ಧಾರವಾಡ: ಹುಬ್ಬಳ್ಳಿ-ಧಾರವಾಡ ಮಧ್ಯದ ಜೀವನಾಡಿಯಾಗಿ ಬಿಆರ್ ಟಿಎಸ್(ಚಿಗರಿ ಬಸ್) ಮಾರ್ಪಟ್ಟಿದ್ದು, ಪ್ರಯಾಣಿಕರಿಗೆ ಇನ್ನೂ ಉತ್ತಮ ಸೌಲಭ್ಯ ಕಲ್ಪಿಸಲು ನಾವು ಶ್ರಮಿಸಲಿದ್ದೇವೆಂದು ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ಹೇಳಿದರು.
ನಗರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿ ಆವರಣದಲ್ಲಿ ಬಿಆರ್‌ಟಿಎಸ್ ಸಂಸ್ಥೆಗೆ ಬ್ಯಾಂಕ್ ದೇಣಿಗೆಯಾಗಿ ನೀಡಿದ 4000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ ಸಹಿತದ ಟ್ರಾಕ್ಟರ್ ಸ್ವೀಕರಿಸಿ ಅವರು ಮಾತನಾಡಿದರು.
ಅವಳಿ ನಗರದಲ್ಲಿ ಬಿಆರ್‌ಟಿಎಸ್ ಸುಮಾರು 30 ಸಾವಿರ ಮರ ಗಿಡಗಳನ್ನು ಬೆಳಸಿದೆಯಲ್ಲದೆ ಅವಳಿ ನಗರದ 20 ಕಿ.ಮೀ. ರಸ್ತೆಯುದ್ದಕ್ಕೂ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಗಿಡ ಮರಗಳನ್ನು ಬೆಳೆಸಿ ಅವಳಿನಗರದ ಪರಿಸರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಲಿದೆ. ಆ ಎಲ್ಲ ಗಿಡ ಮರಗಳಿಗೆ ನೀರುಣಿಸಲು ಪೂರಕವಾಗಿ ಇದೀಗ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 4000 ಸಾವಿರ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕರ್ ಜತೆಗೆ ಟ್ರಾಕ್ಟರ್ ನೀಡಿದ್ದು,
ನೆಟ್ಟ ಗಿಡ ಮರಗಳನ್ನು ರಕ್ಷಿಸಿಕೊಳ್ಳುವಲ್ಲಿ ಇದು ಸಹಾಯಕವಾಗಲಿದೆ ಎಂದರು.
ಬ್ಯಾಂಕ್ ಅಧ್ಯಕ್ಷ ಪಿ.ಗೋಪಿಕೃಷ್ಣ ಮಾತನಾಡಿ, ಸಮಾಜದ ಪ್ರೋತ್ಸಾಹವಿಲ್ಲದೆ ಯಾವುದೇ ಸಂಸ್ಥೆ ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಿರಂತರ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಸಮಾಜ ನೀಡಿದ ಬೆಂಬಲಕ್ಕೆ ಹಾಗೂ ಪ್ರೋತ್ಸಾಹಕ್ಕಾಗಿ ಬ್ಯಾಂಕು ಋಣಿಯಾಗಿದೆ ಎಂದರು. ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡುತ್ತಲಿದ್ದು, ಪ್ರತಿ ವರ್ಷ ತನ್ನ ಕಾರ್ಯ ಕ್ಷೇತ್ರದಲ್ಲಿ ಸುಮಾರು 50 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುತ್ತಿದೆ.
ಬ್ಯಾಂಕಿನ ವಹಿವಾಟು 30 ಸಾವಿರ ಕೋಟಿ ಹೊಸ್ತಿಲಲ್ಲಿದ್ದು, ಬ್ಯಾಂಕಿನ ಪ್ರಗತಿ ದಾರಿಯಲ್ಲಿ ಇದೊಂದು ಹೊಸ ಮೈಲಿಗಲ್ಲಾಗಲಿದೆ ಎಂದರು. ಬ್ಯಾಂಕ್‌ನ ಮಹಾ ಪ್ರಬಂಧಕರಾದ ಬಿ.ಸಿ. ರವಿಚಂದ್ರ, ಚಂದ್ರಶೇಖರ ಮೋರೂ, ಬಿಆರ್‌ಟಿಎಸ್ ಸಂಸ್ಥೆಯ ಮಹಾಪ್ರಬಂಧಕ ಗುಡರೆಡ್ಡಿ, ಶ್ರೀಕಾಂತ ಹೆಗಡೆ, ಕೃಷ್ಣರಾಜ ಅಡಿಗ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.