ಮೈಸೂರು: ಜೀವನದ ಪಾಠವನ್ನು ಕಲಿಯಲು ಹಾಗೂ ಕಲಿಸಲು ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ಯಲ್ಲಿ ವಿಪುಲ ಅವಕಾಶಗಳಿವೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಕೆ.ಅರ್ಕೇಶ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ವಿಜ್ಞಾನ ಇತಿಹಾಸ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳ 9ನೇ ತಂಡದ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಯಾವುದೇ ಶಿಕ್ಷಕ ಕೇವಲ ತನ್ನ ವಿಷಯಕ್ಕೆ ಸಂಬಂಧಿಸಿದ ಬೋಧನೆ ಮಾಡುವ ಜತೆಗೆ ವಿದ್ಯಾರ್ಥಿಗಳಲ್ಲಿ ಇತರೆ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ. ಯಾವುದೇ ವಿದ್ಯಾರ್ಥಿ ತನ್ನ ಕುಟುಂಬದಲ್ಲಿ ಕಲಿಯದಿರುವುದನ್ನು ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಕಲಿಯಲು ಸಾಧ್ಯ. ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಮೂಲಕ ಜೀವನದ ಪಾಠ ಹೇಳಲು ವಿಪುಲ ಅವಕಾಶಗಳಿವೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿಜ್ಞಾನ, ವೈಜ್ಞಾನಿಕ ಚಿಂತನೆಗಳು, ರಾಷ್ಟ್ರದ ಅಭಿವೃದ್ಧಿ ಕಾರ್ಯಕ್ರಮಗಳು ಶೈಕ್ಷಣಿಕ ಮತ್ತು ಔದ್ಯೋಗಿಕ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಬೇಕು. ಆ ಮೂಲಕ ತಮ್ಮಲ್ಲಿರುವ ಜ್ಞಾನವನ್ನು ಮತ್ತೂಬ್ಬರಿಗೂ ಪಸರಿಸುವ ಕೆಲಸಕ್ಕೆ ನೆರವಾಗಬೇಕು ಎಂದರು.
ಎನ್‌ಎಸ್‌ಎಸ್ ಕೋಶ ಹಾಗೂ ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ.ಗಣನಾಥಶೆಟ್ಟಿ ಎಕ್ಕಾರ್, ನಿವೃತ್ತ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಕೆ.ಕಾಳಚನ್ನೇಗೌಡ, ಎನ್‌ಎಸ್‌ಎಸ್-ಇಟಿಐ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ ಇದ್ದರು.