Advertisement

ಈಕೆ ಬೆಂಕಿಯಲ್ಲಿ ಅರಳಿದ ಬ್ಯೂಟಿ… ಕಾಲೇಜಿನಲ್ಲಿನ ಕರಾಳ ಘಟನೆ ಬದುಕಿಗೆ ತಿರುವು ಕೊಟ್ಟಿತ್ತು…

04:43 PM Sep 17, 2022 | ಸುಹಾನ್ ಶೇಕ್ |

ನಾವು ಏನಾದರೂ ಜೀವನದಲ್ಲಿ ದೊಡ್ಡ ವ್ಯಕ್ತಿ ಅಥವಾ ಒಂದು ಹಂತಕ್ಕೆ ಬಂದು ನಿಂತಿದ್ದೇವೆ ಎಂದರೆ ಅದರ ಹಿಂದೆ ಮರೆಯಲಾಗದ ಪರಿಶ್ರಮ, ಪ್ರಯತ್ನ, ಅವಮಾನ, ನೋವು, ಒಂಟಿತನ ಎಲ್ಲವೂ ಅಡಗಿರುತ್ತದೆ. ಅದು ನಮ್ಮನ್ನು ಹೀಯಾಳಿಸುವವರ ಕಣ್ಣಿಗೆ, ನಮ್ಮನ್ನು ದ್ವೇಷಿಸುವ, ನಮ್ಮಿಂದ ಹೊಟ್ಟೆಯೂರಿ ಪಡುವವರಿಗೆ ಗೊತ್ತಿರುವುದಿಲ್ಲ. ಅವರ ಕಣ್ಣಿಗೆ ನಾವು ಒಂದು ಶ್ರೀಮಂತ ಅಥವಾ ದೊಡ್ಡ ವ್ಯಕ್ತಿಯಷ್ಟೇ ಆಗಿ ಕಾಣುತ್ತಿವೆ.

Advertisement

ಇಂದು ಸೋಶಿಯಲ್ ಮೀಡಿಯಾದಲ್ಲಿ ತನ್ನ ಬಟ್ಟೆಗಳಿಂದಲೇ ಸದ್ದು ಮಾಡುತ್ತಿರುವ,ವಿವಾದಕ್ಕೆ ಸಿಲುಕುತ್ತಿರುವ ಉರ್ಫಿ ಜಾವೇದ್ ಎಂಬ ಯುವನಟಿಯ ಸೋಲು – ಗೆಲುವಿನ ಯಾನದ ಜೀವನ ಕಥೆಯಿದು..

ಅದು 1997 ರ ಇಸವಿ. ಲಕ್ನೋದಲ್ಲಿ ಮಧ್ಯಮ ವರ್ಗದ ಮುಸ್ಲಿಂ ಕುಟುಂಬವೊಂದರಲ್ಲಿ ಹೆಣ್ಣು ಮಗುವೊಂದು ಹುಟ್ಟುತ್ತದೆ. ಆ ಕುಟುಂಬಕ್ಕೆ ಅದು ಮೂರನೇ ಹೆಣ್ಣು ಮಗು. ಆ ಮಗುವೇ ಉರ್ಫಿ ಜಾವೇದ್. ಶಿಸ್ತಿನ ಅಪ್ಪ, ಅಪ್ಪನ ಕಣ್ಣು ತಪ್ಪಿಸಿ‌ ಮಕ್ಕಳ ಆಸೆಗಳನ್ನು ಈಡೇರಿಸುವ ತಾಯಿ. ಬಹಳ ಸಣ್ಣ ವಯಸಿನಲ್ಲಿ ಮದುವೆಯಾದ ಉರ್ಫಿ ಅವರ ತಾಯಿಗೆ ನೆಮ್ಮದಿಯ ದಿನಗಳು ಸಿಕ್ಕಿದ್ದು ಬರೀ ಕೈ ಲೆಕ್ಕದ್ದಷ್ಟು ಮಾತ್ರ. ಸದಾ ಸಿಟ್ಟಾಗಿ ಜೋರು ಮಾಡುವ, ಹೊಡೆಯುವ ಗಂಡನೊಂದಿಗೆ ಬಾಳು ಕಳೆದ ಉರ್ಫಿ ತಾಯಿ ಎಂದಿಗೂ ಮಕ್ಕಳಿಗೆ ಮಮತೆಯನ್ನು ಕಡಿಮೆ ಮಾಡಿಲ್ಲ.

ಬಾಲ್ಯದಲ್ಲಿ ಯಾರೊಂದಿಗೂ ಅಷ್ಟಾಗಿ ಮಾತನಾಡದೇ ನಾಚಿಕೆ ಸ್ವಭಾವದಿಂದ ಬೆಳೆದ ಉರ್ಫಿಗೆ ಅಪ್ಪ ಎಂದರೆ ತುಂಬಾ ಭಯ. ಬಾಲ್ಯದಲ್ಲೇ ಉರ್ಫಿಗೆ ಟಿ.ವಿ ನೋಡುವುದೆಂದರೆ ತುಂಬಾ ಇಷ್ಟದ ಹವ್ಯಾಸಗಳಲ್ಲೊಂದು. ಅಮ್ಮನೊಂದಿಗೆ ಕುಳಿತು ಧಾರಾವಾಹಿ ನೋಡುವುದರಲ್ಲೇ ಬಾಲ್ಯದ ಆಟ -ಪಾಠ ಕಳೆದು ಹೋಯಿತು.

ಅಪ್ಪನೆಂದರೆ ಈಕೆಗೆ ಶತ್ರು:

Advertisement

ಅಪ್ಪನೊಂದಿಗೆ ಮಾತಾನಾಡುವುದೆಂದರೆ ಉರ್ಫಿಗೆ ಕೈ ಕಾಲು ನಡುಗಿದಂತಾಗುವುದು. ಅಪ್ಪನ ದೌರ್ಜನ್ಯ, ಹಿಂಸೆಯನ್ನು ನೋಡುತ್ತಾ ಬೆಳೆದ ಉರ್ಫಿ ಮನೆಯಲ್ಲೂ ಹೆಚ್ಚು ಮೌನವಾಗಿಯೇ ಇರುತ್ತಿದ್ದಳು. ಉರ್ಫಿಗೆ  ಅಪ್ಪನನ್ನು ನೋಡಿದರೆ ಆಗುತ್ತಿರಲಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಸಿಟ್ಟಾಗಿ ಹೊಡೆಯುವುದು ಜೋರು ಮಾಡಿ, ಗದರಿಸಿ ಮನಸ್ಸಿನೊಳಗೆ ಭೀತಿ ಹುಟ್ಟಿಸುವ ಅಪ್ಪ ಬೇಗ ಸಾಯಬೇಕು, ಹೊರಗೆ ಹೋದವರು ಬರಲೇ ಬಾರದು ಅಲ್ಲೇ ಸಾಯಬೇಕೆಂದು 2ನೇ ತರಗತಿಯಲ್ಲೇ ಅಂದುಕೊಂಡಿದ್ದಳು ಉರ್ಫಿ. ಮನೆಯ ಹೊರಗೆ ಹೋಗಬೇಡ, ಯಾವ ಡ್ರೆಸ್ ಹಾಕಬೇಕು, ಜೀನ್ಸ್ ಹಾಕಬೇಡ ಹೀಗೆ ಎಲ್ಲದರಲ್ಲೂ ಕಟ್ಟುನಿಟ್ಟಾಗಿಟ್ಟ ಅಪ್ಪನನ್ನು ಉರ್ಫಿ ಇಷ್ಟಪಟ್ಟದ್ದಕ್ಕಿಂತ ದ್ವೇಷಿಸಿದ್ದೇ ಹೆಚ್ಚು.

ಯಾರೋ ಮಾಡಿದ ತಪ್ಪಿಗೆ ಅವಮಾನವೇ ಶಿಕ್ಷೆ  ಆಯಿತು:

ಮೊದಲೇ ನಾಚಿಕೆ ಸ್ವಭಾವದ ಹುಡುಗಿಯಾಗಿರುವ ಉರ್ಫಿ, ಶಾಲೆಯಲ್ಲಿ ತಾನಾಯಿತು ತನ್ನ ಕಲಿಕೆಯಾಯಿತು. ಯಾರೊಂದಿಗೂ ಜಾಸ್ತಿ‌ ಮಾತಿಲ್ಲ, ಸ್ನೇಹಿತರಂತೂ ಇಲ್ಲವೇ ಇಲ್ಲ ಎನ್ನುವ ಹಾಗೆ ಇರುತ್ತಿದ್ದಳು. ಯಾರ ತಂಟೆಗೂ ಹೋಗದ  ಉರ್ಫಿ ಫಸ್ಟ್  ಪಿಯುಸಿಯಲ್ಲಿ ಇದ್ದಾಗ ಒಂದು ಕರಾಳ ಘಟನೆ ನಡೆಯುತ್ತದೆ. 15 ನೇ ವಯಸ್ಸಿನಲ್ಲಿ ಕೆಲ ಸ್ನೇಹಿತರು  ಮೊಬೈಲ್ ನಲ್ಲಿ ಉರ್ಫಿ ಅವರ ಫೋಟೋ ತೆಗೆದುಕೊಂಡು ಪೋರ್ನ್ ವೆಬ್ ಸೈಟ್ ಗೆ ಅಪ್ಲೋಡ್ ಮಾಡುತ್ತಾರೆ. ಇದರಲ್ಲಿ ಉರ್ಫಿಯದೇನು ತಪ್ಪು ಇಲ್ಲದೇ ಇದ್ರು, ಮನೆ – ಶಾಲೆ, ಊರು ಎಲ್ಲಾ ಕಡೆ ಉರ್ಫಿಗೆ ಅವಮಾನ ಮಾಡುತ್ತಾರೆ. ಕೆಟ್ಟ  ದೃಷ್ಟಿಯಿಂದ ನೋಡಿ, ಹೀಯಾಳಿಸುತ್ತಾರೆ.

ಅಪ್ಪನಂತೂ ಹೊಡೆದು ಹೊಡೆದು ಸಾಯಿಸುವ ಸಿಟ್ಟನ್ನು ತೋರಿಸುತ್ತಾರೆ. ಕೆಲ ಕಾಲ ಕಾಲೇಜು – ಓದು ಬರಹ ಎಲ್ಲವೂ ಬಂದ್ ಆಗಿ, ರೂಮ್ ವೊಂದರಲ್ಲಿ ಉರ್ಫಿ ಬಂಧಿಯಂತೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಮತ್ತೆ ವಾಪಾಸ್ ಕಾಲೇಜಿಗೆ ಹೋಗುವ ವೇಳೆ ಪ್ರಾಂಶುಪಾಲರು ಫೋಟೋ ವಿಷಯದಿಂದ ಅವರನ್ನು ಶಾಲೆಯಿಂದ ತೆಗೆದು ಹಾಕುತ್ತಾರೆ. ಮತ್ತೆ ಉರ್ಫಿ ಮನೆಯೊಳಗೆ ಬಂಧಿ ಆಗುತ್ತಾರೆ.

ಅಪ್ಪನ ಹಿಂಸೆ, ಹೊಡೆತ, ಬೈಗಳ ಕೇಳುವುದು ಒಂದು ಕಡೆಯಾದರೆ, ಇನ್ನೊಂದೆಡೆ ಉರ್ಫಿಯ ಸಂಬಂಧಿಕರು ಉರ್ಫಿಯನ್ನು ಹೀಯಾಳಿಸುತ್ತಾರೆ. ಅವಳ ಬ್ಯಾಂಕ್ ಅಕೌಂಟ್ ಚೆಕ್ ಮಾಡಿ ಹಣ ಬಂದಿರಬಹುದು. ಏಕೆಂದರೆ ಅವಳು ತಾನೇ ಫೋಟೋಗಳನ್ನು ತೆಗೆದು‌ ಲೀಕ್ ಮಾಡಿ, ಹಣಗಳಿಸಿದ್ದಾಳೆ ಎನ್ನುವ ಆರೋಪ ಮಾಡಿ ಅವಮಾನಕರವಾದ ಮಾತುಗಳನ್ನಾಡುತ್ತಾರೆ. ಇದರಿಂದ ಮೊದಲೇ  ಕುಗ್ಗಿ ಹೋಗಿದ್ದ ಉರ್ಫಿ ಆತ್ಮಹತ್ಯೆಯ ಯೋಚನೆ ಮಾಡುತ್ತಾರೆ. ಆದರೆ ಆ ಕ್ಷಣದಲ್ಲೇ ಅವರಿಗೆ ತಾನು ಏನಾದರೂ ಮಾಡಬೇಕೆನ್ನುವ ಆಲೋಚನೆ ಬರುತ್ತದೆ.

ಬೇರೊಂದು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿದ ಬಳಿಕ, ಅಮೇಠಿ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮವನ್ನು ಕಲಿಯುತ್ತಾರೆ.  ಹಣ ಮಾಡುವುದರಲ್ಲಿ ಆಸಕ್ತಿಯಿದ್ದ ಉರ್ಫಿ ಒಂದೇ ಸೆಮಿಸ್ಟರ್ ಮಾಡಿ ಕಾಲೇಜು ಬಿಡುತ್ತಾರೆ.

17 ವಯಸ್ಸಿನಲ್ಲಿ ಇಬ್ಬರು ಅಕ್ಕಂದಿರೊಂದಿಗೆ ಮನೆ ಬಿಟ್ಟು ಓಡುತ್ತಾರೆ. ಲಕ್ನೋ‌ ವುಮೆನ್ಸ್ ಹೆಲ್ಪ್ ಲೈನ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ಇರುತ್ತಾರೆ.  ವಿಷಯ ತಿಳಿದು ಅಲ್ಲಿಗೆ ಬರುವ ತಂದೆ – ತಾಯಿಯ ಜೊತೆ ಉರ್ಫಿ ಬರಲು ಒಪ್ಪುವುದಿಲ್ಲ.

ಬದಲಾವಣೆಯತ್ತ ಬದುಕು:

ಅಪಾರ್ಟ್ ಮೆಂಟ್ ನಲ್ಲಿ ಇಬ್ಬರು ಅಕ್ಕಂದಿರು ಶಾಲಾ ಮಕ್ಕಳಿಗೆ ಟ್ಯೂಷನ್ ಕೊಡುತ್ತಾರೆ. ಇದರಿಂದ ತಿಂಗಳಿಗೆ‌ 3 ಸಾವಿರ ರೂಪಾಯಿ ಬರುತ್ತಿತ್ತು. ಇದು ಎಂದಿಗೂ ಸಾಕಾಗಲ್ಲ ಎಂದು ಯೋಚಿಸಿ ಉರ್ಫಿ ಅಲ್ಲಿಂದ ಕೆಲಸ ಹುಡುಕುತ್ತಾ ದಿಲ್ಲಿಗೆ ತೆರಳುತ್ತಾರೆ. ದಿಲ್ಲಿಯಲ್ಲಿ ಕಾಲ್ ಸೆಂಟರ್ ವೊಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಉರ್ಫಿಗೆ ಅದೊಂದು ದಿನ ತಾಯಿಯ ಕರೆ ಬರುತ್ತದೆ. ನಿನ್ನ ತಂದೆಯಿಂದ ದೂರವಾಗಿದ್ದೇನೆ. ಅವರು ಬೇರೆ ಮದುವೆ ಆಗಿದ್ದಾರೆ. ಮತ್ತೆ ನನ್ನ ‌ಜೊತೆಗೆ  ಬರುವಂತೆ ಹೇಳುತ್ತಾರೆ. ಆದರೆ ಆಗಷ್ಟೇ ಸ್ವತಂತ್ರವಾಗಿ ಹೆಜ್ಜೆಯಿಟ್ಟು ನಡೆಯಲು ಆರಂಭಿಸಿದ ಉರ್ಫಿ ತಾಯಿಯೊಂದಿಗೆ ಮಾತಾನಾಡುತ್ತಾರೆ ವಿನಃ ಮತ್ತೆ ತಿರುಗಿ ಊರಿಗೆ ಹೋಗುವುದಿಲ್ಲ.

ಒಂದು ದಿನ ಮುಂಬೈನಿಂದ ಸ್ನೇಹಿತರೊಬ್ಬರು ಕರೆ ಮಾಡಿ , ‘9XM ಚಾನೆಲ್ ನಲ್ಲಿ ನಿರೂಪಕಿ ಬೇಕು, ನಿನಗೆ ಕೆಲಸ ಬೇಕಾದರೆ ಬಾ ಎನ್ನುತ್ತಾರೆ. ಮುಂಬಯಿಗೆ ಹೋಗುವಷ್ಟೇ ಹಣವನ್ನು ಹೊಂದಿದ್ದ ಉರ್ಫಿ ಅಲ್ಲಿಗೆ ಹೋಗಿ ಆಡಿಷನ್ ನೀಡುತ್ತಾರೆ. ಆದರೆ ಅವರು ಆಯ್ಕೆ ಆಗುವುದಿಲ್ಲ. ಅದೇ ಸ್ನೇಹಿತನೊಂದಿಗೆ ಇದ್ದು, ಉರ್ಫಿ ಪ್ರತಿದಿನ ಗೂಗಲ್ ನಲ್ಲಿ ಹುಡುಕಿ 200 ಧಾರಾವಾಹಿ ಪ್ರೊಡಕ್ಷನ್ ಗಳಿಗೆ ಕರೆ ಮಾಡಿ ಅಡಿಷನ್ ಇದೇಯಾ ಎಂದು ಕೇಳಿ, ಅಡಿಷನ್ ಇದ್ದ ಜಾಗಕ್ಕೆ ಹೋಗುತ್ತಿದ್ದರು. ಪ್ರತಿಸಲವೂ ಅವರು ರಿಜೆಕ್ಟ್ ಆಗುತ್ತಿದ್ದರು.

ಕುಗ್ಗಿ ಹೋಗಿದ್ದ ಉರ್ಫಿಗೆ 2015 ರಲ್ಲಿ ‘ಬಿಗ್ ಮ್ಯಾಜಿಕ್’ ಚಾನೆಲ್ ವೊಂದರಲ್ಲಿ ಒಂದು ದಿನದ ಕೆಲಸ ಸಿಗುತ್ತದೆ. ಆ ಕೆಲಸಕ್ಕಾಗಿ ಅವರಿಗೆ 1500 ಸಾವಿರ ಸಂಬಳ ಸಿಗುತ್ತದೆ. ಇದಾದ ಬಳಿಕ ಹಿಂದಿಯ “ಬಡೇ ಭಯ್ಯಾ ಕಿ ದುಲ್ಹನಿಯಾ”( Bade Bhaiyaa Ki Dulhaniya) ಎನ್ನುವ ಧಾರಾವಾಹಿಯಲ್ಲಿ ಉರ್ಫಿಗೆ ನೆಗಟಿವ್‌ ರೋಲ್‌ (ಪಾತ್ರ) ವೊಂದು ಸಿಗುತ್ತದೆ. ಬಳಿಕ ‘ಮೇರಿ ದುರ್ಗಾʼ (Meri Durga), ʼ ಬೇಪನ್ನಾʼ( Bepannah) ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಉರ್ಫಿಗೆ ನೆಗೆಟಿವ್ ಪಾತ್ರಗಳೇ ಹುಡುಕಿಕೊಂಡು ಬರುತ್ತದೆ. ಹಿಂದಿಯ ಬಿಗ್ ಬಾಸ್‌ ಓಟಿಟಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಉರ್ಫಿ ಒಂದೇ ವಾರದಲ್ಲಿ ಸಹ ಸ್ಪರ್ಧಿಯೊಂದಿಗೆ ದೊಡ್ಡ ಗಲಾಟೆ ಮಾಡಿ ಕಾರ್ಯಕ್ರಮದಿಂದ ಹೊರ ಬೀಳುತ್ತಾರೆ.

ಅರೆ ಬರೆ  ಹರಿದ ಬಟ್ಟೆಯೇ ಫ್ಯಾಶನ್! :

ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದ ವಾಪಸ್‌ ಬರುವಾಗ ಏರ್‌ ಪೋರ್ಟ್‌ ನಲ್ಲಿ ಕಾಣಿಸಿಕೊಂಡ ಉರ್ಫಿ ಜಾವೇದ್‌ ಅವರನ್ನು ನೋಡಿ ಎಲ್ಲರೂ ಒಮ್ಮೆ ಶಾಕ್‌ ಆಗುತ್ತಾರೆ.  ಏಕಂದರೆ ಉರ್ಫಿ ಆವತ್ತು ಅರ್ಧ ಮೈ ಕಾಣುವ, ಅಂಗಾಂಗ ಕಾಣುವ ಬಟ್ಟೆಯನ್ನು ಹಾಕಿರುತ್ತಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತದೆ. ತಿಳಿದೋ ತಿಳಿಯದೆಯೋ ಅವರ ಜೀವನ ಇಲ್ಲಿಂದ ಬೇರೊಂದು ಹಂತಕ್ಕೆ ತಿರುಗುತ್ತದೆ.

ಕೆಲವೇ ದಿನಗಳ ನಂತರ ಉರ್ಫಿ ಮತ್ತೊಮ್ಮೆ ಅದೇ ರೀತಿಯ ಅರೆ ಬರೆ ಬಟ್ಟೆಯನ್ನು ಹಾಕಿಕೊಂಡು ಜನರ ಮುಂದೆ ಕಾಣುತ್ತಾರೆ.  ಮಾಧ್ಯಮದ ಮುಂದೆ ಹೊಸ ಬಗೆಯ ಫ್ಯಾಶನ್‌ ರೀತಿಯ ಬಟ್ಟೆಯನ್ನು ಹಾಕಿಕೊಂಡು ಕಾಣುವ ಉರ್ಫಿ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಾರೆ. ದಿನ ಕಳದಂತೆ ಅವರು, ಕೊಲೆ ಬೆದರಿಕೆ, ಅತ್ಯಾಚಾರದ ಬೆದರಿಕೆಗಳನ್ನು ಎದುರಿಸುತ್ತಾರೆ. ತನ್ನ ಮೈ ಮೇಲೆ ತಾನು ಯಾವ ಬಗೆಯ ಬಟ್ಟೆ ಬೇಕಾದರೆ ಹಾಕುವೆ ಬೇರೆಯವರಿಗೆ ಯಾಕೆ ಚಿಂತೆ ಎಂದು ಉರ್ಫಿ, ಇದನ್ನು ಫ್ಯಾಷನ್‌ ಟ್ರೆಂಡ್‌ ನಂತೆ ಮುಂದುವರೆಸುತ್ತಾರೆ.

ಸಣ್ಣ ಸಣ್ಣ ಫೋಟೋಗಳನ್ನೇ ಬಟ್ಟೆಯ ಹಾಗೆ ಹಾಕಿಕೊಂಡು ಪೋಸ್‌, ವೈಯರ್‌ ಗಳನ್ನೇ ಸುತ್ತಿಕೊಂಡು ಬಟ್ಟೆಯನ್ನಾಗಿ ಮಾಡಿದ ಪೋಸ್, ಗೋಣಿ ಚೀಲವನ್ನು ಸುತ್ತಿಕೊಂಡಿರುವ ಫೋಟೋ, ಬೆತ್ತಲೆ ಬೆನ್ನನ್ನು ಸಾರ್ವಜನಿಕವಾಗಿ ಮಾಧ್ಯಮದ ಮುಂದೆ ತೋರಿಸಿ ಸದ್ದು ಮಾಡಿದ್ದವರು, ಮತ್ತೊಂದು ಸಲ ಗುಂಡಿಯೇ ಇಲ್ಲದ ಜೀನ್ಸ್ ಪ್ಯಾಂಟ್ ವೊಂದನ್ನು ಧರಿಸಿದ್ದರು. ಅರ್ಧ ಎದೆ ಕಾಣುವ ಒಳ ಉಡುಪು, ಶರ್ಟ್ ಧರಿಸಿಯೂ ಕಾಣಿಸಿಕೊಂಡಿದ್ದರು.

ಹೀಗೆ..ಇವರ ಒಂದೊಂದು ಫೋಟೋ ಕೂಡ ವೈರಲ್‌ ಆಗಿವೆ. ಇದರೊಂದಿಗೆ ಟ್ರೋಲ್‌ ಗೆ ಕೂಡ ಒಳಗಾಗಿದ್ದಾರೆ. ವಿವಾದದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ರಣ್ವೀರ್‌ ಸಿಂಗ್‌ ಉರ್ಫಿಯನ್ನು ಫ್ಯಾಷನ್‌ ಐಕಾನ್‌ ಎಂದು ಕರೆದಿದ್ದರು. ಇಂದು ಭಾರತದಲ್ಲಿ ಉರ್ಫಿ ತಮ್ಮದೇ ಆದ ಜನಪ್ರಿಯತೆಯನ್ನು ಹೊಂದಿದ್ದಾರೆ. ಲಕ್ಷಾಂತರ ಫಾಲೋವರ್ಸ್ ನ್ನು ಹೊಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ  ಟ್ರೆಂಡ್‌ ಸ್ಟಾರ್‌ ಆಗಿದ್ದಾರೆ. ಅಂದ ಹಾಗೆ ಉರ್ಫಿ ಜಾವೇದ್ ಅಖ್ತರ್ ಅವರ ಮೊಮ್ಮಗಳು ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು. ಆದರೆ ಅದು ಸತ್ಯಕ್ಕೆ ದೂರವಾದದ್ದು ಉರ್ಫಿ ಅವರು ಸ್ಪಷ್ಟನೆ ನೀಡಿದ್ದಾರೆ.

 

 -ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next