ ಎಮರ್ಜಿಂಗ್ ಆಟಗಾರ ಗೌರವ ಪಡೆದಿದ್ದರು.

Advertisement

2018ರಲ್ಲಿ ಕೂಚ್ ಬೆಹರ್ ಕೂಟದಲ್ಲಿ ರಾಜ್ಯ ತಂಡದ ಪರ ಮಿಂಚಿನ ಆಟವಾಡಿದ್ದ ಪಡಿಕ್ಕಲ್, ಕೂಟದಲ್ಲಿ 829 ರನ್ ಬಾರಿಸಿದ್ದರು. ಈ ಕಾರಣದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನೀಡುವ ‘ಅತ್ಯುತ್ತಮ ಬ್ಯಾಟ್ಸಮನ್’ ಪ್ರಶಸ್ತಿಗೂ ಪಡಿಕ್ಕಲ್ ಪಾತ್ರರಾಗಿದ್ದರು.

2019-20ರಲ್ಲಿ ಕರ್ನಾಟಕ ರಾಜ್ಯ ಮುಖ್ಯ ತಂಡಕ್ಕೆ ಆಯ್ಕೆಯಾದ ಪಡಿಕ್ಕಲ್ ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದರು. ಆರಡಿ ಉದ್ದದ ಪಡಿಕ್ಕಲ್ ಆ ಋತುವಿನಲ್ಲಿ 1838 ರನ್ ಗಳಿಸಿ ಕರ್ನಾಟಕ ಪರ ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದರು. ವಿಜಯ್ ಹಜಾರೆ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲಿ ಕ್ರಮವಾಗಿ 42.7 ಮತ್ತು 36.13 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರು. 2019-20ರ ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲಿ 580 ರನ್  ಮತ್ತು 33 ಸಿಕ್ಸರ್ ಬಾರಿಸಿದ್ದರು. ಕೂಟದಲ್ಲಿ ಅತೀ ಹೆಚ್ಚು ರನ್ ಮತ್ತು ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿ ಕರ್ನಾಟಕದ ಈ ಎಡಗೈ ಬ್ಯಾಟ್ಸಮನ್ ದ್ದು.

2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈತನನ್ನು ಖರೀದಿಸಿದ್ದರೂ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಗದೆ ಬೆಂಚ್ ಕಾಯ್ದಿದ್ದರು. ಆದರೆ ಯುಎಇನಲ್ಲಿ ನಡೆದ 13ನೇ ಆವೃತ್ತಿಯಲ್ಲಿ ಅವಕಾಶ ಪಡೆದ ಪಡಿಕ್ಕಲ್ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದರು. ಹೈದರಾಬಾದ್ ವಿರುದ್ಧ ನಡೆದ ಪ್ರಥಮ ಪಂದ್ಯದಲ್ಲಿ ಆರೋನ್ ಫಿಂಚ್ ಜೊತೆ ಕಣಕ್ಕಿಳಿದಿದ್ದ ಪಡಿಕ್ಕಲ್ ಆಕರ್ಷಕ ಬ್ಯಾಟಿಂಗ್ ನಿಂದ ಗಮನ ಸೆಳೆದಿದ್ದರು. ಅಂದಹಾಗೆ ಪ್ರಥಮ ದರ್ಜೆ, ಲಿಸ್ಟ್ ಎ, ಐಪಿಎಲ್ ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಹೆಚ್ಚುಗಾರಿಕೆ ಈತನಿಗೆ ಸಲ್ಲುತ್ತದೆ.

ಈ ಬಾರಿಯ ಐಪಿಎಲ್ ಗೂ ಕೆಲವೇ ದಿನಗಳ ಮೊದಲು ದೇವದತ್ತ್ ಗೆ ಕೋವಿಡ್ ಸೋಂಕು ಪಾಸಿಟಿವ್ ಆಗಿತ್ತು. ಇದೇ ಕಾರಣದಿಂದ ಮೊದಲ ಪಂದ್ಯವನ್ನೂ ತಪ್ಪಿಸಿಕೊಂಡಿದ್ದರು. ನಂತರದ ಎರಡು ಪಂದ್ಯಗಳಲ್ಲಿ ಅವರ ಬ್ಯಾಟ್ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಒಂದು ಸೀಸನ್ ನ ಅದ್ಭುತ ಎಂದ ಹೀಗಳೆದವರಿಗೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಶತಕ ಸಿಡಿಸಿ ಬಾಯ್ಮುಚ್ಚಿಸಿದ್ದಾರೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next