Advertisement
ಹೌದು, ಪ್ರವಾಸಿ ತಾಣಗಳ ಸಂರಕ್ಷಣೆ, ಅಭಿವೃದ್ಧಿಗೆ ಸ್ಥಳಾಂತರ ಎಂಬುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ವರ್ಷ ಕಳೆದಂತೆ ಮನೆಗಳು (ದಾಖಲೆಗಳಲ್ಲಿಲ್ಲದೇ) ಹೆಚ್ಚುತ್ತಲೇ ಇವೆ. ಕಳೆದ 20 ವರ್ಷಗಳಿಂದಲೂ ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಜನ ವಸತಿ ಸ್ಥಳಾಂತರದ ವಿಷಯದಲ್ಲಿ ರಾಜಕೀಯ ನಾಯಕರು ಘೋಷಣೆ ಮಾಡುತ್ತಲೇ ಇದ್ದಾರೆ ಹೊರತು, ಅದಕ್ಕೊಂದು ಸ್ಪಷ್ಟ ರೂಪ ನೀಡಿ, ಕ್ರಮ ಕೈಗೊಂಡಿಲ್ಲ.
Related Articles
Advertisement
ಸ್ಮಾರಕಗಳ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ, ಮನೆ, ರಸ್ತೆ ನಿರ್ಮಾಣ ಮಾಡ ಬೇಕಿದ್ದರೂ ಅನುಮತಿ ಬೇಕು. ಪಟ್ಟದಕಲ್ಲ ಸ್ಮಾರಕಗಳಿಗೆ ಹೊಂದಿಕೊಂಡೇ ಇರುವ ಈ ಗ್ರಾಮಸ್ಥರು, ಹೊಸ ಮನೆ ಕಟ್ಟುವಂತಿಲ್ಲ. ಬಿದ್ದ ಮನೆಯ ಗೋಡೆ ದುರಸ್ತಿ ಮಾಡುವ ಹಾಗೆಯೂ ಇಲ್ಲ. ನಿಮ್ಮ ಗ್ರಾಮ ಸ್ಥಳಾಂತರ ಮಾಡುತ್ತೇವೆ ಎಂದು ಹಲವು ದಶಕದಿಂದ ಭರವಸೆ ಸಿಕ್ಕಿವೆ ಹೊರತು, ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಪಟ್ಟದಕಲ್ಲನ ಜನರು, ನಮ್ಮನ್ನು ಸ್ಥಳಾಂತರಿಸಿ, ಇಲ್ಲವೇ ನೆಮ್ಮದಿಯ ಬದುಕಿಗೆ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಲೇ ಇದ್ದಾರೆ. ಪಟ್ಟದಕಲ್ಲ ಸ್ಥಳಾಂತರಕ್ಕೆ ಭೂಮಿ ಗುರುತಿಸಲಾಗಿದೆಯಾದರೂ ಆ ಕಾರ್ಯಕ್ಕೆ ದಿಟ್ಟ ನಿರ್ಧಾರ ಕೈಗೊಂಡಿಲ್ಲ. ಕಳೆದ 2009ರ ಪ್ರವಾಹದ ವೇಳೆಯೇ ಇಲ್ಲಿನ ಕೆಲ ಮನೆಗಳನ್ನು ಸ್ಥಳಾಂತರಕ್ಕೆ ಜಿಲ್ಲಾಡಳಿತ ನಿರ್ಧರಿಸಿತ್ತು. ಇಡೀ ಗ್ರಾಮ ಸ್ಥಳಾಂತರಕ್ಕೆ ಪಟ್ಟು ಹಿಡಿದ ಪರಿಣಾಮ, ಅರ್ಧ ಗ್ರಾಮ ಸ್ಥಳಾಂತರವೂ ಆಗಲಿಲ್ಲ.
ಶಿಲ್ಪಕಲೆಯ ತೊಟ್ಟಿಲು ಐಹೊಳೆ: ಚಾಲುಕ್ಯ ಅರಸರ ಪ್ರಥಮ ರಾಜಧಾನಿಯೂ ಆಗಿದ್ದ ಐಹೊಳೆಯಲ್ಲಿ 59 ವಿವಿಧ ಪಾರಂಪರಿಕ ಕಟ್ಟಡಗಳಿವೆ. ಪ್ರತಿಯೊಂದು ಕಟ್ಟಡಗಳ ಸುತ್ತಲೂ ಜನವಸತಿ ಇದೆ. ಈ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಲು, ಭೂಮಿಪೂಜೆ ಕೂಡಾ ಆಗಿದೆ. ಹೊಸ ಮನೆ ನಿರ್ಮಿಸಿಕೊಡಲು ಭೂಮಿಯನ್ನು ಗುರುತಿಸಲಾಗಿದೆ. 2013ರಲ್ಲಿ ಕೇವಲ 52 ಕೋಟಿಯಷ್ಟಿದ್ದು, ಈ ಗ್ರಾಮ ಸ್ಥಳಾಂತರದ ಕ್ರಿಯಾ ಯೋಜನೆ, ಈಗ 400 ಕೋಟಿಗೆ ದಾಟಿದೆ. ಹೀಗಾಗಿ ಸ್ಥಳಾಂತರ ಅಷ್ಟು ಸುಲಭವಾಗಿ ನೆರವೇರುತ್ತಾ ಎಂಬ ಪ್ರಶ್ನೆ ಐತಿಹಾಸಿಕ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಒಟ್ಟಾರೆ, ಪ್ರವಾಸಿ ತಾಣಗಳ ಮಧ್ಯೆ ವಾಸಿಸುತ್ತಿರುವ ಜನರ ಬದುಕಿಗೆ ಮುಕ್ತಿ ಸಿಗಬೇಕಿದೆ. ಸ್ಥಳೀಯರಿಗೆ ಮೂಲ ಸೌಲಭ್ಯ ಕಲ್ಪಿಸಿ, ನವ ಗ್ರಾಮ ನಿರ್ಮಾಣಕ್ಕೆ ಜಿಲ್ಲಾಡಳಿತ ಗಟ್ಟಿ ನಿರ್ಧಾರ ಕೈಗೊಳ್ಳಬೇಕಿದೆ. ಚುನಾವಣೆ ಸಂದರ್ಭದಲ್ಲಿ ಹೇಗೆ ಯಾರ ಮುಲಾಜಿಲ್ಲದೇ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತೀರೋ, ಪ್ರವಾಸಿ ತಾಣಗಳ ಸುತ್ತಲಿನ ಅತಿಕ್ರಮಣ ತೆರವು, ಗ್ರಾಮ ಸ್ಥಳಾಂತರಕ್ಕೆ ಗಟ್ಟಿ ನಿರ್ಧಾರದೊಂದಿಗೆ ಕೆಲಸ ಮಾಡಿ ಎಂದು ಸ್ವತಃ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಈಚೆಗೆ ಜಿಲ್ಲೆಗೆ ಬಂದಾಗ, ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ಸ್ವತಂತ್ರವನ್ನು ಜಿಲ್ಲಾಡಳಿತ ಎಷ್ಟರ ಮಟ್ಟಿಗೆ ಸದ್ಬಳಕೆ ಮಾಡಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಐಹೊಳೆ, ಪಟ್ಟದಕಲ್ಲ ಹಾಗೂ ಬಾದಾಮಿಯ ಪ್ರವಾಸಿ ತಾಣಗಳ ಸುತ್ತಲಿನ ಜನವಸತಿ ಸ್ಥಳಾಂತರಕ್ಕೆ ಪ್ರವಾಸೋದ್ಯಮ ಸಚಿವರು ಸಂಪೂರ್ಣ ಸ್ವತಂತ್ರ ನೀಡಿದ್ದಾರೆ. ನಾನು ಈ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವಾಗಲೇ ಈ ಕಾರ್ಯ ಮಾಡಬೇಕು ಎಂಬ ಆಶಯ ಹೊಂದಿದ್ದೇನೆ. ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆದಿದೆ. -ಕ್ಯಾಪ್ಟನ್ ಡಾ| ಕೆ. ರಾಜೇಂದ್ರ, ಜಿಲ್ಲಾಧಿಕಾರಿ
-ಎಸ್.ಕೆ. ಬಿರಾದಾರ