Advertisement

ಬದುಕು ವಾಸ್ತವವೇ ಹೊರತು ಭ್ರಮೆಯಲ್ಲ

12:53 AM Mar 16, 2020 | Sriram |

ನೆನಪಿರಲಿ ಕೇವಲ ಕಲ್ಪನೆಗಳ ಮೇಲೆ ಜೀವನ ನಿಂತಿಲ್ಲ. ವಾಸ್ತವತೆ ಇಲ್ಲಿ ಎಲ್ಲಕ್ಕಿಂತ ಮುಖ್ಯ. ಯಾರೋ ಹೇಳಿದ್ದನ್ನು, ಎಲ್ಲಿಂದಲೋ ಕೇಳಿದ್ದನ್ನು ನಂಬಿ ಬಿರುಕು ಬಿಡುತ್ತಿರುವ ಸಂಬಂಧಗಳ ಸಂಖ್ಯೆ ಇಂದು ಕಡಿಮೆಯೇನಿಲ್ಲ. ಕಣ್ಣಿಗೆ ಕಾಣುವುದೆಲ್ಲ ಸತ್ಯವಲ್ಲ. ಹೀಗಾಗಿಯೇ ಬಲ್ಲವರು ಹೇಳಿದ್ದು ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂದು.

Advertisement

ಅದೊಂದು ದಿನ ಊರುಗೋಲು ಹಿಡಿಯುವಷ್ಟು ವಯಸ್ಸಾದ ಅಪ್ಪ ಮತ್ತು ಸುಮಾರು 30 ವರ್ಷ ಪ್ರಾಯದ ಮಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಹಚ್ಚ ಹಸುರಿನ ಪ್ರಕೃತಿಯಲ್ಲಿ ದಾರಿಯುದ್ದಕ್ಕೂ ಕಾಣುತ್ತಿದ್ದ ಪರ್ವತ ಶಿಖರಗಳನ್ನು ನೋಡಿ ಪುಳಕಿತನಾಗುತ್ತಿದ್ದ ಮಗ ಅಪ್ಪನಲ್ಲಿ ತನ್ನೆಲ್ಲ ಸಂತೋಷಗಳನ್ನು ಹಂಚಿಕೊಳ್ಳುತ್ತಿದ್ದ. ಆದರೆ ಇವರೊಡನೆ ಇದ್ದ ಸಹಪ್ರಯಾಣಿಕರಿಗೆ ಈ ಸನ್ನಿವೇಶ ವಿಚಿತ್ರವೆನಿಸಿತು. ಈ ಹುಡುಗ ಮಕ್ಕಳಂತೆ ಆಡುವುದನ್ನು ನೋಡಿ ಎಲ್ಲರೂ ನಗಾಡಲಾರಂಭಿಸಿದರು. ಆದರೆ ಅಪ್ಪ, ಮಗನಿಗೆ ಮಾತ್ರ ಇದಾವುದರ ಅರಿವೇ ಇರಲಿಲ್ಲ. ಅಷ್ಟರಲ್ಲೇ ಧೋ ಎಂದು ಮಳೆ ಸುರಿಯಲಾರಂಭಿಸಿತು.

ಈ ಮಗನ ಖುಷಿಗೋ ಈಗ ಪಾರವೇ ಇಲ್ಲ. ಅಪ್ಪ ಒಂದೊಂದು ಮಳೆಹನಿಯೂ ನನಗೆ ಮುತ್ತಿನಂತೆ ಭಾಸವಾಗುತ್ತಿದೆ ಎನ್ನುತ್ತಾ ರೈಲಿನ ಕಿಟಕಿಯಿಂದಲೇ ತನ್ನ ಕೈ ಹೊರಚಾಚಿ ಮಳೆಗೆ ಕೈ ಹಿಡಿದು ಸಂತಸಪಡತೊಡಗಿದ. ಈ ವೇಳೆಗೆ ಇವರ ಪಕ್ಕ ಕೂತ ಸಹ ಪ್ರಯಾಣಿಕನೋರ್ವನ ಸಹನೆ ಕೆಟ್ಟಿತು. ಏನು ಸ್ವಾಮೀ ನಿಮ್ಮ ಮಗ ಇಷ್ಟು ದೊಡ್ಡವನಾದರೂ ಹೀಗೆ ಮಕ್ಕಳಂತೆ ಆಡುತ್ತಿದ್ದಾನಲ್ಲ. ಇವನಿಗೇನಾದರೂ ಮಾನಸಿಕ ಕಾಯಿಲೆ ಇದೆಯೇ? ಈತನನ್ನು ನೀವು ಓರ್ವ ಉತ್ತಮ ಮನೋವೈದ್ಯರಲ್ಲಿ ತೋರಿಸಬಹುದಲ್ಲಾ ಎಂದು ಏಕಾಏಕಿ ಹುಡುಗನ ಅಪ್ಪನಲ್ಲಿ ಪ್ರಶ್ನಿಸಿಯೇ ಬಿಟ್ಟ. ಈ ಮಾತುಗಳನ್ನು ಕೇಳಿದ್ದೇ ತಡ ಹುಡುಗನ ಅಪ್ಪನ ಕಣ್ಣಲ್ಲಿ ನೀರು ತುಂಬತೊಡಗಿತು. ಆತ ತೊದಲುತ್ತಲೇ ಹೇಳಿದ, ನನ್ನ ಮಗನ ಈ ವರ್ತನೆಗಾಗಿ ನಾನು ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇನೆ.

ಆತ ಹುಟ್ಟು ಕುರುಡನಾಗಿದ್ದ. ಅವನ ಅಮ್ಮ ಇತ್ತೀಚೆಗೆ ತೀರಿಹೋಗಿದ್ದು, ತನ್ನ ಕಣ್ಣುಗಳನ್ನು ಮಗನಿಗಾಗಿ ದಾನ ಮಾಡಿ ಹೋಗಿದ್ದಳು. ಈಗ ತಾನೇ ಆಸ್ಪತ್ರೆಯಿಂದ ಆತನನ್ನು ಕರೆದುಕೊಂಡು ಮನೆಯತ್ತ ಹೊರಟಿದ್ದೇನೆ ಎಂದ. ಆತನ ಈ ಮಾತು ಕೇಳಿ ಒಂದು ಕ್ಷಣ ರೈಲಿನ ಬೋಗಿಗೆ ಬೋಗಿಯೇ ಸ್ತಬ್ಧವಾಯಿತು. ಇದು ಗೌರ್‌ ಗೋಪಾಲ್‌ದಾಸ್‌ ಅವರು ತಮ್ಮ ಪ್ರವಚನದಲ್ಲಿ ಹೇಳಿದ ಒಂದು ಚಿಕ್ಕ ಕತೆಯಾದರೂ ಇದರಲ್ಲಿನ ಸಾರಾಂಶ ಬಹಳ ದೊಡ್ಡದು. ಇಂದು ಸಮಾಜದಲ್ಲಿ ನಡೆಯುತ್ತಿರುವುದೂ ಇದೆ. ನಾವು ಕಂಡಿದ್ದೇ ಸತ್ಯ ಎಂದು ಭಾವಿಸಿ ನಡೆಯುತ್ತಿದ್ದೇವೆಯೇ ಹೊರತು ವಾಸ್ತವತೆ ತಿಳಿಯುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಇದರಿಂದಲೇ ಸಂಬಂಧಗಳು ಕೆಡುತ್ತಿರಬಹುದಾ ಎಂದು ಯಾರೂ ಯೋಚಿಸಿಲ್ಲ. ಬದುಕು ವಾಸ್ತವವೇ ಹೊರತು ಭ್ರಮೆಯಲ್ಲ.

- ಪ್ರಸನ್ನ ಹೆಗಡೆ ಊರಕೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next