ನಲವತ್ತು ವರ್ಷದ ಶಂಕರ್‌ಗೆ ಉಸಿರಾಟದ ಸಮಸ್ಯೆ ಎಷ್ಟು ತಿಂಗಳಾದರೂ ಬಗೆಹರಿದಿರಲಿಲ್ಲ. ಅಪೌಷ್ಟಿಕತೆ ಅವರನ್ನು ಕಾಡುತ್ತಿತ್ತು. ಚಿಕಿತ್ಸೆ ಆರಂಭಿಸಿದ ಮನೋವೈದ್ಯರು ಕೌನ್ಸೆಲಿಂಗ್ ತೆಗೆದುಕೊಳ್ಳಲು ಸಲಹೆ ನೀಡಿದ್ದರು.
ಶಂಕರ್ ಹತ್ತು ವರ್ಷದ ಮಗುವಾಗಿದ್ದಾಗ, ಮನೆಯಲ್ಲಿ ಶಾಲೆಗೆ ಫೀಸು ಕಟ್ಟಲಾಗದಷ್ಟು ಬಡತನವಿತ್ತು. ಅಸಹಾಯಕತೆಯಲ್ಲಿತಾಯಿ- ಫೀಸು ಕಟ್ಟಲು ಆಗೋಲ್ಲ ಅಂದರೆ ಹೇಗೆ? ಈ ಆರನೇ ಮಗು ಬೇಕಿತ್ತಾ? ಮುಂದೆ ದುಡ್ಡು ಸಾಕಾಗುವುದಿಲ್ಲ ಎಂದು ಯೋಚಿಸಿಯೇ ನಾನು ಈ ಕಡೆಯ ಮಗುವನ್ನು ತೆಗೆಸಿಬಿಡೋಣ ಅಂದರೆ, ನೀವು ಆವಾಗ ಕೇಳಲಿಲ್ಲ ಎಂದು ತಂದೆಗೆ ಹೇಳಿದ್ದನ್ನು ಅಚಾನಕ್ ಕೇಳಿಸಿಕೊಂಡಿದ್ದ ಶಂಕರ್ ಅವಾಕ್ಕಾಗಿದ್ದರಂತೆ. ಆ ಎಳೆಯ ವಯಸ್ಸಿನಲ್ಲಿ, ತಾಯಿಗೆ ನಾನೊಬ್ಬ ಬೇಡದ ಮಗು, ಅವರಿಗೆ ಹೊರೆಯಾಗಿಬಿಟ್ಟೆ ಎಂಬ ಭಾವನೆ ಅವರಲ್ಲಿ ಮನೆಮಾಡಿತ್ತು.
ಶಂಕರ್‌ಗೆ ಹದಿಮೂರು ವರ್ಷವಿದ್ದಾಗ, ಚೊಚ್ಚಲ ಹೆರಿಗೆಯಲ್ಲಿ ಅವರ ಅತ್ತಿಗೆ ಮತ್ತು ಮಗು ತೀರಿಕೊಂಡಿದ್ದರು. ಅತ್ತಿಗೆಯ ಮೃತ ದೇಹ ಮತ್ತು ಅಣ್ಣನ ಗೋಳು ನೋಡಿ ಶಂಕರ್‌ಗೆ ಮತ್ತೆಆಘಾತವಾಗಿತ್ತು. ವೈರಾಗ್ಯ ಮೂಡಿತು. ಬದುಕಿಗೆ ಏನೂ ಅರ್ಥವಿಲ್ಲ ಅನ್ನಿಸತೊಡಗಿತ್ತು. ಈಗ ಅವರು ಸಾಕಷ್ಟು ಹಣ ಸಂಪಾದಿಸಿದ್ದಾರೆ.
ದೇವಸ್ಥಾನವನ್ನು ಕಟ್ಟಿ ಭಕ್ತಿ ಮಾರ್ಗವನ್ನು ಬೋಧಿಸುತ್ತಿದ್ದಾರೆ. ಅನ್ನ ಸಂತರ್ಪಣೆ ಮತ್ತು ವಿದ್ಯಾ ದಾಸೋಹ ನಡೆಸಿದ್ದಾರೆಅನೇಕರಿಗೆ ಪ್ರೇರಣೆಯಾಗಿದ್ದಾರೆ. ಆದರೂ ಮನಸ್ಸು ಮಾತ್ರ ಜೀವನಕ್ಕೆ, ಹುಟ್ಟು- ಸಾವಿಗೆ ಅರ್ಥ ಸಿಗದೇ ಒದ್ದಾಡುತ್ತಿದೆ. ಶರೀರದ ಕುಪೋಷಣೆಮತ್ತು ಅಪೌಷ್ಟಿಕತೆಗೆ ಕಾರಣ, ತಾಯಿ ನನ್ನನ್ನು ಹೊಟ್ಟೆಯಲ್ಲಿಯೇ ತಿರಸ್ಕಾರ ಮಾಡಿದ್ದಳು ಎಂಬ ಚಿಂತೆ. ಜೊತೆಗೆ ಅತ್ತಿಗೆಯ ಮೃತ ದೇಹವನ್ನು ನೋಡಿದಾಗ ಹುಟ್ಟಿದ ವೈರಾಗ್ಯ ಭಾವ ಅವರನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿದೆ. ಇದರಿಂದ ಅವರು ಹೊರಬಂದರೆ ಮಾತ್ರ ಉಸಿರಾಟದ ಸಮಸ್ಯೆಕಡಿಮೆಯಾಗುವುದು. ಆಘಾತಗಳುಘಟಿಸಿದಾಗ, ದಿಕ್ಸೂಚಿ ಇಲ್ಲದ ಹಡಗಿನಂತೆ ಮನಸ್ಸು ಹೊಯ್ದಾಡುತ್ತದೆ. ಹೀಗಾಗಿಬಿಟ್ಟರೆ ಆರೋಗ್ಯ ಎಲ್ಲಿಂದ ಬರಬೇಕು?
ಶೋಷಿತ ಭಾವದಲ್ಲಿ ಸಿಲುಕಿದ ಮನಸ್ಸು- “ನಾನು ಶೋಷಿತ, ನಾನು, ಏಕಾಂಗಿ, ಕಷ್ಟ ಕಾಲದಲ್ಲಿ ನನಗೆ ಯಾರೂ ಸಹಾಯಮಾಡಲಾರರು’ ಎಂಬ ಸಂಕಟದಲ್ಲೇ ಬದುಕುತ್ತದೆ. ಆಘಾತಗಳ ಕುರಿತೇ ಯೋಚಿಸುತ್ತಿದ್ದರೆ, ಮನೋದೈಹಿಕ ಬೇನೆ ಜೊತೆಯಾಗುತ್ತದೆ. ಈ ಚಕ್ರವ್ಯೂಹದಿಂದ ಹೊರಬರಲು ಸಹಾಯ ಮಾಡುವುದೇ ಸಲಹಾ ಮನೋವಿಜ್ಞಾನ. ಶಂಕರ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
–ಡಾ. ಶುಭಾ ಮಧುಸೂದನ್ ಚಿಕಿತ್ಸಾ ಮನೋ ವಿಜ್ಞಾನಿ