ವಿವೇಕಾನಂದರು ದೇಶದಲ್ಲಿ ಪರ್ಯಟನ ಮಾಡುತ್ತ, ತಾವು ಹೋದಲ್ಲೆಲ್ಲ ಅಧ್ಯಾತ್ಮ, ಯೋಗ, ಸಂಸ್ಕೃತಿಗಳ ಬಗ್ಗೆ ಉಪನ್ಯಾಸಗಳನ್ನು ಕೊಡುತ್ತಿದ್ದ ಕಾಲ ಅದು. ಹಾಗೆ ಸಂಚರಿಸುತ್ತ ಒಂದು ಹಳ್ಳಿಗೆ ಬಂದರು. ಸ್ವಾಮಿಗಳು ಬಂದರುಎಂದು ಅಲ್ಲಿ ಒಂದು ಉಪನ್ಯಾಸ ಕಾರ್ಯಕ್ರಮ ಏರ್ಪಾಟಾಯಿತು.
ಊರಿನ ದೊಡ್ಡ ವ್ಯಕ್ತಿಗಳು, ಪಂಡಿತರು, ಪ್ರಾಜ್ಞರು ಎಲ್ಲರೂ ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಬೇಕೆಂದು ಊರಗೌಡ ಪ್ರಚಾರವನ್ನೂ ಭರಪೂರವಾಗಿಯೇ ಮಾಡಿದ. ಜನ ಸೇರಿತು. ಉದ್ಘೋಧಕವಾದಉಪನ್ಯಾಸ ಕಾರ್ಯಕ್ರಮ ನಡೆಯಿತು. ಸ್ವಾಮೀಜಿಗಳ ಮಾತು ಮುಗಿದ ಮೇಲೆ ಅಲ್ಲೇ ಪ್ರಶ್ನೋತ್ತರ ಕಾರ್ಯಕ್ರಮ ಆಯೋಜನೆಯಾಯಿತು. ನೆರೆದವರೆಲ್ಲರೂ ತಮಗೆ ಅರ್ಥವಾಗದ ವಿಷಯಗಳ ಕುರಿತು ಪ್ರಶ್ನೆ ಕೇಳಿ, ಉತ್ತರ ಪಡೆದು ತೃಪ್ತರಾಗಿ ತೆರಳುತ್ತಿದ್ದರು. ಸ್ವಾಮಿ ವಿವೇಕಾನಂದರು ಕೂಡ ಅಷ್ಟೂ ಜನರ ಪ್ರಶ್ನೆಗಳಿಗೆ, ಅವುಗಳ ಆಶಯ ಏನೇ ಇರಲಿ, ಸಮಾಧಾನಚಿತ್ತದಿಂದ, ಅತ್ಯಂತ ಶಾಂತ ದನಿಯಿಂದ ಉತ್ತರಿಸುತ್ತಿದ್ದರು. ಹೀಗೆ ಸುಮಾರು ಅರ್ಧ- ಮುಕ್ಕಾಲು ತಾಸು ಕಳೆದ ಮೇಲೆಅಲ್ಲಿ ನೆರೆದಿದ್ದ ಜನಜಂಗುಳಿನಿಧಾನವಾಗಿ ಕರಗಿತು. ಎಲ್ಲರೂ ಮನೆಗೆ ತೆರಳಿದರು.
ಎಲ್ಲರೂ ಹೋದ ಮೇಲೆ ವಿವೇಕಾನಂದರು ನೋಡುತ್ತಾರೆ, ಅಲ್ಲೊಬ್ಬ ವೃದ್ಧ ನಿಂತಿದ್ದಾನೆ. ವಯಸ್ಸು 75ರ ಆಜುಬಾಜು. ಹೆಚ್ಚೇನೂ ಸ್ಥಿತಿವಂತವಲ್ಲದಬಟ್ಟೆಬರೆ. ಕೈಯಲ್ಲಿ ಊರುಗೋಲು. ಮಾಸಿದ ತಲೆ, ಗಡ್ಡ. ಆದರೆ ಕಣ್ಣುಗಳಲ್ಲಿಏನೋ ದಿವ್ಯವಾದ ಹೊಳಪು. ವಿವೇಕಾನಂದರು ಆ ವೃದ್ಧನತ್ತ ತಾವಾಗಿ ನಡೆದುಬಂದರು. ಏನು ಅಜ್ಜ? ನಿನ್ನ ಪ್ರಶ್ನೆ ಏನು ಕೇಳು ಎಂದರುಅನುನಯದಿಂದ. ಬುದ್ಧಿ! ಪ್ರಶ್ನೆ ಕೇಳುವುದಕ್ಕೆ ನಾನೇತರವನು! ನೀವೇನೋ ದೊಡ್ಡ ದೊಡ್ಡ ವಿಚಾರಗಳ ಬಗ್ಗೆಯೆಲ್ಲ ಮಾತಾಡಿದಿರಿ. ಅದೆಲ್ಲವನ್ನುಬುದ್ಧಿಯೊಳಗೆ ಇಳಿಸಿಕೊಳ್ಳಲು ನನಗಾದರೂ ಏನು ಶಕ್ತಿ ಇದೆ! ನೀವು ದೊಡ್ಡವರು, ಪಂಡಿತರು, ಮಹಾತ್ಮರು! ನಾನೋ ಕೂಲಿನಾಲಿ ಮಾಡುವಹರಿಜನ. ನಾನು ಇಲ್ಲಿ ನಿಂತದ್ದು ನಿಮಗೆ ಪ್ರಶ್ನೆ ಕೇಳಲಿಕ್ಕಲ್ಲ. ಪಾಪ, ನೀವುಅಷ್ಟೊಂದು ಹೊತ್ತಿಂದ ಬಿಡುವೇ ಇಲ್ಲದಂತೆ ಮಾತಾಡಿದ್ದೀರಿ. ನಿಮಗೆ ಸುಸ್ತಾಗಿರಬಹುದು. ಗಂಟಲು ಒಣಗಿರಬಹುದು. ಮಹಾತ್ಮರಾದ ನೀವುನಮ್ಮ ಹಟ್ಟಿಗೆ ಬಂದು ಒಂದು ಲೋಟ ಹಾಲು ಕುಡಿದಿದ್ದರೆ ನನಗೆಷ್ಟೋ ಸಂತೋಷ ವಾಗುತ್ತಿತ್ತು. ಆದರೆ, ಸ್ವಾಮಿಗಳು ನೀವು, ನಮ್ಮ ಹಟ್ಟಿಗೆ ಬರುತ್ತೀರೋ ಇಲ್ಲವೋ ಎಂಬ ಸಂಕೋಚದಿಂದ ಯೋಚಿಸುತ್ತ ನಿಂತಿದ್ದೆ ಎಂದ. ವಿವೇಕಾನಂದರ ಕಣ್ಣುಗಳು ತೇವಗೊಂಡವು. ಅಷ್ಟು ಹೊತ್ತು ನಿರರ್ಗಳವಾಗಿ ಮಾತಾಡಿದ್ದ ಸ್ವಾಮೀಜಿಯ ಗಂಟಲು ಕೂಡ ವೃದ್ಧನ ಕಳಕಳಿಯ ಮಾತುಗಳನ್ನು ಕೇಳುತ್ತ ಉಡುಗಿಬಿಟ್ಟಿತು! ಮಾತೇ ಹೊರಡದಾಯಿತು! ಅವರು ಆ ಅಜ್ಜನ ಹೆಗಲಿಗೆ ಕೈಹಾಕಿ ಬರಸೆಳೆದರು. ದಾರಿ ತೋರಿಸು ಎಂಬಂತೆ ಅಜ್ಜನ ಕಡೆ ಸನ್ನೆ ಮಾಡಿ ಮುಗುಳ್ನಕ್ಕರು. ಅಜ್ಜನ ಸಂಗಡ ಆತನ ಹಟ್ಟಿಗೆ ಸಂತೋಷದಿಂದ ನಡೆದರು.
– ರೋಹಿತ್ ಚಕ್ರತೀರ್ಥ