ಮೊನ್ನೆ ಒಂದು ಜಾತ್ರೆ ಹೋಗಿದ್ದೆ. ಎಲ್ಲ ಹಬ್ಬಗಳಂತೆ ಅಲ್ಲಿಯೂ ಐಸ್ ಕ್ರೀಮ್, ಗೇಮ್ಸ್, ತಿಂಡಿ ತಿನಿಸು, ಬಳೆ, ಆಟಿಕೆ ಅಂಗಡಿ ಹೀಗೆ ಹತ್ತು ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ರಸ್ತೆಯ ಬದಿಯಲ್ಲಿ ತಲೆಎತ್ತಿದ್ದವು. ಈ ಜನಜಂಗುಳಿಯ ನಡುವೆ ದಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದಾಗ ಒಬ್ಬ ಹುಡುಗ ಕಣ್ಣಿಗೆ ಕಾಣಿಸಿದ.
ನೋಡಲು 14ರಿಂದ 16 ವರ್ಷದ ಒಳಗಿನ ಬಾಲಕ. ಬಹಳ ಹಳೆಯ ಬಟ್ಟೆಗಳನ್ನು ಧರಿಸಿದ್ದ ಅವನು ಕೈಯಲ್ಲಿ ಆಲಂಕಾರಿಕ ಕೃತಕ ಹೂವಿನ ಮಾಲೆಯನ್ನು ಹಿಡಿದುಕೊಂಡು ಮಾರುತ್ತಿದ್ದ. ಅವನ ಒಂದು ಫೋಟೋ ತೆಗೆಯುವ ಮನಸ್ಸಾಗಿ ಒಂದೆರೆಡು ಫೋಟೋ ಕ್ಲಿಕ್ಕಿಸಿದೆ. ಅನಂತರ ತೆಗೆದ ಫೋಟೋವನ್ನು ಆ ಹುಡುಗನಿಗೆ ತೋರಿಸಿದೆ. ಅವನಿಗೂ ಖುಷಿಯಾಯಿತು. ಅವಕಾಶ ದೊರೆಯಿತೆಂದು ಅವನೊಡನೆ ಮಾತಿಗಿಳಿದೆ.
7ನೇ ತರಗತಿಯಲ್ಲಿ ಕಲಿಯುತ್ತಿರುವ ಆತ ತನ್ನೂರಿನಿಂದ ಇಲ್ಲಿಗೆ ಬಂದು ದುಡಿಯುತ್ತಿದ್ದ. ಅವನ ಜತೆ ದೊಡ್ಡ ಗುಂಪೇ ಇಲ್ಲಿಗೆ ವ್ಯಾಪಾರದ ಸಲುವಾಗಿ ಬಂದಿತ್ತು. ಆತನ ತಾಯಿಗೆ ಅನಾರೋಗ್ಯ. ತಂದೆ ಆರೋಗ್ಯವು ಉತ್ತಮವಾಗಿಲ್ಲ. ಹೀಗೆ ತುಂಬ ಹೊತ್ತು ಮಾತನಾಡಿ ನಾನು ನನ್ನ ದಾರಿ ಹಿಡಿದೆ. ಇನ್ನೊಂದು ಕಡೆ ಕೆಲವು ಹೆಂಗಸರು ಸಣ್ಣ ಮಕ್ಕಳನ್ನು ಸೊಂಟದಲ್ಲಿ ಕೂರಿಸಿಕೊಂಡು ಪೆನ್ನುಗಳನ್ನು ಮಾರಾಟ ಮಾಡುತ್ತಿದ್ದರು. ತಿಂಗಳ ಮಗುವನ್ನು ಮುಂದಿಟ್ಟುಕೊಂಡು ಜನರಲ್ಲಿ ಸಹಾನುಭೂತಿ ಗಿಟ್ಟಿಸಿಕೊಳ್ಳುತ್ತಾರೆ ಎಂದು ಒಂದು ಕಡೆ ಸಿಟ್ಟು ಬಂದರೇ, ಇನ್ನೊಂದು ಕಡೆಯಲ್ಲಿ ಆ ಎಳೆಗೂಸನ್ನು ಹಿಡಿದುಕೊಂಡು ಮಾರಾಟಕ್ಕೆ ಬರುತ್ತಾರಲ್ಲ ಎಂದು ಬೇಸರವೂ ಆಯಿತು.
ಕೆಲವು ಕಡೆಗಳಲ್ಲಿ ಸಣ್ಣ ಹುಡುಗಿಯನ್ನು ಇಟ್ಟುಕೊಂಡು ಹಗ್ಗದಲ್ಲಿ ನಡೆಯುವ ಸಾಹಸ ಪ್ರದರ್ಶಿಸುತ್ತಿದ್ದರೆ, ಅವರ ಧೈರ್ಯ ಮೆಚ್ಚಬೇಕೋ, ಶಾಲೆಗೆ ಹೋಗುವ ಮಕ್ಕಳು ಈ ರೀತಿ ದುಡಿಯಬೇಕಾದ ಅನಿವಾರ್ಯತೆಗೆ ಮರುಗಬೇಕೋ ತಿಳಿಯಲಿಲ್ಲ. ಹೀಗೆ ಶಾಲೆಗೇ ಹೋಗುವ ಮಕ್ಕಳು ದುಡಿಯುವ ಸಲುವಾಗಿ ಶಾಲೆ ಬಿಟ್ಟರೆ ಮಕ್ಕಳ ಗತಿ ಏನಾಗಬೇಡ?
ಈ ವಿಷಯದಲ್ಲಿ ನಾನು ಅದೃಷ್ಟವಂತೆ ಎಂತೆನಿಸಿತು. ನನ್ನ ಹೆತ್ತವರ ಬಗ್ಗೆ ಹೆಮ್ಮೆಯಾಯಿತು. ಏನೇ ಕಷ್ಟ ಇದ್ದರೂ ಯಾವುದನ್ನೂ ತೋರಿಸದೆ ನಮ್ಮನ್ನು ಓದಿಸಲು ಹಗಲು ರಾತ್ರಿ ಎನ್ನದೆ ದುಡಿಯುವ ಅವರ ಋಣ ತೀರಿಸಲು ಸಾಧ್ಯವೇ?
ಈ ಜಾತ್ರೆಯಲ್ಲಿ ನನಗೆ ಹಲವಾರು ವ್ಯಕ್ತಿತ್ವಗಳ ದರ್ಶನವಾಯಿತು. ಪ್ರತೀ ವ್ಯಕ್ತಿತ್ವವೂ ನನಗೆ ಒಂದೊಂದು ಪಾಠ ಕಲಿಸಿದೆ.
- ಪೂರ್ಣಶ್ರೀ ಕೆ.
ಎಸ್.ಡಿ.ಎಂ. ಕಾಲೇಜು ಉಜಿರೆ