ಹೊನ್ನಾವರ: 25-30 ಸಾವಿರ ರೂ.ಗಳ ಒಂದು ಇಸಿಜಿ ಯಂತ್ರ, ಸಾಮಾನ್ಯವಾಗಿ ಎಲ್ಲರಲ್ಲಿರುವ 10 ಸಾವಿರ ರೂ. ಬೆಲೆಯ ವಾಟ್ಸ್‌ಅಪ್ ಸಹಿತ ಎಂಡ್ರಾಯಿಡ್ ಫೋನ್. ಇವುಗಳ ಮಧ್ಯೆ ಒಬ್ಬ ಮಾನವೀಯತೆ ತುಂಬಿದ ವೈದ್ಯ ಇದ್ದರೆ ಗ್ರಾಮೀಣ ಭಾಗದಲ್ಲೂ ಜೀವ ಉಳಿಸಬಹುದು ಎಂಬುದನ್ನು ಸಿಎಡಿ (ಕಾರ್ಡಿಯಾಲಜಿ ಎಟ್ ಡೋರ್‌ಸ್ಟೆಪ್) ವೈದ್ಯರ ತಂಡ ಸಾಸಿ ತೋರಿಸಿದೆ. ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ರ ತಲೆಯಲ್ಲಿ ಓಡಾಡಿದ ಈ ಜೀವನರೇಖೆ ಇಂದು ಉತ್ತರ ಕನ್ನಡ ಸಹಿತ 10 ಜಿಲ್ಲೆಗಳ 175ಕೇಂದ್ರಗಳಿಗೆ ಹಬ್ಬಿ ನೂರಾರು ಜೀವಗಳನ್ನು ಉಳಿಸಿದೆ. ಇನ್ನೊಂದು ಹಂತದಲ್ಲಿ ಮುಂಡಗೋಡ ಸಹಿತ ಕೆಲವು ಉತ್ತರಕನ್ನಡದ ಗ್ರಾಮೀಣ ಆಸ್ಪತ್ರೆಗಳು ಯೋಜನೆಯಲ್ಲಿ ಸೇರ್ಪಡೆಯಾಗಲಿವೆ.
ಡಾ| ಕಾಮತ್ ಗ್ರಾಮೀಣ ವೈದ್ಯರೊಂದಿಗೆ ಮಾತನಾಡಿ ಅದನ್ನು ಬಳಸುವ ವಿವರ ತಿಳಿಸಿ, ಯಂತ್ರಗಳನ್ನು ದಾನಿಗಳಿಂದ ಮತ್ತು ಸಂಘ ಸಂಸ್ಥೆಗಳಿಂದ ಯಂತ್ರದ ಮೊತ್ತವನ್ನು ಪಡೆದು ಕಂಪನಿಗೆ ವರ್ಗಾಯಿಸುತ್ತಾರೆ. ಕಂಪನಿಯವರು ಯಂತ್ರವನ್ನು ಒಪ್ಪಿಸಿ ಬರುತ್ತಾರೆ. ವೈದ್ಯರು ಇಸಿಜಿಗೆ ಹಣ ಪಡೆಯುವುದಿಲ್ಲ. ಹೃದಯ ಸಮಸ್ಯೆ ಇದ್ದವರು ಯಾವುದೇ ತಜ್ಞ ವೈದ್ಯರಿರುವ ದೊಡ್ಡ ಆಸ್ಪತ್ರೆಗೆ ಹೋಗಬಹುದು. ನಮ್ಮಲ್ಲಿಗೆ ಬನ್ನಿ ಎಂದು ಕರೆಯುವುದಿಲ್ಲ. ಡಾ| ಕಾಮತ್ ಹಾಗೂ ಅವರ ಬಳಗದ ಸೇವೆ ಸಂಪೂರ್ಣ ಉಚಿತ. ವೈದ್ಯರ ದಿನದಂದು ಹಾಸನ ಜಿಲ್ಲೆಗೆ 8ಉಪಕರಣವನ್ನು ನೀಡಲಾಗಿದೆ. ಸದ್ಯದಲ್ಲೇ ದಾವಣಗೆರೆ, ಚಿತ್ರದುರ್ಗ ಸೇರ್ಪಡೆಯಾಗಲಿದೆ. ಜನೌಷಧಿ ಕೇಂದ್ರ, ಗ್ರಾಮೀಣ ಸರ್ಕಾರಿ ಮತ್ತು ಸೇವಾ ಆಸ್ಪತ್ರೆಗಳಿಗೂ ಉಪಕರಣ ನೀಡಲಾಗಿದೆ. ವಿಶ್ವ ಜನಸಂಖ್ಯಾ ದಿನದಂದು ಹೊನ್ನಾಳಿ ಹಾಗೂ ಚನ್ನಗಿರಿ ತಾಲೂಕಿನ 10 ಆರೋಗ್ಯ ಕೇಂದ್ರಗಳಿಗೆ ಉಪಕರಣ ದೊರೆಯಲಿದೆ.
ಗ್ರಾಮೀಣ ಜನತೆಗೆ ಹೃದಯಾಘಾತ ಆದಾಗ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಲು ವಿಳಂಬವಾಗಿ ಆಸ್ಪತ್ರೆ ತಲಪುವಷ್ಟರಲ್ಲಿ ಸಾವನ್ನಪ್ಪುವುದನ್ನು ನೋಡಲಾರದ ಡಾ| ಪದ್ಮನಾಭ ಕಾಮತ್ ರೂಪಿಸಿದ ಈ ಯೋಜನೆ ಟೆಲಿಮೆಡಿಸಿನ್‌ಗಿಂತ ಕಡಿಮೆ ವೆಚ್ಚದ್ದು ಮತ್ತು ಸುಲಭದಲ್ಲಿ ಹಳ್ಳಿಯ ಮೂಲೆಯನ್ನು ತಲುಪುವಂತಹದ್ದಾಗಿದೆ. ಕೇಂದ್ರಮಂತ್ರಿ ಸದಾನಂದ ಗೌಡ, ಕ್ರಿಕೆಟಿಗ ರಾಹುಲ್ ದ್ರಾವಿಡ್, ಸಚಿವ ರೇವಣ್ಣ, ಸಂಸದೆ ಶೋಭಾ ಕರಂದ್ಲಾಜೆ ಸಹಿತ ಹಲವರು ಮೆಚ್ಚಿದ್ದು ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ಬಹುಪಾಲು ವೈದ್ಯಕೀಯ ಕ್ಷೇತ್ರ ಹಣದ ಹಿಂದೆ ಬಿದ್ದಿರುವಾಗ ಮನೆ ಬಾಗಿಲಿಗೆ ಹೃದಯ ವೈದ್ಯರು ಯೋಜನೆ ಹಳ್ಳಿಹಳ್ಳಿಗೆ ತಲಪುವ ಅಗತ್ಯವಿದೆ. ಡಾ| ಪದ್ಮನಾಭ ಕಾಮತ್‌ರಂತವರು ವೈದ್ಯಕೀಯ ಕ್ಷೇತ್ರಕ್ಕೆ ಬೇಕಾಗಿದ್ದಾರೆ.
Advertisement
ತಡೆಯಲಾರದ ಎದೆನೋವು, ರಟ್ಟೆನೋವು ಬಂದರೆ ತಕ್ಷಣ ಹತ್ತಿರದ ಸಿಎಡಿ ಕೇಂದ್ರಕ್ಕೆ ಹೋದರೆ ಅಲ್ಲಿ ಇಸಿಜಿ ಮಾಡಿದ ವೈದ್ಯರು ಅಥವಾ ಅನುಭವಿ ನರ್ಸ್ ಅದರ ಫೋಟೋ ತೆಗೆದು ವಾಟ್ಸ್‌ಅಪ್ ಮುಖಾಂತರ ಡಾ| ಪದ್ಮನಾಭ ಕಾಮತರಿಗೆ ಕಳಿಸುತ್ತಾರೆ. ಅದನ್ನು ಪರಿಶೀಲಿಸಿ ತಕ್ಷಣ ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಿ, ತುರ್ತು ಔಷಧ ಸೂಚಿಸುತ್ತಾರೆ. ವೈದ್ಯರನ್ನೊಳಗೊಂಡ 30 ಜನರ ತಂಡ ಕಾಮತರ ಜೊತೆಗೂಡಿದೆ. ಇದು ಹೃದಯಾಘಾತದ ನೋವು ಅಲ್ಲವಾದರೆ ಅಲ್ಲ ಎಂದು ಅಭಿಪ್ರಾಯ ಮೊಬೈಲ್ನಲ್ಲಿ ಮೂಡಿಬರುತ್ತದೆ. ಈ ವೈದ್ಯಕೀಯ ಸಲಹೆ ಪಡೆದು ಎರಡು ತಾಸಿನಲ್ಲಿ ವ್ಯಕ್ತಿ ಚಿಕಿತ್ಸೆ ಪಡೆದರೆ ಆತ ಬದುಕಿಕೊಳ್ಳುತ್ತಾನೆ. ಈ ಯೋಜನೆ ಆರಂಭವಾದ ಎರಡು ವರ್ಷದಲ್ಲಿ ನೂರಾರು ಜನರ ಪ್ರಾಣ ಉಳಿದಿದೆ, ಅವರು ಡಾ| ಕಾಮತ್‌ರನ್ನು ಅಭಿನಂದಿಸಿದ್ದಾರೆ. ಕೆಲವರು ಉಚಿತವಾಗಿ ಇಸಿಜಿ ಯಂತ್ರ ದಾನ ನೀಡಿದ್ದಾರೆ.
14ರಂದು ಉಚಿತ ಆರೋಗ್ಯ ತಪಾಸಣೆ:
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಜು.14 ರಂದು ನಗರದ ನ್ಯಾಯಾಲಯದ ಬಳಿಯ ಮಾರ್‌ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಿರಿಯ ಅನುಭವಿ ವೈದ್ಯರು ನಡೆಸಿಕೊಡಲಿದ್ದಾರೆ. ಹೃದಯ, ನರರೋಗ, ಜನರಲ್ ಮೆಡಿಸಿನ್, ಮೂತ್ರಶಾಸ್ತ್ರ, ಮೂತ್ರಪಿಂಡ, ರೇಡಿಯೋಥೆರಫಿ ಮತ್ತು ಕ್ಯಾನ್ಸರ್, ಶ್ವಾಸಕೋಶ, ಕಿವಿ-ಮೂಗು-ಗಂಟಲು ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಹೀಗೆ 10ವಿಭಾಗಗಳ ವೈದ್ಯರ ತಂಡ ತಪಾಸಣೆ ನಡೆಸಲಿದೆ. ರಕ್ತದ ಒತ್ತಡ, ಸಕ್ಕರೆ ಅಂಶ ಮತ್ತು ಇಸಿಜಿ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು. ಈ ಹಿಂದೆ ತಪಾಸಣೆ ಮಾಡಿಸಿಕೊಂಡ ವರದಿ, ಸೇವಿಸುತ್ತಿರುವ ಔಷಧಗಳ ಮಾಹಿತಿಯೊಂದಿಗೆ ತಪಾಸಣೆ ಮಾಡಿಸಿಕೊಳ್ಳುವವರು ಬರಬೇಕು. ಮತ್ತು ಕಸ್ತೂರ್ಬಾ ಆಸ್ಪತ್ರೆ ಮಾಹಿತಿ ಕೇಂದ್ರ, ಬಸ್‌ಸ್ಟ್ಯಾಂಡ್ ಬಳಿ ವಿವರವನ್ನು ಪಡೆಯಬಹುದು ಮತ್ತು 08387-220279 ನಂಬರಿಗೆ ಫೋನ್ ಮಾಡಿ ಹೆಸರು ನೋಂದಾಯಿಸಬಹುದು. ನಗರದ ಭಾರತೀಯ ವೈದ್ಯಕೀಯ ಸಂಸ್ಥೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜಿಎಸ್‌ಬಿ ಯುವವಾಹಿನಿ, ಮಹಿಳಾ ವಾಹಿನಿ, ಟೆಂಪೋ ಚಾಲಕ-ಮಾಲಕ, ಆಟೋ ಮಾಲಕ-ಚಾಲಕ ಮತ್ತು ಔಷಧ ವ್ಯಾಪಾರಸ್ಥರ ಸಂಘಗಳ ಸಹಭಾಗಿತ್ವದಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ. ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ ಶಿಬಿರಕ್ಕೆ ಚಾಲನೆ ನೀಡುವರು. ಕಸ್ತೂರ್ಬಾ ಆಸ್ಪತ್ರೆಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಅಧ್ಯಕ್ಷತೆ ವಹಿಸುವರು.
•ಜೀಯು, ಹೊನ್ನಾವರ