“ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು. ಹೆತ್ತವರಿಗೆ ವಯಸ್ಸಾಯ್ತು ಅಂತ ಮಕ್ಕಳು ಕಡೆಗಣಿಸಿದರೆ…? ಹಾಗಾಗಿ ನಮ್ಮ ಪಾಡು ನಾವು ನೋಡಿಕೋಬೇಕು’- ಅಂತ ನಿಟ್ಟುಸಿರಾದರು ರಮಾಬಾಯಿ.
ದೇಹದಲ್ಲಿ ಶಕ್ತಿ ಇರುವವರೆಗೆ ಸ್ವಾವಲಂಬಿಯಾಗಿಯೇ ಬದುಕುತ್ತೇನೆ ಅಂತ, ಹೂಗಳನ್ನು ಬೆಳೆದು, ಹೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ರಮಾಬಾಯಿಯ ವಯಸ್ಸು ಎಪ್ಪತ್ತಿರಬಹುದು!
ಮನೆಯ ಕೆಲಸ ಮುಗಿಸಿ, ಮನೆಯಂಗಳದಲ್ಲಿ ಅಂದರೆ ಅರ್ಧ ಗುಂಟೆ ಜಾಗದಲ್ಲಿ ಗಲಾಟೆ ಹೂ, ಬಟನ್ ರೋಸ್‌ಗಳನ್ನ ಬೆಳೆಯುವ ರಮಾಬಾಯಿ, ವಿಜಯಪುರದ ಗೋಳಗುಮ್ಮಟದ ಎದುರಿಗೆ ನಡೆಯುವ ಸಂತೆಯಲ್ಲಿ ಹೂವು ಮಾರಲು ಬರುತ್ತಾರೆ. ಸಮೀಪದ ಮದಬಾವಿಯವರಾದ ಇವರು, ಪ್ರತಿದಿನ ಗಂಡನ ಜೊತೆ ಎರಡು ಚೀಲದಷ್ಟು ಹೂಗಳನ್ನು ತಂದು ವ್ಯಾಪಾರ ಮಾಡುತ್ತಾರೆ.
ಹಬ್ಬಗಳು ಬಂದಾಗ, ಗಲಾಟೆ ಹೂ ಮತ್ತು ಬಟನ್ ರೋಸ್‌ನ ವ್ಯಾಪಾರ ಜೋರಾಗಿರುತ್ತದೆ. ಬೇರೆ ದಿನಗಳಲ್ಲಿ ಒಂದು ಕೆ.ಜಿಗೆ 60- ರಿಂದ 80 ರೂ. ಇದ್ದರೆ, ಹಬ್ಬದ ದಿನಗಳಲ್ಲಿ ದರ 80-160ರೂ.ವರೆಗೆ ಮಾರಲಾಗುತ್ತದೆ. ಪ್ರತಿದಿನ 400-600 ರೂ. ಸಂಪಾದಿಸುವ ರಮಾಬಾಯಿ, ಹೂಗಳನ್ನ ಮಾರಿಯೇ ತಮ್ಮ ಜೀವನದ ಖರ್ಚು-ವೆಚ್ಚ ನಿಭಾಯಿಸುತ್ತಾರೆ.
ಇವರಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರೂ ಮಕ್ಕಳು ನೌಕರಿಯ ನಿಮಿತ್ತ ಬೇರೆ ಊರಿನಲ್ಲಿದ್ದಾರೆ. ವಯಸ್ಸಾದ ಮೇಲೆ ಮಕ್ಕಳಿಗೆ ಭಾರವಾಗಬಾರದು ಎಂದು, ಮನೆ ಮುಂದಿನ ಜಾಗದಲ್ಲಿ ಹೂ ಗಿಡಗಳನ್ನು, ಲಿಂಬೆಗಿಡಗಳನ್ನು ನೆಟ್ಟಿದ್ದಾರೆ.
ಮಕ್ಕಳಿಗ್ಯಾಕೆ ಭಾರವಾಗಬೇಕು?
“ಮಕ್ಕಳು ಯಾವುದೇ ರೀತಿ ಕೊರತೆ ಮಾಡಿಲ್ಲ. ಖರ್ಚಿಗೆ ಹಣ ಕೂಡಾ ಕಳಿಸುತ್ತಾರೆ. ಆದರೆ, ನಮ್ಮ ಖರ್ಚನ್ನು ನಾವೇ ನೋಡಿಕೊಳ್ಳಬೇಕು ಅನ್ನುವುದು ನಮ್ಮ ನಿರ್ಧಾರ. ಮಕ್ಕಳು ಕಳುಹಿಸಿದ್ದನ್ನ ಬ್ಯಾಂಕಿನಲ್ಲಿ ಇಡುತ್ತೇವೆ. ಮುಂದೆ ಅವರ ಹಣ ಅವರಿಗೇ ಸಿಗುವ ಹಾಗೆ ಮಾಡಿದ್ದೇವೆ’ ಎನ್ನುತ್ತಾರೆ ರಮಾಬಾಯಿ.
ನಮ್ಮ ಯಜಮಾನರಿಗೂ ಹೊಲ ಇತ್ತು. ಆದರೆ, ಮಕ್ಕಳ ವಿದ್ಯಾಭ್ಯಾಸ, ನೌಕರಿ, ಮದುವೆಗೆ ಅಂತ ಇದ್ದ ಬದ್ದ ಹೊಲವನ್ನೆಲ್ಲ ಮಾರಿಬಿಟ್ಟೆವು. ಈಗ, ನಾವಿಬ್ಬರೂ ಹವ್ಯಾಸದಿಂದ ಬೆಳೆಸಿದ ಗಿಡಗಳೇ ಜೀವನಕ್ಕೆ ಆಧಾರವಾಗಿವೆ.
-ರಮಾಬಾಯಿ, ಹೂ ವ್ಯಾಪಾರಿ
-ವಿದ್ಯಾಶ್ರೀ ಗಾಣಿಗೇರ