ಅದು 1972ನೇ ಇಸವಿ. ನಾನಾಗ ಭದ್ರಾವತಿಯ ಭದ್ರಾ ಕಾಲೇಜಿನಲ್ಲಿ ದ್ವಿತೀಯ ಬಿ.ಎ ಓದುತ್ತಿದ್ದೆ. ಪ್ರೌಢಶಾಲೆಯ ದಿನಗಳಲ್ಲಿ ಉತ್ತಮ ಚರ್ಚಾಸ್ಪರ್ಧಿಯಾಗಿದ್ದು ಅಂತರ ಜಿಲ್ಲಾ ಸ್ಪರ್ಧೆಗಳಲ್ಲಿಭಾಗವಹಿಸಿ ಬಹುಮಾನ, ಶೀಲ್ಡ್ ಎಲ್ಲ ತಂದುಕೊಟ್ಟಿದ್ದೆನಾದರೂ,ಕಾಲೇಜಿಗೆ ಬಂದಾಗ ಈ ಧೈರ್ಯ ಅದ್ಯಾಕೋ ಹೇಳಹೆಸರಿಲ್ಲದೆ ಮಾಯವಾಯ್ತು. ಸರಿ, ಮಾತಾಡಿ ಗೆಲ್ಲಲು ಆಗದಿದ್ದರೇನಂತೆ? ಬರೆದು ಗೆಲ್ಲೋಣ ಎಂದು ನಿರ್ಧರಿಸಿದೆ.
ಸರಿ, ಓದುವಲ್ಲಿ, ಸೆಮಿನಾರ್ ಬರವಣಿಗೆಯಲ್ಲಿನಾನೊಂದಿಷ್ಟು ಮೆಚ್ಚುಗೆಯವಿದ್ಯಾರ್ಥಿನಿಯಾದಾಗ,ಒಳ್ಳೆಯ ಅವಕಾಶವೊಂದು ನನ್ನ ಪಾಲಿಗೆ ಬಂತು. “ಕನ್ನಡ ಸಾಹಿತ್ಯ ಪರಿಷತ್ತು’ ಶಿವಮೊಗ್ಗ ಜಿಲ್ಲಾ ಶಾಖೆ, ವಿದ್ಯಾರ್ಥಿಗಳಿಗೆಂದು ಜಿಲ್ಲಾಮಟ್ಟದ ಅಂತರ ಕಾಲೇಜು ಪ್ರಬಂಧ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಸ್ಪರ್ಧೆಶಿವಮೊಗ್ಗೆಯ ಕಮಲಾ ನೆಹರು ಕಾಲೇಜಿನಲ್ಲಿತ್ತು. ನನ್ನ ಅಣ್ಣಂದಿರು ಅಲ್ಲಿಕೆಲಸ, ಓದಿಗೆಂದು ರೂಂ ಮಾಡಿಕೊಂಡು ವಾಸಿಸುತ್ತಿದ್ದರು.
ಸ್ಪರ್ಧೆಯ ಬೆಳಗ್ಗೆ ಶಿವಮೊಗ್ಗೆಯ ಅಣ್ಣಂದಿರ ರೂಂಗೆ ಹೋದೆ. ನಾನು ಹೋಗ್ತಾ ಇದ್ದ ಹಾಗೆ ನನ್ನಣ್ಣ ನನ್ನಕೈಗೊಂದು ಪ್ಯಾಕೆಟ್‌ಕೊಟ್ಟ. “ಏನಿದು..’? ಅಂದೆ. “ಓಪನ್ ಮಾಡು’ ಎಂದ. ಮಾಡಿದೆ. ಒಳಗಿತ್ತು ಚಿನ್ನದ ಬಣ್ಣದ “ಎನಿಕಾರ್’ವಾಚ್. ಅವತ್ತು ನನಗಾದ ಸಂತೋಷ ಎಷ್ಟು ಅಂತ ಹೇಳಕ್ಕಾಗಲ್ಲ,ಕಾರಣ, ವಾಚ್ ನನಗೆ ಅಂದು ದುಬಾರಿ, ಐಷಾರಾಮಿ ವಸ್ತು.
ಸೀತೆಯನ್ನುಕಾಡಿದ ಮಾಯಾಮೃಗದಂತೆ ಅದು ನನ್ನ ಕಾಡ್ತಿದ್ದರೂ, ಅದುವರೆಗೆ ವಾಚಿಲ್ಲದ ವಾಸ್ತವತೆ…! ಪಾಪ, ನನ್ನಣ್ಣ ನಾನೀ ಸ್ಪರ್ಧೆಗೆ ಬಂದಿದ್ದೇ ದೊಡ್ಡ ಸಾಧನೆ ಅನ್ನೋ ಖುಷಿಗೆ ತನ್ನ ಅಗತ್ಯಗಳನ್ನೂ ಮೀರಿ ನನಗೆ ಉಡುಗೊರೆಯಾಗಿ ತಂದಿದ್ದ ಪ್ರೀತಿಯ ಕಾಣಿಕೆ.ಕಣ್ಣು ತುಂಬಿತು.ಕಟ್ಟಿಕೊಂಡಾಗ, ಜಗದ ಸುಖವೆಲ್ಲ ಸಿಕ್ಕಷ್ಟು ಆನಂದ…!ಕಾಲೇಜಿಗೆ ಹೋದೆ. ಸ್ಪರ್ಧೆ ಶುರುವಾಯ್ತು. “ದೇಶದ ಏಳಿಗೆಯಲ್ಲಿ ವಿದ್ಯಾರ್ಥಿಯ ಪಾತ್ರವೇನು…?’ ಬಹುಷಃ ಹೀಗೊಂದು ಅಂದಿನ ಪ್ರಬಂಧದ ವಿಷಯ. ಬರೆದೆ, ಒಂದಲ್ಲ, ಹದಿನೈದು ಪುಟಗಳಾಯ್ತು. ಪರೀಕ್ಷಕರು ಓಡಾಡುತ್ತ ನನ್ನ ಬರವಣಿಗೆಯನ್ನು ಹಿಂದೆ ನಿಂತು ನೋಡ್ತಾನೇ ಇದ್ರು. ಬೆಲ್ ಆಯ್ತು. “ಇನ್ನೈದು ನಿಮಿಷ ಇದೆ. ಎಲ್ಲ ಪೇಪರ್ ಟ್ಯಾಗ್ ಮಾಡಿ. ನಂತರ ಕಾಫಿ ಕುಡಿಯಿರಿ..’ ಎಂದು ಹೇಳಿದಾಗ, ಎಲ್ಲರ ಮುಂದೂ ದೊಡ್ಡಕಪ್ಪಿನಲ್ಲಿ ನೊರೆನೊರೆ, ಬಿಸಿಬಿಸಿಯಾದ ಕಾಫಿ ಬಂದು ಕೂತಿತು.
ಸರಿ, ಟ್ಯಾಗ್ ಮಾಡಲು ಪೇಪರ್‌ಗಳನ್ನುಕೈಗೆತ್ತಿಕೊಂಡೆ, ಮೈಯ್ಯೆಲ್ಲಾ ನಡುಕ ಹೊತ್ತಿಬಿಟ್ಟಿತು.ಕಾರಣ, ಬರೆಯುವ ಹುಮ್ಮಸ್ಸಿನಲ್ಲಿ ಪುಟಸಂಖ್ಯೆಯನ್ನೇ ಬರೆದಿರಲಿಲ್ಲ. ಐದು ನಿಮಿಷವಿದೆ, ಹೇಗ್ಹೇಗೆ ನೋಡಿದ್ರೂ ಪುಟಗಳ ಹೊಂದಾಣಿಕೆಯೇ ಗೊತ್ತಾಗ್ತಿಲ್ಲ. ಎಲ್ರೂ ಆಗ್ಲೇ ಟ್ಯಾಗ್ ಮಾಡಿ ಕೊಟ್ಟು ಕಾಫಿ ಕುಡಿಯಲಾರಂಭಿಸಿದ್ರು. ನನಗೆ ಅಳುವೇ ಬಂತು. ಇದನ್ನೆಲ್ಲ ನೋಡ್ತಿದ್ದ ಪರೀಕ್ಷಕರು ಹತ್ತಿರ ಬಂದು- ನನ್ನ ಸಮಸ್ಯೆ ಗೊತ್ತಾಗಿ, “ನೀನು ತುಂಬಾ ಚೆನ್ನಾಗಿ ಬರ್ದಿದ್ದೀ. ಹೆದರಬೇಡ. ಇನ್ನೈದು ನಿಮಿಷ ಹೆಚ್ಚಿಗೆ ಕೊಡ್ತೀನಿ. ಮೊದ್ಲುಕಾಫಿ ಕುಡಿ, ರಿಲ್ಯಾಕ್ಸ್ ಮಾಡ್ಕೋ. ನಂತ್ರ ಸಮಾಧಾನಚಿತ್ತದಿಂದ ಪ್ರಯತ್ನ ಮಾಡು..’ ಅಂತ ಧೈರ್ಯ ಕೊಟ್ರಾ. ಅವ್ರು ಹೇಳಿದ ಹಾಗೆ ಮಾಡಿ, ಪೇಪರ್ ಹೊಂದಿಸಿ ಟ್ಯಾಗ್ ಮಾಡಿಕೊಟ್ಟು ಬಂದೆ.
ತಿಂಗಳಲ್ಲಿ ಫಲಿತಾಂಶ ಬಂತು, ನನಗೆ ಮೊದಲ ಬಹುಮಾನ ಬಂದಿತ್ತು. ನನ್ನ ಸಂತೋಷವನ್ನು ಹ್ಯಾಗೆ ಹೇಳ್ಳೋದು, ಜೂನ್‌ನಲ್ಲಿ ಶಿವಮೊಗ್ಗೆಯಕರ್ನಾಟಕ ಸಂಘದಲ್ಲಿ ಭವ್ಯ ಸಮಾರಂಭ. ಅಂದು ಬಹುಮಾನ ವಿತರಣೆಯ ಮುಖ್ಯ ಅತಿಥಿಯಾಗಿ ಬಂದವರು ಮತ್ತಾರೂ ಅಲ್ಲ, “ಕನ್ನಡದ ಆಸ್ತಿ-ಮಾಸ್ತಿಯವರು’. ವೇದಿಕೆಗೆ ಹೋದೆ, ಆ ಮಹಾನುಭಾವರು ಬಹುಮಾನದ ಪುಸ್ತಕಗಳನ್ನು ನನ್ನ ಕೈಗಿಡುತ್ತಾ, “ಸರಸ್ವತಿ ಪೂಜೆ ಶುರು ಮಾಡಿದೀಯಾ.
ಇಲ್ಲೇ ನಿಲ್ಲಿಸ್ಬೇಡ. ಮುಂದಕ್ಕೂ ಬರವಣಿಗೆ ಮಾಡು…’ ಅಂತ ಹೇಳಿದ ಮಾತುಗಳು ಇಂದೂ ಕಿವಿಯಲ್ಲಿದೆ. ಈಗ ಅವರ ಆಶೀರ್ವಾದವೋ ಏನೋ ಒಂದಿಷ್ಟು ಬರವಣಿಗೆಕಾಯಕಕೈ ಹಿಡಿದಿದೆ.ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದಿಷ್ಟು ಬಹುಮಾನಗಳನ್ನು, ಪ್ರಶಸ್ತಿಗಳನ್ನು ತೆಗೆದುಕೊಳ್ಳಲು ಹೋದಾಗೆಲ್ಲಾ ಮಾಸ್ತಿಯವರನ್ನೇಕಂಡಂತಾಗುವುದು.
-ಎಸ್.ಪಿ.ವಿಜಯಲಕ್ಷ್ಮೀ