Advertisement

ಲೈಫ್ ಆಫ್ “ಪೈಸೆ’

09:27 PM Jul 19, 2019 | mahesh |

ಇಡೀ ಜಗತ್ತೇ ಹಣದ ಹಿಂದೆ ಬಿದ್ದಿರುವಾಗ, ಕೈಲಿರುವ ಕಾಸು ಖರ್ಚು ಮಾಡಿ, ಹಳೆಯ ನೋಟು-ನಾಣ್ಯಗಳನ್ನು ಸಂಗ್ರಹಿಸುವ ಖಯಾಲಿ ಕೆಲವರಿಗೆ ಇರುತ್ತದೆ. ಉಳಿದವರ ಕಣ್ಣಲ್ಲಿ ಚಲಾವಣೆ ಕಳೆದುಕೊಂಡ ನೋಟು, ನಾಣ್ಯ ಇವರ ಪಾಲಿನ ಅಮೂಲ್ಯ ನಿಧಿ. ಅಂಥ ಸಮಾನ ಮನಸ್ಥಿತಿಯವರು ಸೇರಿ 1974ರಲ್ಲಿ ಕಟ್ಟಿದ ಸಂಸ್ಥೆ  - ಕನ್ನಡ ನಾಡು ನಾಣ್ಯ ಸಂಘ. ಈಗ, ಸಂಘದ ವತಿಯಿಂದ ನಾಣ್ಯ ದರ್ಶಿನಿ- 2019 ನಡೆಯುತ್ತಿದೆ. ಅಲ್ಲಿ ಯಾರ್ಯಾರ ನಾಣ್ಯಗಳ ಕತೆಗಳು ಇರಲಿವೆ?

Advertisement

ಕನ್ನಡ ನಾಡಿನ ನಾಣ್ಯಗಳು
ಪಿ.ಕೆ. ಕೇಶವಮೂರ್ತಿ, ಹುಣಸೂರು
ವಿಶೇಷ: ಕರ್ನಾಟಕದ ರಾಜಮನೆತನಗಳ ನಾಣ್ಯ
ಇಲ್ಲಿಯವರೆಗೆ 144 ನಾಣ್ಯ ಪ್ರದರ್ಶನಗಳನ್ನು ನೀಡಿರುವ ಕೇಶವ ಮೂರ್ತಿ ಅವರು, ಕರ್ನಾಟಕದ ನಾಣ್ಯಗಳನ್ನು ಈ ಬಾರಿ ಪ್ರದರ್ಶನಕ್ಕಿಡಲಿದ್ದಾರೆ. ಕದಂಬ, ಹೊಯ್ಸಳ, ಗಂಗ, ವಿಜಯನಗರ, ಮೈಸೂರು ಒಡೆಯರ್‌, ಹೈದರ್‌ ಅಲಿ, ಟಿಪ್ಪು ಸುಲ್ತಾನ್‌, ಬಹುಮನಿ ಸುಲ್ತಾನರು… ಹೀಗೆ ಕರ್ನಾಟಕವನ್ನಾಳಿದ ಎಲ್ಲ ರಾಜ ಮನೆತನಗಳು ಟಂಕಿಸಿದ ನಾಣ್ಯಗಳೂ ಇವರ ಬಳಿ ಇವೆ. ಮೂಲತಃ ಹುಣಸೂರಿನವರಾದ ಕೇಶವ ಮೂರ್ತಿಯವರು, ಬಿಎಸ್ಸೆನ್ನೆಲ್‌ನಲ್ಲಿ ಎಂಜಿನಿಯರ್‌ ಆಗಿದ್ದವರು. ಅಂಚೆ ಚೀಟಿ ಸಂಗ್ರಹದ ಹವ್ಯಾಸ ಬೆಳೆಸಿಕೊಂಡ ಇವರು ನಂತರ ಹೊರಳಿದ್ದು, ನಾಣ್ಯ ಮತ್ತು ನೋಟುಗಳ ಸಂಗ್ರಹದೆಡೆಗೆ. ಕ್ರಿ.ಪೂ. 6ನೇ ಶತಮಾನದ, ಗುಪ್ತ, ಶಾತವಾಹನ, ಚೋಳ, ಪಲ್ಲವ, ಪಾಂಡ್ಯ, ಬ್ರಿಟಿಷ್‌, ಪೋರ್ಚುಗೀಸ್‌, ಫ್ರೆಂಚ್‌… ಹೀಗೆ ದೇಶ-ವಿದೇಶದ ನಾಣ್ಯ, ನೋಟುಗಳು ಇವರ ಸಂಗ್ರಹಾಲಯದಲ್ಲಿ ಇವೆ.

ನಾನು ಎಲ್ಲಿಗೇ ಪ್ರವಾಸ ಹೋದರೂ, ಅಲ್ಲಿನ ನಾಣ್ಯ ಮಾರಾಟಗಾರರು, ಆಭರಣದ ಅಂಗಡಿಯವರ ಬಳಿ ಹಳೆ ನಾಣ್ಯಗಳಿಗಾಗಿ ಹುಡುಕಾಟ ನಡೆಸುತ್ತೇನೆ. 1986ರಿಂದ ಹೀಗೆ ಬೇರೆ ಬೇರೆಯವರಿಂದ ನಾಣ್ಯ ಖರೀದಿಸಿದ್ದೇನೆ.

ಸಂಬಳದ ಮುಕ್ಕಾಲು ಭಾಗ, ನಾಣ್ಯ ಸಂಗ್ರಹಕೆ ಸಮರ್ಪಣೆ!
ಗಿರೀಶ್‌ ಕುಮಾರ್‌, ಬೆಂಗಳೂರು
ವಿಶೇಷ: ಅಪರೂಪದ ಐವತ್‌ ಪೈಸೆ ನಾಣ್ಯಗಳು
ಅಮ್ಮ ಕೊಟ್ಟ ಐದು ಪೈಸೆಯ ನಾಣ್ಯದಿಂದ ಶುರುವಾದ ವಿ.ಎನ್‌. ಗಿರೀಶ್‌ ಕುಮಾರ್‌ ಅವರ ನಾಣ್ಯ ಸಂಗ್ರಹದಲ್ಲಿ ಈಗ ಸಾವಿರಾರು ಅಪರೂಪದ ನಾಣ್ಯಗಳಿವೆ. ದೇಶ- ವಿದೇಶದ ಅಪರೂಪದ ನಾಣ್ಯಗಳು, ಅಂಚೆ ಚೀಟಿಗಳು, ಕರೆನ್ಸಿ ನೋಟುಗಳ ದೊಡ್ಡ ಸಂಗ್ರಹವೇ ಗಿರೀಶ್‌ ಬಳಿ ಇದೆ. ದಕ್ಷಿಣ ಭಾರತದ ಎಲ್ಲ ರಾಜ ಮನೆತನದ ನಾಣ್ಯಗಳೂ ಇವರ ಬಳಿ ಇರುವುದು ಮತ್ತೂಂದು ವಿಶೇಷ.

25 ಪೈಸೆಯ ಒಂದು ಲಕ್ಷಕ್ಕೂ ಅಧಿಕ ನಾಣ್ಯಗಳನ್ನು ಸಂಗ್ರಹಿಸಿರುವ ಇವರ ಹೆಸರು ಲಿಮ್ಕಾ ದಾಖಲೆ ಪುಸ್ತಕವನ್ನು ಸೇರಿದ್ದು, ಗಿನ್ನೆಸ್‌ ದಾಖಲೆಗೂ ಇವರು ಪ್ರಯತ್ನಿಸುತ್ತಿದ್ದಾರೆ.

Advertisement

ಈ ಬಾರಿಯ ಪ್ರದರ್ಶನದಲ್ಲಿ ಗಿರೀಶ್‌, ಭಾರತದಲ್ಲಿ 1960ರಿಂದ ಇಲ್ಲಿಯವರೆಗೆ ಟಂಕಿಸಲಾದ 50 ಪೈಸೆಯ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಹೈದರಾಬಾದ್‌, ನೊಯ್ಡಾ, ಕೋಲ್ಕತ್ತಾ, ಮುಂಬೈಗಳಲ್ಲಿ ನಾಣ್ಯ ಟಂಕಿಸುವ ಕೇಂದ್ರಗಳಿದ್ದು, (ಟಂಕಿಸಿದ ವರ್ಷದ ಕೆಳಗೆ ವಜ್ರದ ಗುರುತಿದ್ದರೆ ಮುಂಬೈ, ನಕ್ಷತ್ರ ಇದ್ದರೆ ಹೈದರಾಬಾದ್‌, ಚುಕ್ಕಿಯಿದ್ದರೆ ನೊಯ್ಡ, ಯಾವ ಚಿಹ್ನೆಯೂ ಇರದಿದ್ದರೆ ಕೋಲ್ಕತ್ತಾ) ಎಲ್ಲ ಕೇಂದ್ರಗಳಲ್ಲಿ ಟಂಕಿಸಿದ ನಾಣ್ಯಗಳೂ ಇವರ ಸಂಗ್ರಹದಲ್ಲಿದೆ.

ತಮ್ಮ ಸಂಬಳದ ಮುಕ್ಕಾಲು ಭಾಗವನ್ನು ಹವ್ಯಾಸಕ್ಕಾಗಿ ಖರ್ಚು ಮಾಡುವ ಗಿರೀಶ್‌ ಬಳಿ, ದೇಶ ವಿದೇಶದ ಅಪರೂಪದ ಅಂಚೆ ಚೀಟಿಗಳು ಹಾಗೂ ಸಾವಿರಗಟ್ಟಲೆ ಗಣೇಶ ಮೂರ್ತಿಗಳ ಸಂಗ್ರಹವೂ ಇದೆ. ಬೆಳ್ಳಿ, ಬಂಗಾರ, ಬಟ್ಟೆ, ಮರದ ಅಂಚೆ ಚೀಟಿಯೂ ಸೇರಿದಂತೆ, ಪ್ರಪಂಚದ ಮೊದಲ ಅಂಚೆ ಚೀಟಿಯೂ ಇವರ ಬಳಿ ಇದೆ. ಇತ್ತೀಚೆಗೆ 52 ಸಾವಿರ ರೂ. ಕೊಟ್ಟು ಅಂಚೆ ಚೀಟಿಯೊಂದನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ ಗಿರೀಶ್‌!

ತುಂಬಾ ಅಪರೂಪದ ನಾಣ್ಯಗಳನ್ನು ಹರಾಜಿನಲ್ಲಿ ದೊಡ್ಡ ಮೊತ್ತ ಕೊಟ್ಟು ನನ್ನದಾಗಿಸಿಕೊಳ್ಳುತ್ತೇನೆ. ನನ್ನ ಹವ್ಯಾಸ ನೋಡಿ, ಗೆಳೆಯರು-ಬಂಧುಗಳು ಅವರಲ್ಲಿರುವ ಹಳೆಯ ನಾಣ್ಯಗಳನ್ನು ಕೊಟ್ಟಿದ್ದಾರೆ.

ಕ್ರಿಸ್ತ ಪೂರ್ವದಿಂದ ಇಲ್ಲಿಯ ತನಕ…
ಚಗನ್‌ರಾಜ್‌ ಜೈನ್‌
ವಿಶೇಷ: ಮಗಧ- ಮೌರ್ಯರ ಕಾಲದ ಬೆಳ್ಳಿ ನಾಣ್ಯಗಳು
ನಾಣ್ಯ ಸಂಗ್ರಹದ ಜೊತೆಜೊತೆಗೆ ಭಾರತದ ಇತಿಹಾಸವನ್ನು ಅರಿಯುವ ಹವ್ಯಾಸವುಳ್ಳವರು ಬಳ್ಳಾರಿಯ ಚಗನ್‌ರಾಜ್‌ ಜೈನ್‌. ಕಳೆದ ಇಪ್ಪತ್ತು ವರ್ಷಗಳಿಂದ ನಾಣ್ಯ ಸಂಗ್ರಹ ಮಾಡುತ್ತಿರುವ ಇವರು, ಮಗಧ- ಮೌರ್ಯರ ಕಾಲದ ಸುಮಾರು 150 ಬೆಳ್ಳಿಯ ನಾಣ್ಯಗಳನ್ನು ಪ್ರದರ್ಶನದಲ್ಲಿ ಇಡಲಿದ್ದಾರೆ. ಮಗಧರ ಕಾಲದ ಎಲ್ಲ ನಾಣ್ಯಗಳ ಮೇಲೂ 5 ಗುರುತುಗಳು ಇರುವುದು ವಿಶೇಷ. ಸೂರ್ಯ ಮತ್ತು ಸುದರ್ಶನ ಚಕ್ರದ ಗುರುತುಗಳು ಎಲ್ಲ ನಾಣ್ಯಗಳ ಮೇಲೂ ಇದ್ದು, ಉಳಿದಂತೆ ಆನೆ, ಪ್ರಾಣಿಗಳು, ಮರ ಮುಂತಾದ ಚಿಹ್ನೆಗಳು ಇವೆ. ಚಗನ್‌ ರಾಜ್‌ ಅವರ ಸಂಗ್ರಹದಲ್ಲಿ, ಕ್ರಿ.ಪೂ. 400ರಷ್ಟು ಹಳೆಯ ನಾಣ್ಯಗಳು, ವಿಜಯನಗರದ ಅರಸರ ಕಾಲದ ಚಿನ್ನದ ನಾಣ್ಯಗಳು ಕೂಡಾ ಇವೆ.

ಹಳೆ ನಾಣ್ಯಗಳನ್ನು ಕಲೆ ಹಾಕುವುದಷ್ಟೇ ಅಲ್ಲ, ಅವುಗಳ ಇತಿಹಾಸವನ್ನೂ ತಿಳಿದುಕೊಳ್ಳಬೇಕು. ಅದಕ್ಕಾಗಿ ನಾನು ಪುಸ್ತಕಗಳನ್ನು ಓದುತ್ತೆನೆ, ಇಂಟರ್‌ನೆಟ್‌ನಲ್ಲಿ ಮಾಹಿತಿ ಹುಡುಕ್ತೀನಿ, ಸಮಾನ ಆಸಕ್ತ ಗೆಳೆಯರಲ್ಲಿ ಚರ್ಚೆ ಮಾಡ್ತೀನಿ.

ನಾಣ್ಯ ದರ್ಶಿನಿ- 2019
ಯಾವಾಗ?: ಜು. 26ರ ಬೆಳಗ್ಗೆ 11ರಿಂದ, ಜು. 29ರವರೆಗೆ
ಎಲ್ಲಿ?: ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಂಗಳೂರು

– ಪ್ರಿಯಾಂಕ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next