ಹೊಸವರ್ಷ ಎಂದರೆ ನನಗೆ ನನ್ನ ಕಾಲೇಜು ದಿನಗಳೇ ನೆನಪಾಗುತ್ತವೆ. ಅಲ್ಲಿಯವರೆಗೂ ಇಂಥಾದ್ದೊಂದು ಆಚರಣೆಯ ಬಗ್ಗೆ ಅರಿವೇ ಇರಲಿಲ್ಲ. ಕಾಲೇಜು ಎಂದರೆ ಹೇಳಿಕೇಳಿ ಏರು ಯೌವನದ ಸಮಯವಲ್ಲವೆ? ಸಹಜವಾಗಿಯೇ ಹೊಸ ವರ್ಷಕ್ಕೂ ಯೌವನಕ್ಕೂ ಸಂಬಂಧವಿದೆ. ನಾನು, ನನ್ನ ಸ್ನೇಹಿತರು ನಮ್ಮದೇ ಶೈಲಿಯಲ್ಲಿ ಹೊಸವರ್ಷವನ್ನು ಆಚರಿಸುತ್ತಿದ್ದೆವು. ಆದರೆ, ಕಾಲೇಜು ಕಳೆದು ಮುಂದಿನ ಬದುಕಿನಲ್ಲಿ ಇವೆಲ್ಲ ಮರೆತೇಹೋಗುತ್ತವೆ. ಜೀವನದ ಜಂಜಾಟಗಳೇ ಅಧಿಕವಾಗುತ್ತವೆ.
ಆದರೆ, ನನ್ನ ಪಾಲಿಗೆ ಹಾಗಾಗಲಿಲ್ಲ. ಸಿನೆಮಾ ನನ್ನ ಬದುಕಿನಲ್ಲಿ ಹೊಸ ಸವಾಲುಗಳನ್ನು ತಂದೊಡ್ಡಿ ನಿತ್ಯನೂತನವಾಗಿಸುತ್ತದೆ. ಪ್ರತಿದಿನವನ್ನೂ ಹೊಸತೆಂದು ಭಾವಿಸುವ ನನಗೆ ವರ್ಷವೇ ಹೊಸತಾಗುವುದರಲ್ಲಿ ಅಚ್ಚರಿಯೇನೋ ಇಲ್ಲ.
ನಾನು ಹೊಸವರ್ಷ ಬಂದಾಗಲೆಲ್ಲ ಹಳೆಯ ವರ್ಷದ ಕಡೆಗೊಮ್ಮೆ ದೃಷ್ಟಿಸುತ್ತೇನೆ. 2016 ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ವರ್ಷವಾಗಿತ್ತು. ಅದಕ್ಕೆ ಕಾರಣವಿದೆ. ನಮ್ಮದೇ ನಿರ್ಮಾಣದ ಕಿರಿಕ್ ಪಾರ್ಟಿ 2016ರಲ್ಲಿ ಬಿಡುಗಡೆಯಾದದ್ದು. ಹಾಗಾಗಿ, ಅದು ಒಂಥರಾ ಸ್ಪೆಷಲ್. ಹಾಗಾಗಿ, ಸಿನೆಮಾ ಕ್ಷೇತ್ರದವನಾದ ನನಗೆ ಸಿನೆಮಾದ ಮೂಲಕವೇ ಹೊಸವರ್ಷ ಆಚರಿಸಬೇಕೆಂಬ ಆಸೆ. ಈ ವರ್ಷವೂ ಹಂಬಲ್ ಪೊಲಿಟೀಶಿಯನ್ ಬಿಡುಗಡೆಯಾಗಲಿದೆ. ಜೊತೆಗೆ, ಚಮಕ್ ಕೂಡ ತೆರೆಕಾಣುತ್ತಿರುವುದು ನಿಮಗೆಲ್ಲ ತಿಳಿದಿದೆ. ಈ ಎರಡೂ ಚಿತ್ರಗಳು ನನ್ನ ಹೊಸವರ್ಷಾಚರಣೆಯ ಸಂಭ್ರಮವನ್ನು ಹೆಚ್ಚಿಸುತ್ತಿವೆ.
ನನ್ನ ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನೆಮಾವನ್ನು ನೀವೆಲ್ಲ ನೋಡಿರಬಹುದು. ಒಂದು ರೀತಿಯಲ್ಲಿ “ಮರೆವಿನ ಕತೆ’ ಇದು. ಮನುಷ್ಯನಿಗೆ “ನೆನಪು’ ಎಷ್ಟೊಂದು ಮುಖ್ಯವಾದದ್ದು ಎಂದು ಈ ಚಲನಚಿತ್ರವನ್ನು ನೋಡಿದಾಗ ತಿಳಿದುಬರಬಹುದು. ನೆನಪು ಇಲ್ಲದೆ ಕನಸು ಇಲ್ಲ. ಹಳೆಯ ವರ್ಷದ ನೆನಪನ್ನು ಹೊಂದಿರದವರು, ಹೊಸವರ್ಷದ ಕನಸನ್ನು ಕಟ್ಟಲಾರರು. ಹಳೆಯ ವರ್ಷವನ್ನೂ ಹಿರಿಯ ವ್ಯಕ್ತಿಗಳನ್ನೂ ಸ್ಮರಿಸದೆ ನಮ್ಮ ಯಾವ ಸಂಭ್ರಮಕ್ಕೂ ಅರ್ಥವಿಲ್ಲ.
ಹೊಸವರ್ಷವನ್ನು ವೈಭವದೊಂದಿಗೆ ಆಚರಿಸುವವರಿದ್ದಾರೆ. ಅದು ತಪ್ಪಲ್ಲ. ಬದುಕಿನ ರಿಮೈಂಡರ್ ಅಷ್ಟೆ. ರಿಮೈಂಡಿಂಗ್ ಎಂದರೆ ನೆನಪಿಸಿಕೊಳ್ಳುವುದು ಎಂದೇ ಅರ್ಥ. ನೆನಪಿನ ಬುನಾದಿಯ ಮೇಲೆ ಕಟ್ಟಿದ ಕನಸುಗಳು 2018ನ್ನು ಮುನ್ನಡೆಸಲಿ. ಹೊಸವರ್ಷದ ಶುಭಾಶಯಗಳು.