Advertisement
ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ಖಾಸಗಿಯಾಗಿ ಕ್ಲಿನಿಕ್ ನಡೆಸುತ್ತಿರುವ ಕುವೆಂಪುನಗರ ನಿವಾಸಿ ಡಾ.ಪ್ರಭುಲಿಂಗಸ್ವಾಮಿ ಸಂಗನಾಳ ಮಠ ಅವರ ನಿಸ್ವಾರ್ಥ ಸೇವೆಗೆ ಏರ್‌ಫ್ರಾನ್ಸ್ ಪ್ಯಾಸೆಂಜರ್ ಮೆಡಿಕಲ್ ಸರ್ವೀಸಸ್ ಪ್ರಶಂಸೆ ವ್ಯಕ್ತಪಡಿಸಿದೆ.
ನ್ಯೂಯಾರ್ಕ್‌ಗೆ ತೆರಳಿದ್ದ ಡಾ.ಪ್ರಭುಲಿಂಗಸ್ವಾಮಿ ಅವರು ನ. 13ರಂದು ಸ್ವದೇಶಕ್ಕೆ ಹಿಂತಿರುಗುತ್ತಿದ್ದರು. ನ್ಯೂಯಾರ್ಕ್‌ನಿಂದ ಏರ್‌ಫ್ರಾನ್ಸ್ ವಿಮಾನದಲ್ಲಿ ಪ್ಯಾರೀಸ್‌ಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬರುತ್ತಿದ್ದಾಗ ಪ್ಯಾರೀಸ್‌ನಿಂದ ವಿಮಾನ ಟೇಕಾಫ್ ಆದ 2ಗಂಟೆ ಬಳಿಕ ಯೂರೋಪಿನ ಹಿರಿಯ ನಾಗರಿಕರೊಬ್ಬರು ಹಠಾತ್ತನೆ ಅಸ್ವಸ್ಥರಾದರು. ತಕ್ಷಣ ವಿಮಾನದ ಕ್ಯಾಫ್ಟನ್ “ಯಾರಾದರೂ ವೈದ್ಯರಿದ್ದರೆ ಸಹಾಯಮಾಡಿ’ ಎಂದು ಪ್ರಕಟಿಸಿದರು. ಜಾಗೃತರಾದ ಡಾ.ಪ್ರಭುಲಿಂಗಸ್ವಾಮಿ ಅವರು ಅಸ್ವಸ್ಥರಾಗಿದ್ದ ಸಹ ಪ್ರಯಾಣಿಕನ ನೆರವಿಗೆ ಧಾವಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದರು. “”ವಿಮಾನದಲ್ಲಿದ್ದ ದಾದಿಯರ ಸಹಾಯ ಪಡೆದು ಅಸ್ವಸ್ಥರಾಗಿದ್ದ ಯುರೋಪ್ ಪ್ರಜೆಯನ್ನು ಪರೀಕ್ಷಿಸಿದಾಗ ಅವರ ಎದೆಬಡಿತ, ಪಲ್ಸ್, ಉಸಿರಾಟದಲ್ಲಿ ವ್ಯತ್ಯಯ ಉಂಟಾದಂತೆ ಕಂಡುಬಂತು. ಕೂಡಲೇ ಕಾರ್ಡಿಯಾಕ್ ಮಸಾಜ್ ಮಾಡಿ ಕಾಲು-ಕೈಗಳನ್ನು ಉಜ್ಜಿ ದೇಹವನ್ನು ಕೊಂಚ ಬಿಸಿಯಾಗಿಸಿದಾಗ ಅವರು ನಿಧಾನವಾಗಿ ಪ್ರತಿಕ್ರಿಯಿಸಲಾರಂಭಿಸಿದರು. ಸುಮಾರು ಒಂದು ಗಂಟೆ ಬಳಿಕ ಚೇತರಿಸಿಕೊಂಡರು. ಆಗ ಹಣ್ಣಿನ ರಸ ನೀಡಲಾಯಿತು” ಎಂದು ಡಾ.ಪ್ರಭುಲಿಂಗಸ್ವಾಮಿ ವಿವರಿಸಿದರು. “”ಅಲ್ಲದೆ, ಏರ್‌ಫ್ರಾನ್ಸ್ ಮೆಡಿಕಲ್ ಸರ್ವೀಸಸ್‌ನ ಡಾ.ವಿನ್ಸೆಂಟ್ ಅವರು ನನಗೆ ಕರೆ ಮಾಡಿ ಧನ್ಯವಾದ ತಿಳಿಸಿದರು. 100 ಯೂರೋ ಮೊತ್ತದ ಉಡುಗೊರೆ ಚೀಟಿಯನ್ನೂ ಕಳುಹಿಸಿಕೊಟ್ಟಿದ್ದಾರೆ” ಎಂದರು.