Advertisement

50 ಪೈಸೆಯ ಶಾಂಪೂ ಮಾರಿ 500 ಕೋಟಿ ದುಡಿದ ಕಥೆ

08:05 AM Jun 06, 2021 | Team Udayavani |

ಮನಸ್ಸಿದ್ದರೆ ಮಾರ್ಗ, ಹನಿಗೂಡಿದರೆ ಹಳ್ಳ ಎಂಬ ಮಾತುಗಳಿಗೆ ಉದಾಹರಣೆಯಾಗಿ ಹೇಳಬಹುದಾದ ಹೆಸರು -ಸಿ.ಕೆ. ರಂಗನಾಥನ್‌ ಅವರದು. ಈತ ಬೇರ್ಯಾರೂ ಅಲ್ಲ, ಶಾಂಪೂ ಸೇರಿದಂತೆ ಹಲವು ಸೌಂದರ್ಯ ವರ್ಧಕ ವಸ್ತುಗಳನ್ನು ಉತ್ಪಾದಿಸುವ ಕೆವಿನ್‌ ಕೇರ್‌ ಕಂಪೆನಿಯ ಸಂಸ್ಥಾಪಕ. 50 ಪೈಸೆಗೆ ಒಂದರಂತೆ ಸಿಗುತ್ತಿತ್ತಲ್ಲ ಚಿಕ್‌ ಶಾಂಪೂ, ಅದನ್ನು ತಯಾರಿಸಿದ್ದು ಇವರೇ! 50 ಪೈಸೆಗೆ ಒಂದು ಶಾಂಪೂ ಪ್ಯಾಕ್‌ ಮಾರುತ್ತಲೇ ಅದನ್ನು ಈತ 500 ಕೋಟಿಯವರೆಗೆ ಬೆಳೆಸಿದ ರೀತಿ ಅಮೋಘ. ತಾನು ನಡೆದು ಬಂದ ದಾರಿಯನ್ನು ಕುರಿತು ರಂಗನಾಥನ್‌ ಹೇಳಿಕೊಂಡಿರುವ ಮಾತುಗಳ ಭಾವಾನುವಾದ ಇಲ್ಲಿದೆ…

Advertisement

ನಮ್ಮದು ತಮಿಳುನಾಡಿನ ಕಡಲೂರು ಜಿÇÉೆಗೆ ಸಮೀಪದ ಒಂದು ಹಳ್ಳಿ. ನಮ್ಮ ತಂದೆಯ ಹೆಸರು ಚಿನ್ನಿ ಕೃಷ್ಣನ್‌. ನಾಲ್ಕು ಗಂಡು, ಎರಡು ಹೆಣ್ಣು ಮಕ್ಕಳು ಮತ್ತು ಹೆತ್ತವರು-ಹೀಗೆ ಎಂಟು ಜನರಿದ್ದ ತುಂಬು ಕುಟುಂಬ ನಮ್ಮದು. ಕೃಷಿಯ ಜತೆಗೆ, ಟಾಲ್ಕ್ ಪೌಡರ್‌, ಟಾನಿಕ್‌ಗಳನ್ನು ಮೆಡಿಕಲ್‌ ಸ್ಟೋರ್‌ಗಳಿಂದ ತಂದು ಅದನ್ನು ಹಳ್ಳಿಗಳಲ್ಲಿ ಮಾರಾಟ ಮಾಡುವ ಕೆಲಸವನ್ನೂ ಅಪ್ಪ ಮಾಡುತ್ತಿದ್ದರು. ನಾನಿಲ್ಲಿ ಹೇಳುತ್ತಿರುವುದು 70ರ ದಶಕದ ಮಾತು. ಆ ದಿನಗಳಲ್ಲಿ ಟಾಲ್ಕ್ ಪೌಡರ್‌, ಜೇನುತುಪ್ಪ, ಹೇರ್‌ ಆಯಿಲ್‌, ಟಾನಿಕ್‌ನಂಥ ಉತ್ಪನ್ನಗಳು ದೊಡ್ಡ ಬಾಕ್ಸ್, ಬಾಟಲಿಗಳಲ್ಲಿ ಮಾತ್ರ ಸಿಗುತ್ತಿದ್ದವು. ಸಹಜವಾ ಗಿಯೇ ಅವುಗಳ ಬೆಲೆಯೂ ಹೆಚ್ಚೇ ಇರುತ್ತಿತ್ತು. “ಪೌಡರ್‌ ಮತ್ತು ಹೇರ್‌ ಆಯಿಲ್‌ ಹಾಕಿಕೊಂಡು ಚೆನ್ನಾಗಿ ಕಾಣಿಸಬೇಕು ಎನ್ನುವ ಆಸೆ ಬಡವರಿಗೂ ಇರ್ತದೆ. ಈ ವಸ್ತುಗಳನ್ನು ಚಿಕ್ಕ ಚಿಕ್ಕ ಪ್ಯಾಕ್‌ಗಳಲ್ಲಿ ತುಂಬಿ ಮಾರ್ಕೆಟ್‌ಗೆ ಬಿಟ್ಟರೆ ಲಾಭ ವಿದೆ’ ಎಂಬುದು ಅಪ್ಪನ ವಾದವಾಗಿತ್ತು. ಆದರೆ, ಅವರ ಮಾತನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಆಗ ಅಪ್ಪ ಏನು ಮಾಡಿದರು ಗೊತ್ತೇ?

ಬ್ಯಾಂಕ್‌ನಲ್ಲಿ ಸಾಲ ಪಡೆದು, ಸಣ್ಣ ಗಾತ್ರದ ಪ್ಯಾಕ್‌ನಲ್ಲಿ ಶಾಂಪೂ ತುಂಬು ವ ಕೆಲಸವನ್ನು ಮನೆಯಲ್ಲಿಯೇ ಆರಂಭಿಸಿದರು. ಹಾಗೆ ಶುರುವಾದದ್ದೇ ವೆಲ್ವೆಟ್ಟೆ ಶಾಂಪೂ. ಅದನ್ನು ಹಳ್ಳಿಗಳಲ್ಲಿ ಮಾರಾಟ ಮಾಡಬೇಕಿತ್ತು. ಅಪ್ಪನದ್ದು ದಿನಕ್ಕೊಂದು ಯೋಚನೆ. ಆದರೆ, ಯಾವುದನ್ನೂ ಪಟ್ಟು ಹಿಡಿದು ಮಾಡುತ್ತಿರಲಿಲ್ಲ. ಪರಿಣಾಮ; ಶಾಂಪೂ ಮಾರಾಟದಿಂದ ಹೆಚ್ಚಿನ ಲಾಭ ಸಿಗಲಿಲ್ಲ.

ಹೀಗಿರುವಾಗಲೇ, ಅನಾರೋಗ್ಯದ ಕಾರಣಕ್ಕೆ ಅಪ್ಪ ನಿಧನ ಹೊಂದಿದರು. ಅದರ ಬೆನ್ನಿಗೇ ಬಂದ ಬ್ಯಾಂಕ್‌ ಅಧಿಕಾರಿಗಳು, ನಿಮ್ಮ ತಂದೆ ಎರಡು ಲಕ್ಷ ರೂ. ಸಾಲ ಪಡೆದಿದ್ದಾರೆ. ಅದನ್ನು ತೀರಿಸದಿದ್ದರೆ ಮನೆ ಅಥವಾ ಜಮೀನನ್ನು ವಶಕ್ಕೆ ಪಡೆಯುತ್ತೇವೆ ಅಂದರು! ಈ ವೇಳೆಗೆ ಇಬ್ಬರು ಅಣ್ಣಂದಿರು ಡಾಕ್ಟರ್‌ ಆಗಿದ್ದರು. ಒಬ್ಬ ಲಾಯರ್‌ ಆಗಿದ್ದ. ಆದರೆ, ಸಾಲ ತೀರಿಸುವಷ್ಟು ಹಣ ನಮ್ಮಲ್ಲಿ ಇರಲಿಲ್ಲ. ಆಗ, ಡಾಕ್ಟರ್‌ ಆಗಿದ್ದವರಿಬ್ಬರೂ ಆ ವೃತ್ತಿಗೆ ಗುಡ್‌ ಬೈ ಹೇಳಿ, ಶಾಂಪೂ ತಯಾರಿಕೆ ಮತ್ತು ಮಾರಾಟವನ್ನೇ ಮುಂದು ವರಿಸಲು ನಿರ್ಧರಿಸಿದರು. ಅವರಿಗೆ ಸಹಾಯಕನಾಗಿ ನಾನೂ ಸೇರಿಕೊಂಡೆ.

ಹೊಸ ಕೆಲಸ ಆರಂಭಿಸಿದ ಎರಡೇ ವರ್ಷಗಳಲ್ಲಿ, ವೆಲ್ವೆಟ್ಟೆ ಶಾಂಪೂ ಹಂಚಿಕೆಯನ್ನು ಗೋದ್ರೆಜ್‌ ಕಂಪೆನಿ ವಹಿಸಿ ಕೊಂಡಿತು. ಪರಿಣಾಮ, ತಿಂಗಳೊಪ್ಪತ್ತಿನಲ್ಲಿ ದೇಶದ ಮೂಲೆ ಮೂಲೆಗೂ ವೆಲ್ವೆಟ್ಟೆ ಶಾಂಪೂ ತಲುಪಿತು. ವಾರ್ಷಿಕ ಗಳಿಕೆಯ ಮೊತ್ತ ನಿರೀಕ್ಷೆ ಮೀರಿ ಹೆಚ್ಚಾಯಿತು. ಇದೇ ಸಂದರ್ಭದಲ್ಲಿ, ಉತ್ಪನ್ನ ಮತ್ತು ಮಾರಾಟದ ಗುಣಮಟ್ಟವನ್ನು ಹೇಗೆಲ್ಲ ಹೆಚ್ಚಿಸಿಕೊಳ್ಳಬಹುದು ಎಂದು ನನಗೆ ದಿನಕ್ಕೊಂದು ಐಡಿಯಾ ಬರುತ್ತಿತ್ತು. ಅದನ್ನೆಲ್ಲ ತತ್‌ಕ್ಷಣವೇ ಅಣ್ಣಂದಿರಿಗೆ ಹೇಳುತ್ತಿದ್ದೆ. ಅದೇನು ಕಾರಣವೋ; ಅವರು ನನ್ನ ಮಾತನ್ನು ಕೇಳುತ್ತಲೇ ಇರಲಿಲ್ಲ. ಕೆಲವು ದಿನಗಳ ಅನಂತರ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಬಂತು. ತತ್‌ಕ್ಷಣವೇ ಅಲ್ಲಿಂದ ಕಳಚಿಕೊಂಡೆ. ಕಡಲೂರಿಗೆ ಹತ್ತಿರವಿ ರುವ ಕನ್ನಿ ಕೋಯಿಲ್‌ ಎಂಬ ಊರಲ್ಲಿ ನಾಲ್ಕು ಜನ ನೌಕರರನ್ನು ಜತೆಗಿ ಟ್ಟು ಕೊಂಡು 1983ರಲ್ಲಿ ಚಿಕ್‌(ಇಏಐಓ)ಹೆಸರಿನ ಶಾಂಪೂ ತಯಾರಿಕೆಯ ಕೆಲಸ ಆರಂಭಿಸಿದೆ.

Advertisement

ಅಪ್ಪನ ಮಾತು ಪದೇ ಪದೆ ನೆನಪಾಗುತ್ತಿತ್ತು. ಕೇವಲ 50 ಪೈಸೆಗೆ ಒಂದು ಪ್ಯಾಕ್‌ ಶಾಂಪೂ ನೀಡಿದರೆ ಹೇಗೆ ಎಂಬ ಯೋಚನೆ ಬಂದಿದ್ದೇ ಆಗ. ನಾನು ತಡ ಮಾಡಲಿಲ್ಲ. ತತ್‌ಕ್ಷಣವೇ ಅದನ್ನು ಕಾರ್ಯರೂಪಕ್ಕೆ ತಂದೆ. 6 ಎಂ.ಎಲ್ ಶಾಂಪೂ ಹೊಂದಿದ್ದ ಪ್ಯಾಕ್‌ಗಳನ್ನು ಪ್ರತೀ ಹಳ್ಳಿಯ ಕಿರಾಣಿ ಅಂಗಡಿಗಳಿಗೆ ತಲುಪಿಸಿದೆ. ಮಾರ್ಕೆಟ್‌ ಕಂಡುಕೊಳ್ಳುವ ಉದ್ದೇಶದಿಂದ ಯಾವುದೇ ಬ್ರಾಂಡ್ ನ‌ ಐದು ಖಾಲಿ ಶಾಂಪೂ ಪ್ಯಾಕ್‌ ಕೊಟ್ಟರೆ, ಒಂದು ಚಿಕ್‌ ಶಾಂಪೂ ಪ್ಯಾಕ್‌ ಉಚಿತ ಎಂದು ಘೋಷಿಸಿದೆ. ಈ ಐಡಿಯಾ ನಿರೀಕ್ಷೆ ಮೀರಿ ಕ್ಲಿಕ್‌ ಆಯಿತು. ಉಚಿತವಾಗಿ ಸಿಗುವ ಶಾಂಪೂ ಪಡೆಯಲು ಜನ ಓಡೋಡಿ ಬಂದರು. ಸ್ವಲ್ಪ ದಿನಗಳ ಅನಂತರ ಐದು ಚಿಕ್‌ ಶಾಂಪೂನ ಖಾಲಿ ಪ್ಯಾಕ್‌ ತಂದರೆ ಒಂದು ಚಿಕ್‌ ಶಾಂಪೂ ಪ್ಯಾಕ್‌ ಉಚಿತ ಎಂಬ ಆಫ‌ರ್‌ ಕೊಟ್ಟೆವು. ಆಗಂತೂ, ಚಿಕ್‌ ಶಾಂಪೂ ಖರೀದಿಗೆ ಹಳ್ಳಿಯ ಜನ ಮುಗಿಬಿದ್ದರು. ಅದುವರೆಗೂ ತಿಂಗಳಿಗೆ 35,000 ಪ್ಯಾಕ್‌ಗೆ ಇದ್ದ ಬೇಡಿಕೆ, ದಿಢೀರನೆ 12 ಲಕ್ಷಕ್ಕೆ ಏರಿತು! ಒಂದು ಪ್ಯಾಕ್‌ಗೆ ಕೇವಲ 50 ಪೈಸೆ ಇದ್ದುದರಿಂದ ಶಾಂಪೂ ಖರೀದಿ ಯಾರಿಗೂ ಹೊರೆ ಅನ್ನಿಸಲಿಲ್ಲ. 50 ಪೈಸೆಯ ವ್ಯವಹಾರದ ಉದ್ಯಮ, 500 ಕೋ. ರೂ. ಬಿಸಿನೆಸ್‌ನತ್ತ ದಾಪುಗಾಲು ಇಟ್ಟಿತ್ತು.

ಅನಂತರದಲ್ಲಿ ನಡೆದಿರುವುದೆಲ್ಲ ಯಶೋಗಾಥೆಯೇ. ಅದಕ್ಕೆಲ್ಲ ಕಾರಣ ನಮ್ಮ ನೌಕರರ ಶ್ರಮ, ಬದ್ಧತೆ. 1998ರಲ್ಲಿ ನಮ್ಮ ಕಂಪೆನಿಯ ಹೆಸರನ್ನು ಕೆವಿನ್‌ ಕೇರ್‌ ಎಂದು ಬದಲಿಸಿಕೊಂಡೆವು. ಶ್ರೇಷ್ಠ ಉದ್ಯಮಿ ಗಳನ್ನು ಗುರುತಿಸುವ ಫೋಬ್ಸ್ì ಪಟ್ಟಿಯಲ್ಲಿ ನಮ್ಮ ಕಂಪೆನಿಯ ಹೆಸರು ಬಂತು. ಹೀಗೆ ಮುಗಿಯುತ್ತದೆ ರಂಗನಾಥನ್‌ ಅವರ ಮಾತು.

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next