ಇಂಡಿ: ಭುಂಯ್ಯಾರ ಗ್ರಾಮದಲ್ಲಿ ಮನೆಗೆ ನೀರು ನುಗ್ಗಿದ್ದರಿಂದ ಹಗೆ (ನೆಲಮಳಿಗೆ) ಕುಸಿಯುತ್ತಿವೆ. ಈಗಾಗಲೆ ಅಂದಾಜು 35 ಹಗೆಗಳು ಕುಸಿದಿದ್ದು, ಇನ್ನೂ ಎಷ್ಟು ಹಗೆ ಇವೆ ಎಂಬುದೇ ಗೊತ್ತಿಲ್ಲ. ಚಂದಪ್ಪ ಹರಿಜನ, ಗಂಗಪ್ಪ ನಾಯ್ಕೋಡಿ,
ದೇವೇಂದ್ರ ತಳವಾರ, ಸುನಂದಾ ನಾಟೀಕಾರ,ಭಾಗಪ್ಪ ತಳವಾರ ಅವರ ಹಗೆಗಳು ಕುಸಿದಿವೆ.ಈವರಿಗೆ ಹಗೆಗಳಿರುವುದೇ ಗೊತ್ತಿಲ್ಲ. ಪ್ರವಾಹವಾಗಿ ಮನೆಯಲ್ಲಿ ಮೂರ್ನಾಲ್ಕುದಿನ ನೀರು ತುಂಬಿಕೊಂಡಿದ್ದರಿಂದ ಈಗ ಹಗೆಗಳು ಕುಸಿದು ನೆಲದೊಳಗೆ ಇಳಿಯುತ್ತಿದ್ದು ತಮ್ಮ ಮನೆಗಳಿಗೆ ಹೋಗಲು ಭಯ ಪಡುವಂತಾಗಿದೆ.
ಭುಂಯ್ನಾರ ಗ್ರಾಮದ ಸುನಂದಾ ನಾಟೀಕಾರ ದೇವರ ಮುಂದೆ ದೀಪ ಹಚ್ಚಬೇಕೆಂದುಮನೆಯಲ್ಲಿ ಕಾಲಿಡುತ್ತಲೆ ಕೆಳಗಿನ ಹಗೆ ಕುಸಿದುಅದರಲ್ಲೇ ಇಳಿದಿದ್ದಾರೆ. ಪಕ್ಕದಲ್ಲೇ ಇದ್ದ ಜನರಿಗೆ ನೆಲ ಕುಸಿದ ಶಬ್ದ ಕೇಳಿ ಬಂದು ನೋಡುತ್ತಿದ್ದಂತೆಸುನಂದಾ ಅವರ ತಲೆ ಮಾತ್ರ ಕಾಣುತ್ತಿತ್ತು. ತಕ್ಷಣ ಜನ ನಿಚ್ಚುಣಿಕೆ ತಂದು ಅವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಹಿಳೆಗೆ ಮರುಜೀವ ಬಂದಂತಾಗಿದೆ.
ಪ್ರವಾಹದಿಂದ ಸಾಕಷ್ಟು ಮನೆಗಳು ಬಿದ್ದಿವೆ. ದುಂಡಪ್ಪ ಸಿಂದಗಿ, ಓಗೆಪ್ಪ ಒಡೆಯರ್, ಶ್ರೀಮಂತ ಗೋಳಸಾರ, ಅಮೋಘಿ ನಾಟೀಕಾರ, ಬಸವರಾಜ ಲಾಳಸಂಗಿ, ದೇವೇಂದ್ರ ತಳವಾರ, ಅಮೋಘಿ ತಳವಾರ, ಗಿರಮಲ್ಲ ತಳವಾರ,ಭಿಮಶ್ಯಾ ಮಕಣಾಪುರ, ಕಲ್ಲಪ್ಪ ನಾಟೀಕಾರ, ಶಿವಯೋಗೆಪ್ಪ ಉಡಚಣ, ಆನಂದ ಗೊಳಸಾರ ಸೇರಿದಂತೆ ಎರಡು ನೂರಕ್ಕಿಂತ ಹೆಚ್ಚು ಜನರ ಮನೆ ಸಂಪೂರ್ಣ ಕುಸಿದಿವೆ.
ಪ್ರವಾಹದಿಂದ ನಾನು ಹಿರೇಬೇವನೂರಿನ ಕಾಳಜಿ ಕೇಂದ್ರದಲ್ಲಿದ್ದೆ. ಪ್ರವಾಹ ಕಡಿಮೆಯಗಿದೆ ಎಂದು ತಿಳಿದ ನಂತರ ದೇವರಿಗೆ ದೀಪ ಹಚ್ಚಲು ಬಾಗಿಲು ತೆರೆದುಒಳಗೆ ಕಾಲಿಡುತ್ತಿದ್ದಂತೆ ನೆಲ ಕುಸಿದು ಭೂಮಿಯಲ್ಲೇ ಇಳಿದೆ. ನೆರೆಯವರು ಬಂದು ನನ್ನನ್ನು ಮೇಲೆತ್ತಿ ಜೀವ ಕಾಪಾಡಿದರು. ಮನೆಯಲ್ಲೇ ಹಗೆ ಇರುವ ವಿಚಾರ ನಮಗೆ ಗೊತ್ತಿರಲಿಲ್ಲ.
– ಸುನಂದಾ ನಾಟೀಕಾರ
ಭುಂಯ್ಯಾರಗ್ರಾಮದಲ್ಲಿ 200ಕ್ಕಿಂತ ಹೆಚ್ಚು ಮನೆಗಳು ಕುಸಿದು ಬಿದ್ದು ಜನ ಬೀದಿ ಪಾಲಾಗಿದ್ದಾರೆ. ಕೂಡಲೆ ಸರಕಾರ ಸಂಪೂರ್ಣ ಗ್ರಾಮವನ್ನು ಬೇರೆಡೆ ಸ್ಥಳಾಂತರ ಮಾಡಬೇಕು. ತುರ್ತಾಗಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿ ಬದುಕು ಕಟ್ಟಿ ಕೊಡಬೇಕು.
ಹುಚ್ಚಪ್ಪ ತಳವಾರ
-ಉಮೇಶ ಬಳಬಟ್ಟಿ