Advertisement

ನ್ಯಾಯಮಾರ್ಗದಲ್ಲಿ ನಡೆಯಬೇಕು ಜೀವನ

01:39 AM Apr 16, 2021 | Team Udayavani |

ಮಗಧದ ದೊರೆಗೆ ಒಬ್ಬನೇ ಮಗ. ಒಂದು ದಿನ ಅರಸ ಪುತ್ರನನ್ನು ಕರೆದು ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ತೆರಳಲು ಆದೇಶಿಸಿದ. ಪಿತೃವಾಕ್ಯದಂತೆ ಯುವ ರಾಜ ಆ ಕಾಲದ ಹೆಸರಾಂತ ಮುನಿ ಯೊಬ್ಬರ ಬಳಿಗೆ ಹೋದ.

Advertisement

ಹೀಗೆ ಯುವರಾಜನು ಗುರುಕುಲ ವಾಸಿಯಾಗಿ ಹಲವು ವರ್ಷಗಳು ಕಳೆ ದವು. ಒಂದು ಬಿರು ಬೇಸಗೆಯ ದಿನ ಮುನಿಗಳು ಶಿಷ್ಯರನ್ನು ಕರೆದು ಸ್ನಾನಕ್ಕಾಗಿ ನದಿಗೆ ಹೋಗುವ ಎಂದರು. ಅದರಂತೆ ಎಲ್ಲರೂ ನದಿಯತ್ತ ತೆರಳಿ ಅಲ್ಲಿ ಸ್ನಾನ, ನೀರಾಟ ಆಡುತ್ತ ಸಂತೋಷ ಪಟ್ಟರು. ಸಾಕಷ್ಟು ಹೊತ್ತು ಕಳೆದ ಬಳಿಕ ಮೈ ಒರೆಸಿಕೊಂಡು ಮರಳಿ ಆಶ್ರಮದ ಹಾದಿ ಹಿಡಿದರು. ಯುವರಾಜ ತನ್ನ ಸ್ನೇಹಿತರೊಂದಿಗೆ ಮುಂದೆ ನಡೆಯುತ್ತಿದ್ದರೆ ಗುರುಗಳು ಮತ್ತು ಇನ್ನು ಕೆಲವು ಶಿಷ್ಯರು ಹಿಂದೆ ಇದ್ದರು. ಆಗ ವಿಚಿತ್ರವೊಂದು ಘಟಿಸಿತು.

ಹಿಂದಿನಿಂದ ಇದ್ದ ಗುರುಗಳು ಯುವರಾಜನ ಸೊಂಟಕ್ಕೆ ಬಲವಾಗಿ ಒದ್ದುಬಿಟ್ಟರು. ಇದರ ನಿರೀಕ್ಷೆಯೇ ಇಲ್ಲದ ಯುವರಾಜ ನೆಲಕ್ಕೆ ಬಿದ್ದ. ಸಾವರಿಸಿಕೊಂಡು ಎದ್ದು, ಬಟ್ಟೆಗೆ ಅಂಟಿ ಕೊಂಡಿದ್ದ ಧೂಳು, ಮಣ್ಣನ್ನು ಝಾಡಿಸಿದ. ಬಳಿಕ ವಿನಯವಾಗಿ, “ಗುರುದೇವ! ನಾನೇನು ತಪ್ಪು ಮಾಡಿದೆ’ ಎಂದು ಪ್ರಶ್ನಿಸಿದ.

ಗುರುಗಳು ಏನೂ ಉತ್ತರಿಸಲಿಲ್ಲ. ಶಿಷ್ಯರೆಲ್ಲರೂ ಅಚ್ಚರಿಯಿಂದ ವೀಕ್ಷಿಸು ತ್ತಿದ್ದರು. ಯುವರಾಜ ಮತ್ತೂಮ್ಮೆ ಪ್ರಶ್ನಿಸಿದ. ಆಗಲೂ ಗುರುಗಳು ಏನೂ ಹೇಳಲಿಲ್ಲ. ಬದಲಾಗಿ “ಎಲ್ಲರೂ ಆಶ್ರಮಕ್ಕೆ ಮರಳಿ ಅಧ್ಯಯನದಲ್ಲಿ ನಿರತರಾಗಿ’ ಎಂದು ಆದೇಶಿಸಿದರು.
ಯುವರಾಜನ ಸಹಿತ ಎಲ್ಲರೂ ಇದನ್ನು ಪಾಲಿಸಲೇ ಬೇಕಾಯಿತು. ಅಂದು ಇರುಳು ಮಲಗುವುದಕ್ಕೆ ಮುನ್ನ ಯುವರಾಜ ಮತ್ತೂಮ್ಮೆ ಗುರುಗಳನ್ನು ಕೇಳಿದ. ಆಗಲೂ ಅವರು ಏನೂ ಹೇಳಲಿಲ್ಲ.

ಇದಾಗಿ ವರ್ಷಗಳು ಕಳೆದವು. ಪ್ರಶ್ನೆ ನಿರುತ್ತರವಾಗಿಯೇ ಉಳಿಯಿತು. ಒಂದು ದಿನ ಮುನಿಗಳು ಯುವರಾಜ ನನ್ನು ಕರೆದು ನಿನ್ನ ವಿದ್ಯಾಭ್ಯಾಸ ಪೂರ್ಣ ವಾಯಿತು. ಅರಮನೆಗೆ ಮರಳು ಎಂದರು. ಯುವರಾಜ ಹಾಗೆಯೇ ಮಾಡಿದ, ರಾಜಕಾರ್ಯಗಳಲ್ಲಿ ತಂದೆಗೆ ಸಹಕರಿಸುತ್ತ ಸುಖವಾಗಿದ್ದ.

Advertisement

ಇದಾಗಿ ಹಲವು ವರ್ಷಗಳ ಬಳಿಕ ರಾಜನು ಮಗನನ್ನು ಕರೆದು, “ನನಗೆ ವಯಸ್ಸಾಯಿತು, ನಿನಗೆ ಪಟ್ಟ ಕಟ್ಟು ತ್ತೇನೆ’ ಎಂದ. ತಯಾರಿಗಳು ನಡೆದವು. ಯುವರಾಜ ಪಟ್ಟಾಭಿಷೇಕ ಸಮಾರಂಭ ದಲ್ಲಿ ಭಾಗವಹಿಸಬೇಕು ಎಂದು ತನ್ನ ಗುರುಗಳಿಗೆ ವಿಶೇಷ ಆಹ್ವಾನ ಕಳುಹಿಸಿಕೊಟ್ಟ.

ಸುಮುಹೂರ್ತದಲ್ಲಿ ಯುವರಾಜನಿಗೆ ಪಟ್ಟಾ ಭಿಷೇಕ ಆಯಿತು. ಮೊದಲ ಒಡ್ಡೋಲಗ ದಲ್ಲಿ ಹೊಸ ಅರಸ, “ಈ ಕ್ಷಣದಲ್ಲಿ ನನಗೆ ನನ್ನ ಗುರುದೇವರ ಬಳಿ ಒಂದು ಪ್ರಶ್ನೆಯನ್ನು ಕೇಳಲಿಕ್ಕಿದೆ. ನಾನು ನಿಮ್ಮಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅದೊಂದು ದಿನ ನಾನು ಏನೂ ತಪ್ಪು ಮಾಡದೆ ಇದ್ದರೂ ನೀವು ನನ್ನನ್ನು ದಂಡಿಸಿದ್ದಿರಿ. ಕಾರಣ ಹೇಳಲಿಲ್ಲ. ಈಗಲಾದರೂ ಹೇಳಬಹುದೇ’ ಎಂದ.

ಗುರುಗಳು ಎದ್ದುನಿಂತರು. ಆಸ್ಥಾನ ಸಾಸಿವೆ ಕಾಳು ಬಿದ್ದರೂ ಕೇಳುವಷ್ಟು ನಿಶ್ಶಬ್ದವಾಗಿತ್ತು. “ಓ ರಾಜನೇ, ಅಂದಿ ನಿಂದ ಇಂದಿನ ವರೆಗೆ ನಿನ್ನ ಅನುಭವ ಹೇಗಿತ್ತು’ ಎಂದು ಪ್ರಶ್ನಿಸಿದರು.

“ನನ್ನ ಮನಸ್ಸು ಆ ಕ್ಷಣದಿಂದ ಪ್ರಕ್ಷುಬ್ಧವಾಗಿತ್ತು. ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ’ ಎಂದ ರಾಜ.
“ನಾನು ಬೇಕೆಂದೇ ಹಾಗೆ ಮಾಡಿದ್ದೆ. ಅದು ನನ್ನ ಕೊನೆಯ ಮತ್ತು ಮುಖ್ಯ ಪಾಠವಾಗಿತ್ತು. ರಾಜನೇ, ಪ್ರಜೆಗಳನ್ನು ಎಂದಿಗೂ ಅನ್ಯಾಯವಾಗಿ ನಡೆಸಿ ಕೊಳ್ಳಬೇಡ. ನ್ಯಾಯಮಾರ್ಗದಲ್ಲಿ ನಡೆ. ಪಾರದರ್ಶಕವಾಗಿರು. ಅನ್ಯಾಯ ಮಾಡಿದರೆ ನಾಗರಿಕರು ರಾಜನಿಂದ ದೂರವಿರುತ್ತಾರೆ, ದ್ರೋಹಿಗಳಾಗುತ್ತಾರೆ ಎಂಬುದನ್ನು ತಿಳಿಸಿಕೊಡುವುದಕ್ಕಾಗಿ ಆಗ ಹಾಗೆ ಮಾಡಿದ್ದೆ. ರಾಜಶಿಷ್ಯನಾಗಿ ಇದು ನಿನಗೆ ನನ್ನ ಕೊನೆಯ ಮತ್ತು ಪ್ರಾಮುಖ್ಯವಾದ ಪಾಠ ಎಂದು ಹೇಳಿ ಮುನಿಗಳು ಮಾತು ಮುಗಿಸಿದರು.
ಇಂದು ರಾಜನಿಲ್ಲ, ರಾಜಕಾರಣಿ ಗಳಿದ್ದಾರೆ. ಅವರು ಮಾತ್ರವಲ್ಲ, ನಮ್ಮಂತಹ ನಾಗರಿಕರು ಕೂಡ ನ್ಯಾಯ ಮಾರ್ಗದಲ್ಲಿಯೇ ಜೀವನ ನಡೆಸಬೇಕು.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next