ಕೊಪ್ಪಳ: ವಿರುಪಾಪೂರಗಡ್ಡೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನರ ರಕ್ಷಣೆಗೆ ಮುಂದಾಗಿದ್ದ ರಕ್ಷಣಾ ತಂಡವನ್ನು ಅವರು ಧರಿಸಿದ್ದ ಕವಚವೇ ಕಾಪಾಡಿ ಅವರಿಗೆ ಮರು ಜನ್ಮ ನೀಡಿದೆ. ಎಂತಹ ಸಂದಿಗ್ಧ ಸ್ಥಿತಿಯಲ್ಲೂ ನಮ್ಮ ಜೀವ ಪಣಕ್ಕಿಟ್ಟು ಜನರ ಜೀವ ಕಾಪಾಡುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು ಎಂದು ರಕ್ಷಣಾ ತಂಡದಲ್ಲಿ ನೀರುಪಾಲಾಗಿ ರಕ್ಷಣೆಯಾದ ಅಗ್ನಿ ಶಾಮಕ ದಳದ ಸಿಬ್ಬಂದಿ ಸೂಗನಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಆರ್‌ಎಫ್‌ನ ಒಂದು ತಂಡ ಮೊದಲೇ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು. ಆದರೆ ವಿರುಪಾಪೂರಗಡ್ಡೆಯಲ್ಲಿ ತುಂಬಾ ಜನರಿದ್ದಾರೆ. ವಿದೇಶಿಗರು, ಪ್ರವಾಸಿಗರು ಹೆಚ್ಚಿದ್ದಾರೆ ಎಂಬ ಮಾಹಿತಿ ನಮ್ಮ ತಂಡಕ್ಕೆ ಲಭ್ಯವಾದ ಹಿನ್ನೆಲೆಯಲ್ಲಿ ನಾನು ಸೇರಿದಂತೆ ಐವರು ಮತ್ತೂಂದು ಬೋಟ್‌ನಲ್ಲಿ ಗಡ್ಡೆಗೆ ತೆರಳು ಸಿದ್ಧರಾದೆವು. ನಾವೆಲ್ಲರೂ ರಕ್ಷಣಾ ಕವಚ ಕಟ್ಟಿಕೊಂಡೇ ಬೋಟ್ ಮೂಲಕ ತೆರಳಿದೆವು. ನೀರಿನ ಸೆಳೆತ ದಾಟುವ ವೇಳೆ ನೀರಿನ ರಭಸ ಹೆಚ್ಚಾಗಿದ್ದರಿಂದ ನಮ್ಮ ಬೋಟ್ ಹೊಯ್ದಾಡ ತೊಡಗಿತು. ಆದರೂ ಬೋಟ್ ಮುಂದೆ ನಡೆಸುತ್ತಿದ್ದಂತೆ ಅಲೆಗಳು ಹೆಚ್ಚಾಗಿದ್ದರಿಂದ ಏಕಾ ಏಕಿ ನಮ್ಮ ಬೋಟ್ ನಿಯಂತ್ರಣ ತಪ್ಪಿತು. ಇದರಿಂದ ಅದರೊಳಗಿದ್ದ ಐವರು ನೀರುಪಾಲಾದೆವು ಎಂದು ನೀರಿನಲ್ಲಿ ಮುಳುಗಿದ ಪರಿಸ್ಥಿತಿಯನ್ನು ವಿವರಿಸಿದರು.
ನೀರಿನ ರಭಸ ಜೋರಾಗಿದ್ದರಿಂದ ಐವರು ನೀರಿನಲ್ಲಿ ವೇಗವಾಗಿ ತೇಲುತ್ತಾ ಸಾಗಿದೆವು. ನಾನು ಸಮೀಪದಲ್ಲೇ ಗಿಡದ ಟೊಂಗೆ ಹಿಡಿದು ನಿಂತಿದ್ದೆ. ನನ್ನ ಹಿಂದಿನ ಮತ್ತೋರ್ವ ಸದಸ್ಯ ಟೊಂಗೆ ಸಿಗದೇ ನನ್ನ ಕಾಲು ಹಿಡಿದು ನಿಂತಿದ್ದನು. ಆದರೆ ಟೊಂಗೆ ಸಣ್ಣದ್ದಾಗಿದ್ದರಿಂದ ನನ್ನ ಕೈ ಜಾರಿತು. ಇಬ್ಬರೂ ಮತ್ತೆ ನೀರಿನ ಸೆಳೆತದಲ್ಲಿ ತೇಲಿ ಹೋದೆವು. ಮುಂದೆ ಹೋದಂತೆಲ್ಲ ನನಗೆ ಮತ್ತೂಂದು ಗಿಡದ ಟೊಂಗೆ ಸಿಕ್ಕಿತು. ಅದರ ಆಸರೆಯಲ್ಲೇ ನಾನು ಹಿಡಿದು ನಿಂತಿದ್ದೆ. 20 ನಿಮಿಷಗಳ ಕಾಲ ಅಲ್ಲೆ ನಿಂತಿದ್ದೆನು. ಹರಿಗೋಲಿನ ಅಂಬಿಗ ನನ್ನ ಬಳಿ ಬಂದು ರಕ್ಷಣೆ ಮಾಡಿದ ನಿಜಕ್ಕೂ ನಮ್ಮ ಜೀವ ಉಳಿದಿದೆಯಂದರೆ ನಮ್ಮ ದೇಹದ ರಕ್ಷಾ ಕವಚವೇ ಉಳಿಸಿದೆ. ಇಲ್ಲದಿದ್ದರೆ ನಮ್ಮ ರಕ್ಷಣೆಯಾಗುತ್ತಿರಲಿಲ್ಲ ಎಂದರು.
ನಮಗೆ ಜನರ ರಕ್ಷಣೆಯೇ ಮುಖ್ಯ ಉದ್ದೇಶವಾಗಿತ್ತು. ಎಂತಹ ಅಪಾಯದ ಪರಿಸ್ಥಿತಿಯಲ್ಲೂ ನಾವು ಮುನ್ನುಗ್ಗುವ ಪರಿಸ್ಥಿತಿಯಲ್ಲಿದ್ದೆವು. ನೀರಿನ ರಭಸ ನಮಗೆ ಅಡ್ಡಿಯಾಗುತ್ತಿತ್ತು. ಜೊತೆಗೆ ನಮ್ಮ ಬೋಟಿಗೆ ಕಲ್ಲು ಬಡಿದಿದ್ದರಿಂದ ನಿಯಂತ್ರಣ ತಪ್ಪಿ ಇಷ್ಟೆಲ್ಲ ತೊಂದರೆಯಾಯಿತು. ಆದರೂ ನಮ್ಮ ಇತರೆ ಸದಸ್ಯರು ಬದುಕುಳಿದಿದ್ದಾರೆ. ಯಾವುದೇ ಪ್ರಾಣಾಯ ಸಂಭವಿಸಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.