Advertisement

ಬಿಹಾರ್ ಟು ಬಾಲಿವುಡ್ ರೈತನ ಮಗ “Gangs of wasseypur”ನ ಸುಲ್ತಾನ್ ನಾಗಿ ಬೆಳೆದ ರೋಚಕ ಹಾದಿ

09:08 PM Oct 28, 2020 | Suhan S |

ಕನಸು ಕಾಣುವ ದಾರಿಯಲ್ಲಿ ಬರುವ ಎಷ್ಟೋ ಹಂತಗಳನ್ನು ನಾವು ಬಾಯಿ ತಪ್ಪಿನಿಂದ ಸಮಸ್ಯಗಳೆಂದು ಕರೆಯುತ್ತೇವೆ. ನಿಜವಾಗಿಯೂ ಅವು ಆಯಾ ಕ್ಷಣಕ್ಕೆ,ಸಂದರ್ಭಗಳಿಗಷ್ಟೇ ಸಮಸ್ಯೆಗಳು.ಅವುಗಳನ್ನು ದಾಟಿ ಬಂದರೆ ಅವು ನಾವು ಗೆದ್ದ ಸವಾಲುಗಳಾಗಿ ನಿಲ್ಲುತ್ತದೆ. ಸವಾಲು ಗೆದ್ದವ ಮಾತ್ರ ಸಾಧಕನಾಗಬಲ್ಲ. ಸೋತವ ಮತ್ತಷ್ಟು ಕಲಿಯುವ ಕಲಿ ಆಗಬಲ್ಲ.!

Advertisement

ಬಿಹಾರದ ಗೋಪಲ್ ಗಂಜ್ ಜಿಲ್ಲೆಯ ಬಿಲ್ ಸಂದ್ ಗ್ರಾಮ. ರೈತಾಪಿ ಕಾರ್ಯವನ್ನು ನಂಬಿಕೊಂಡು ಬದುಕುವ ಕುಟುಂಬಗಳೇ ಹೆಚ್ಚಾಗಿರುವ ಪ್ರದೇಶ. ಇಂಥ ಗ್ರಾಮದಲ್ಲಿ, ರೈತ ಕುಟುಂಬದಲ್ಲಿ ಹುಟ್ಟಿ, ಪ್ರಾರಂಭಿಕ ಬಾಲ್ಯದ ವಯಸ್ಸನ್ನು ಅದೇ ಗ್ರಾಮದಲ್ಲಿ ಕಳೆದ ಪಂಕಾಜ್ ತ್ರಿಪಾಠಿ. ಇಂದು ಬಾಲಿವುಡ್ ನಲ್ಲಿ ಬಹು ಬೇಡಿಕೆ ನಟನಾಗಿ ಬೆಳೆದಿರಿವುದರ ಹಿಂದೆ ಬೆಂದು,ನೊಂದು,ಎದ್ದು ಬಂದ ದಾರಿಯ ಪಯಣ ರೋಚಕವಾಗಿದೆ.

ಬಾಲ್ಯದಲ್ಲೇ ಇತ್ತು ನಟನೆಯ ಹುಚ್ಚು : ಪಂಕಾಜ್ ಬೆಳೆದ ಗ್ರಾಮದಲ್ಲಿ ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ವೇಳೆಯಲ್ಲಿ ನಡೆಯುವ “ನಾಟಕ್ “ ನಲ್ಲಿ ಪಂಕಾಜ್ ಹೆಣ್ಣು ವೇಷಧಾರಿಯಾಗಿ ಬಣ್ಣ ಹಚ್ಚುತ್ತಾರೆ. ಪ್ರತಿ ಬಾರಿ ಹೆಣ್ಣಿನ ಪಾತ್ರಕ್ಕೆ ತಕ್ಕಂತೆ, ಧ್ವನಿ,ಗತ್ತು,ಗಾಂಭಿರ್ಯವನ್ನು ಬದಲಾಯಿಸಿಕೊಳ್ಳುತ್ತಿದ್ದ ಪಂಕಾಜ್ ಅವರ ನಟನೆ ಸ್ಥಳೀಯರಲ್ಲಿ ಪುಳಕವನ್ನುಂಟು ಮಾಡುತ್ತದೆ. ಆ ಸಮಯದಲ್ಲೇ ಕೆಲವರು ನಟನಾಗುವ ಸಲಹೆಯನ್ನು ಪಂಕಾಜ್ ಅವರಿಗೆ ನೀಡುತ್ತಾರೆ. ಪಂಕಾಜ್ ರಲ್ಲಿ ಆದಾಗಲೇ ನಟನಾಗಿ ಬಣ್ಣ ಹಚ್ಚಬೇಕೆನ್ನುವ ಸಣ್ಣ ಕಿಚ್ಚು ಮನಸ್ಸಿನ ಒಂದು ಬದಿಯಲ್ಲಿ ಗಟ್ಟಿಯಾಗಿ ಕೂತು ಕಾಡಲು ಆರಂಭಿಸುತ್ತದೆ. ಪಂಕಾಜ್ ತನ್ನ 13 ನೇ ವಯಸ್ಸಿನವರೆಗೆ ಊರಿನಲ್ಲಿ ಬಣ್ಣ ಹಚ್ಚುತ್ತಾರೆ.ನಟನೆಯ ವಿಷಯದಲ್ಲಿ ಪಂಕಾಜ್ ಆತ್ಮವಿಶ್ವಾಸದ ಮೂಟೆ ಹೊತ್ತು, ಅಪ್ಪನ ಆಸೆಯಂತೆ ಡಾಕ್ಟರ್ ಆಗಲು ಬಿಹಾರದಿಂದ ಪಾಟ್ನಾಕ್ಕೆ ಪಯಣ ಬೆಳೆಸುತ್ತಾರೆ.

ರಾಜಕೀಯ,ಹೋರಾಟ, ಜೈಲುವಾಸ..! : ಬಿಹಾರದಿಂದ ಪಾಟ್ನಾಕ್ಕೆ ದಾಪುಗಾಲಿಟ್ಟ ಪಂಕಾಜ್ ಬಹುಬೇಗ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗುತ್ತಾರೆ. ವಿದ್ಯಾರ್ಥಿ ಪರಿಷತ್ ಗೆ ಸೇರುವ ಪಂಕಾಜ್ ಹೋರಾಟದ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸುತ್ತಾರೆ.1993 ರಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಕಾವುಗೆ ಧ್ವನಿಗೂಡಿಸಿದ ಪಂಕಾಜ್ ಪೊಲೀಸರಿಂದ ಸೆರೆಯಾಗಿ, ಏಳು ದಿನಗಳ ಕಾಲ ಜೈಲಿನಲ್ಲಿ ಕೂರುತ್ತಾರೆ.ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಪಂಕಾಜ್ ಗ್ರಂಥಾಲಯದ ಸಹಾಯದಿಂದ ಹಿಂದಿ ಹಾಗೂ ಪಾಶ್ಚತ್ಯ ಸಾಹಿತ್ಯವನ್ನು ಓದುತ್ತಾರೆ.

Advertisement

ಪಂಕಾಜ್ ಪಾಟ್ನಾದಲ್ಲಿದ್ದ ವೇಳೆಯಲ್ಲಿ ನಾಟಕಗಳನ್ನು ನೋಡುವ ಹವ್ಯಾಸವನ್ನು ರೂಢಿಸಿಕೊಳ್ಳುತ್ತಾರೆ. ಹೀಗೆ ನಾಟಕಗಳನ್ನು ನೋಡುವಾಗ ಒಂದು ದಿನ ‘ಅಂಧ ಕುವಾನ್’ ನಾಟಕದಲ್ಲಿ ನಟಿ ಪ್ರಣೀತಾ ಜೈಸ್ವಾಲ್ ನಟನೆ ಪಂಕಾಜ್ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಆದಾದ ಬಳಿಕ ಪಾಟ್ನಾದಲ್ಲಿ ನಡೆಯುವ ನಾಟಕಗಳನ್ನು ತಪ್ಪದೆ ನೋಡುವ ಖಾಯಂ ವೀಕ್ಷಕನಾಗಿ ಪಂಕಾಜ್ ಬೆಳೆಯುತ್ತಾರೆ. ಕೆಲವೊಮ್ಮೆ ಸೈಕಲ್ ನಲ್ಲಿ ಕ್ರಮಿಸುವ ದೂರಕ್ಕೆ, ದೇಹಕ್ಕೆ ದಣಿವೆ ಇಲ್ಲದ ಹಾಗೆ ಪಂಕಾಜ್ ನಾಟಕದ ಲೋಕದೊಳಗೆ ಮಗ್ನನಾಗಿ ಬಿಡುತ್ತಾರೆ.

ಹೊಟೇಲ್ ಕೆಲಸ, ಅರೆ ಹೊತ್ತಿನ ನಿದ್ದೆ ಹಾಗೂ ನಟನೆ : ಪಂಕಾಜ್ ರಂಗಭೂಮಿಯ ಕಲಾವಿದನಾಗಿ ಸ್ಥಳೀಯ ರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ನಡುವೆ ಪಂಕಾಜ್ ರಿಗೆ ಬದುಕಿನ ಬವಣೆ ಕಾಡಲು ಶುರು ಆಗುತ್ತದೆ. ಬಿಹಾರ್ ರಂಗಭೂಮಿಗೆ 3 ವರ್ಷಕ್ಕೆ ಸೇರುವ ಪಂಕಾಜ್ ಕಷ್ಟಪಟ್ಟು ಕಲಾವಿದನ ಹಾದಿಯಲ್ಲಿ ಬಣ್ಣ ಹಚ್ಚಲು ಶುರು ಮಾಡುತ್ತಾರೆ. ತಮ್ಮ ಖರ್ಚಿಗಾಗಿ ಖಾಸಗಿ ಹೊಟೇಲ್ ವೊಂದರಲ್ಲಿ ರಾತ್ರಿ ಪಾಳಿಯ ಕೆಲಸ ಮಾಡಿ, ಬೆಳಗ್ಗಿನ ವೇಳೆಯಲ್ಲಿ ರಂಗಭೂಮಿಯಲ್ಲಿ ತೊಡಗಿಕೊಳ್ಳುತ್ತಾರೆ. ಕಣ್ಣು ಪೂರ್ತಿ ನೆಮ್ಮದಿಯಾಗುವ ನಿದ್ದೆಯೂ ಇಲ್ಲದೆ, ದೇಹ ಪೂರ್ತಿ ವಿಶ್ರಾಂತಿ ಆಗುವ ದಿನವೂ ಇಲ್ಲದೆ ಪಂಕಾಜ್ ಸವಾಲಿನ ದಿನಗಳಲ್ಲಿ ಸಾಗಿ ಬರುತ್ತಾರೆ.

ಸಾವಿರಾರು ಕನಸುಗಳ ತಾಣ NSD ಯಲ್ಲಿ ಪಂಕಾಜ್ .. : ನಟನೆಯಲ್ಲಿ ಪಳಗಿದ ಪಂಕಾಜ್ ತ್ರಿಪಾಠಿ, ದೊಡ್ಡ ಪರದೆಯಲ್ಲಿ ಕಾಣುವ ಹಂಬಲದೊಂದಿಗೆ ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ದಾಖಲಾತಿಯನ್ನು ಪಡೆದುಕೊಳ್ಳುತ್ತಾರೆ. 2004 ರಲ್ಲಿ ಎನ್ ಎಸ್ ಡಿ ಯಿಂದ ಪದವಿಯನ್ನು ಪಡೆದುಕೊಳ್ಳುತ್ತಾರೆ. ಅದೇ ವರ್ಷ ಪಂಕಾಜ್ ಮೃದುಲಾ ತ್ರಿಪಾಠಿ ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇದಾದ ಬಳಿಕ ಜವಾಬ್ದಾರಿ ಮೂಟೆಯ ಹೊರೆ ಪಂಕಾಜ್ ಬೆನ್ನಿಗೆ ಇನ್ನಷ್ಟು ಹೆಚ್ಚು ಮಾಡುತ್ತದೆ. 2004 ರಲ್ಲಿ ಪಂಕಾಜ್ ದಿಲ್ಲಿಯಿಂದ ಅವಕಾಶವನ್ನು ಹುಡುಕಲು ಕನಸಿನ ನಗರ ಮುಂಬಯಿಗೆ ಪಯಣ ಬೆಳೆಸುತ್ತಾರೆ.

ಮುಂಬಯಿಯಲ್ಲಿ ಅವಕಾಶವನ್ನು ಹುಡುಕುವ ಭರದಲ್ಲಿ ಅಲೆದಾಟ ನಡೆಸುವ ಪಂಕಾಜ್ ಗೆ ಟಿವಿ ಸೀರಿಯಲ್ ಹಾಗೂ ಇತರ ಕಡೆ ಸಣ್ಣ ಪುಟ್ಟ ನಟನೆಗೆ ಅವಕಾಶ ಲಭಿಸುತ್ತದೆ. ಸಣ್ಣ ಪುಟ್ಟ ನಟನೆಯಲ್ಲಿ ಸಿಗುತ್ತಿದ್ದ ಸಂಬಳ ಎರಡು ಹೊತ್ತಿನ ಊಟಕ್ಕೂ ಸಾಲದ್ದಷ್ಟು ಇರುತ್ತಿತ್ತು. ಪಂಕಾಜ್ ತ್ರಿಪಾಠಿಗೆ ಮೊದಲ ಬಾರಿ ‘ ರನ್ ‘ ಚಿತ್ರದಲ್ಲಿ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ದೊರಕಿತ್ತು.ಆದರೆ ಆ ಪಾತ್ರ ಹೀಗೆ ಬಂದು, ಹಾಗೆ ಹೋಗುವಷ್ಟು ಸಣ್ಣದಾಗಿತ್ತು. ನೂರಾರು ಕಡೆ ಆಡಿಷನ್ ನೀಡಿ, ಕಾಯುವ ದಿನಗಳು ಪಂಕಾಗ್ ಬದುಕಿನ ಅತ್ಯಂತ ಕರಾಳ ದಿನಗಳಾಗಿತ್ತು.

ಬದುಕು ಬದಲಾಯಿಸಿದ Gangs of wasseypur :  ವರ್ಷಗಳು ಉರುಳುತ್ತವೆ.2010 ರಲ್ಲಿ ಸ್ಟಾರ್ ಪ್ಲಸ್ ನಲ್ಲಿ ಬರುತ್ತಿದ್ದ “ ಗುಲಾಲ್ “ ಕಾರ್ಯಕ್ರಮದಲ್ಲಿ ಪಂಕಾಜ್ ನಟಿಸುತ್ತಾ ಇದ್ರು. ನಟನೆ ನೋಡಿ ಮೆಚ್ಚಿದ ನಿರ್ದೇಶಕ ಮುಕೇಶ್ ಚಾಬ್ರ. ಅವರನ್ನು ಅನುರಾಗ್ ಕಶ್ಯಪ್ ರ Gangs of wasseypur ಚಿತ್ರದ ಆಡಿಷನ್ ನಲ್ಲಿ ಭಾಗವಹಿಸಲು ಹೇಳುತ್ತಾರೆ. ಪಂಕಾಜ್ ಸತತ ಎಂಟು ಗಂಟೆಯ ಆಡಿಷನ್ ಬಳಿಕವೂ ಅನುರಾಗ್ ಕಶ್ಯಪ್ ಪಂಕಾಜ್ ರನ್ನು ನಿರಾಕರಿಸುತ್ತಾರೆ.ಆದರೆ ಅದೃಷ್ಟ ಎಂಬಂತೆ, ಕಶ್ಯಪ್ ಮುಕೇಶ್ ಅವರ ಒತ್ತಾಯದಿಂದ ಪಂಕಾಜ್ ರನ್ನು ಚಿತ್ರಕ್ಕೆ ಆಯ್ದುಕೊಂಡು ಸುಲ್ತಾನ್ ಪಾತ್ರವನ್ನು ನೀಡುತ್ತಾರೆ.

ಪಂಕಾಜ್ ಸುಲ್ತಾನ್ ನಾಗಿ ಹಾಗೂ ಚಿತ್ರ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಹಿಟ್ ಆಗಿ ಹೊರ ಹೊಮ್ಮಿದಾಗ, ಪಂಕಾಜ್ ತ್ರಿಪಾಠಿ ಎಂಬ ಬಿಹಾರದ ಹುಡುಗ ಬಾಲಿವುಡ್ ಬಣ್ಣದ ಲೋಕದಲ್ಲಿ ಮಿಂಚಲು ಆರಂಭಿಸುತ್ತಾರೆ.

ಸಾಲು ಸಾಲು ಸಿನಿಮಾಗಳ ಸರದಾರ : Gangs of wasseypur ಚಿತ್ರದ ನಟನೆಯಿಂದ ಜನಮಾನಸದಲ್ಲಿ ನೆಲೆ ನಿಲ್ಲುವ ಪಂಕಾಜ್ ತ್ರಿಪಾಠಿ, ಮುಂದೆ ಫುಕ್ರೆ, ಮಸಾನ್, ನಿಲ್ ಬಟ್ಟೆ ಸನ್ನಾಟಾ, ಬರೇಲಿ ಕಿ ಬರ್ಫಿ, ನ್ಯೂಟನ್ ,ಫುಕ್ರೆ ರಿಟಾನ್ಸ್, ಸ್ಟ್ರೀ, ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್, ಇನ್ನು ಹಲವಾರು ಚಿತ್ರಗಳಲ್ಲಿ ಮಿಂಚಿದ್ದಾರೆ. ಮಿರ್ಜಾಪುರ್ ವೆಬ್ ಸಿರೀಸ್ ನ ಸೀಸನ್ 1 ಹಾಗೂ 2 ರಲ್ಲಿ ಹಾಗೂ Sacred Games ನ ಅಭಿನಯಕ್ಕೆ ಮನಸೋಲದವರೇ ಇಲ್ಲ. ನ್ಯೂಟಾನ್ ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಸದ್ಯ ಪಂಕಾಜ್ ತ್ರಿಪಾಠಿ ತನ್ನ ಸಹಜ ನಟನೆಯಿಂದ ಎಂಥಾ ಪಾತ್ರವನ್ನೂ, ಪ್ರೇಕ್ಷಕನನ್ನು ಸೆಳೆದಿಟ್ಟುಕೊಳ್ಳುವಷ್ಟು ಇಷ್ಟವಾಗುವ ನಟ.

 

ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next