ಮಹಾ ಬ್ರಾಹ್ಮಣ, ಮಹಾಕ್ಷತ್ರಿಯದಂಥ ವಿಶಿಷ್ಟ ಕಾದಂಬರಿಗಳನ್ನು, ಅಷ್ಟೇಮಹತ್ತಾದ ಶಾಸ್ತ್ರಗ್ರಂಥಗಳನ್ನು ಬರೆದು ಕನ್ನಡ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆ ಹೆಚ್ಚಿಸಿದ ದೇವುಡು ನರಸಿಂಹ ಶಾಸ್ತ್ರಿಗಳು, ಖಾಸಗಿ ಬದುಕಿನಲ್ಲೂ ಕರ್ಮಠ ವೈದಿಕರು. ಪೂಜೆ,ಸಂಧ್ಯಾ ವಂದನೆಅಗಳನ್ನು ತಪ್ಪದೆ ನಡೆಸಿ ಕೊಂಡು ಬಂದವರು. ಸಂಸ್ಕೃತದ ಮಹಾ ಪಂಡಿತರು. ಶಾಸ್ತ್ರವಿಶಾರದರು.
ಒಮ್ಮೆ ದೇವುಡು ಸರ್ವಜ್ಞನ ಪದಗಳನ್ನು ಸಂಪಾದಿಸಿ ಪ್ರಕಟಿಸಿದ್ದ ರೆವರೆಂಡ್ ಚನ್ನಪ್ಪ ಉತ್ತಂಗಿಯವರನ್ನು ಭೇಟಿಯಾದಾಗ, ಪ್ರಾಸಂಗಿಕವಾಗಿ- ದಯವಿಟ್ಟು ನಮ್ಮ ಮನೆಗೆ ಆಗಮಿಸಿ ಆತಿಥ್ಯ ಸ್ವೀಕರಿಸಬೇಕು ಎಂದರಂತೆ. ಉತ್ತಂಗಿಯವರು ಆಗಬಹುದು ಎಂದುಬಿಟ್ಟರು. ಆದರೆ ಉತ್ತಂಗಿ ಕ್ರೈಸ್ತರು; ದೇವುಡು ಅಪ್ಪಟ ವೈದಿಕ ಕರ್ಮಠ ಬ್ರಾಹ್ಮಣ! ಕ್ರೈಸ್ತರು ಮನೆಗೆ ಬಂದರೆ ಅವರನ್ನು ಹೇಗೆ ಸತ್ಕರಿಸುವುದು ಎಂಬ ಯೋಚನೆ ದೇವುಡು ಅವರಿಗೆ ಆಮೇಲೆ ತಲೆಗೆ ಬಂತು. ಸಂಶಯಪರಿಹಾರಕ್ಕಾಗಿ ತಮ್ಮ ಗುರುಗಳಾಗಿದ್ದ ವೈದ್ಯನಾಥ ಶಾಸ್ರ್ತಿಗಳಲ್ಲಿ ಕೇಳಿದರಂತೆ. ಅದರಲ್ಲೇನುಂಟು! ಸಾಕ್ಷಾತ್ ಯೇಸುಸ್ವಾಮಿ ಮನೆಗೆ ಬಂದರೆ ಹೇಗೆ ಉಪಚರಿಸುತ್ತೀಯೋ, ಇವರನ್ನೂ ಹಾಗೇ ಉಪಚರಿಸಿ ಸತ್ಕಾರ ಮಾಡು ಎಂಬ ಸಲಹೆ ಗುರುಗಳಿಂದ ಬಂತು.
ದೇವುಡು, ಉತ್ತಂಗಿಯವರನ್ನು ಹಾಗೆಯೇ ಸತ್ಕರಿಸಲು ನಿರ್ಧರಿಸಿದರು. ಮನೆಗೆ ಆಗಮಿಸಿದ ಉತ್ತಂಗಿಯವರಿಗೆ ಅಘ್ರ್ಯ ಪಾದ್ಯಗಳನ್ನು ಕೊಟ್ಟರು. ಕೂರಲು ಪೀಠ ತೋರಿಸಿದರು. ಕಾಲುತೊಳೆದು ನೀರನ್ನು ಪಾದೋದಕ ಎಂದು ತಲೆಗೆ ಪೋ›ಕ್ಷಿಸಿಕೊಂಡರು. ದೇವತಾಸ್ಥಾನವಾದ ಪೂರ್ವದಿಕ್ಕಿನಲ್ಲಿ ಉತ್ತಂಗಿಯವರನ್ನು ಕೂರಿಸಿ, ತಾನು ಉತ್ತರ ದಿಕ್ಕಿನಲ್ಲಿ ಪೂಜಕನಾಗಿ ಕೂತು ಅಪ್ರತಿಮ ಭಕ್ತಿ- ಗೌರವಗಳಿಂದ ಪೂಜೆಯನ್ನು ಸಪತ್ನಿàಕರಾಗಿ ಸಮರ್ಪಿಸಿ ದರು. ನಂತರ ಉತ್ತಂಗಿಯವರಿಗೆ ಎಲ್ಲ ಬಗೆಯ ಭಕ್ಷÂ ಭೋಜ್ಯಗಳನ್ನು ಬಡಿಸಿ, ಅವರ ಜೊತೆಯೇಕೂತು ಭೋಜನ ಮಾಡಿದರು. ಇಂಥಾದ್ದೇ ಇನ್ನೊಂದು ಪ್ರಕರಣ ನಡೆದುದು ತ.ಸು. ಶಾಮರಾಯರು ಮತ್ತು ಅವರ ಶಿಷ್ಯ ಪ್ರಭುಶಂಕರ ಅವರ ನಡುವೆ. ಶಾಮರಾಯರು ಹೇಳಿಕೇಳಿ ರುಪಾಯಿಗೆ ಹದಿನಾರಾಣೆ ಬ್ರಾಹ್ಮಣ. ಶಿಷ್ಯ ಪ್ರಭುಶಂಕರ ಕೆಳಜಾತಿಯೆಂದು ಕರೆಸಿಕೊಂಡ ಜಾತಿಯಿಂದ ಬಂದವರು. ಒಮ್ಮೆ ಶಾಮರಾಯರು ತಮ್ಮ ಶಿಷ್ಯನನ್ನು ಕರೆದು, ನಾಳೇ ದಿನ ಮುಂಜಾನೆ ಎಂಟಕ್ಕೆ ಏನನ್ನೂ ಸೇವಿಸದೆ ನಮ್ಮ ಮನೆಗೆ ಬರಬೇಕು ಎಂದು ಆಗ್ರಹಪೂರ್ವಕ ವಿನಂತಿ ಮಾಡಿದರಂತೆ. ಗುರುಗಳ ಅಪ್ಪಣೆಯನ್ನು ಮೀರುವುದುಂಟೆ? ಪ್ರಭುಶಂಕರ ಮರುದಿನ ತಮ್ಮ ಗುರುಗಳ ಮನೆಗೆ ಹೋದರು. ಅಲ್ಲಿ ಅವರಿಗೆ ಆಶ್ಚರ್ಯ ಹುಟ್ಟಿಸುವಂಥ ದೃಶ್ಯವೊಂದು ಎದುರಾಯಿತು.
ಶಾಮರಾಯರು ಮನೆಯಲ್ಲಿ ದೇವರ ಕೋಣೆಯಲ್ಲಿ ಒಂದು ಮಣೆ ಹಾಕಿ, ಅದರ ಮುಂದೆ ರಂಗೋಲಿ ಬರೆದು, ನಂದಾದೀಪ ಹಚ್ಚಿದ್ದರು. ಮಣೆಯ ಮೇಲೆ ಕೂರುವಂತೆ ಶಿಷ್ಯನಿಗೆ ಹೇಳಿದರು. ಕಚ್ಛೆ- ಶಲ್ಯಗಳನ್ನೆಲ್ಲ ತೊಟ್ಟುಪೂಜೆಗೆ ಅಣಿಯಾದ ಬ್ರಾಹ್ಮಣನ ಧಿರಿಸಿನಲ್ಲಿದ್ದ ಶಾಮರಾಯರು ತಮ್ಮ ಶಿಷ್ಯನಿಗೆ ಭಕ್ತಿಪೂರ್ವಕ ಗೌರವಾದರ ಸಮರ್ಪಣೆ ಮಾಡಿ, ಪತ್ನಿಯೊಡಗೂಡಿ ಪೂಜೆಯನ್ನೂ ನೆರವೇರಿಸಿದರು!
ಇಂಥದ್ದೆಲ್ಲ ಆಗುತ್ತದೆಂಬ ಕಲ್ಪನೆಯೇ ಇರದಿದ್ದ ಪ್ರಭುಶಂಕರ ಮಣೆ ಮೇಲೆ ಕೂರುವುದಕ್ಕೇ ಹಿಂದೆಮುಂದೆ ನೋಡುತ್ತ ಚಡಪಡಿಸುತ್ತ ನಾನು ಬ್ರಾಹ್ಮಣ ಅಲ್ಲ ಎಂದು ತೊದಲುತ್ತ ಹೇಳಿದಾಗ ಶಾಮರಾಯರು ಗದರುವದನಿಯಲ್ಲಿ ಹೇಳಿದರಂತೆ: ನೀನು ನನ್ನ ವಿದ್ಯಾರ್ಥಿ. ಅಂದರೆ, ನನ್ನ ಮಗ. ನೀನು ಬ್ರಾಹ್ಮಣ ಅಲ್ಲದಿದ್ದರೆ ಇನ್ನು ಯಾರು ಬ್ರಾಹ್ಮಣರು?ಸುಮ್ನೆಕೂತ್ಕೋ. ಸುಬ್ರಾಯ ಷಷ್ಠಿಯ ಆ ದಿನ, ಶಿಷ್ಯ ಪ್ರಭುಶಂಕರ, ತನ್ನ ಗುರುಗಳಾದ ಶಾಮರಾಯರ ಕೈಯಿಂದ ಪೂಜೆ ಮಾಡಿಸಿಕೊಂಡು, ನಂತರ ಜೊತೆ ಕೂತು ಊಟವನ್ನೂ ಮಾಡಿ ಕೃತಾರ್ಥಭಾವದಿಂದ ಎದ್ದರು.
-ರೋಹಿತ್ ಚಕ್ರತೀರ್ಥ