Advertisement

ಪುಣ್ಯಕ್ಷೇತ್ರ ದರ್ಶನದಿಂದ ಜೀವನದಲ್ಲಿ ನೆಮ್ಮದಿ

03:51 PM Sep 29, 2018 | Team Udayavani |

ಬಸವಕಲ್ಯಾಣ: ಮಠ-ಮಂದಿರಗಳ ದರ್ಶನ ಹಾಗೂ ಗುರುಗಳನ್ನು ಗೌರವದಿಂದ ಕಾಣವುದರಿಂದ ಮಾತ್ರ ನೆಮ್ಮದಿಯ ಜೀವನ ಅನುಭವಿಸಲು ಸಾಧ್ಯ ಎಂದು ಜೇವರ್ಗಿ ಶಾಖಾಪೂರದ ವಿಶ್ವಾರಾಧ್ಯ ತಪೋವನ ಮಠದ ಶಿವಾಚಾರ್ಯ ರತ್ನ ಡಾ| ಸಿದ್ದರಾಮ ಶಿವಾಚಾರ್ಯರು ಹೇಳಿದರು.

Advertisement

ನಗರದ ತ್ರಿಪೂರಾಂತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಶುಕ್ರವಾರ ನಡೆದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಜನ್ಮದಿನೋತ್ಸವ ಹಾಗೂ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಘನಲಿಂಗ ರುದ್ರಮುನಿ ಮಠ ಬಹಳ ಪ್ರಾಚೀನ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಭಕ್ತಾದಿಗಳು ಶ್ರದ್ಧಾ ಭಕ್ತಿಪೂರ್ವಕವಾಗಿ ನಡೆದುಕೊಂಡರೆ ಸಕಲ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮಠಕ್ಕೆ ಭಕ್ತಾದಿಗಳು ಶ್ರೀರಕ್ಷೆ. ಆದ್ದರಿಂದ ಸರ್ಕಾರದ ಸಹಾಯ ಇಲ್ಲದೇ ಮಠವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಗುರುಗಳು ಏನೂ ಬಯಸುವುದಿಲ್ಲ.
ಬದಲಾಗಿ ನೀವು ಕೆಟ್ಟ ಚಟಗಳಿಂದ ಮುಕ್ತಿಯಾದರೆ ಅದುವೇ ಭಕ್ತಾದಿಗಳು ನಮಗೆ ಕೊಟ್ಟ ದೊಡ್ಡ ಕಾಣಿಕೆ ಎಂದರು.

ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ಮಠದ ರಸ್ತೆ ಕಾಮಗಾರಿಗೆ 40 ಲಕ್ಷ ರೂ. ಅನುದಾನ ನೀಡಿ 15 ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. 5 ಕೋಟಿ ರೂ. ಯಾತ್ರಿ ನಿವಾಸಕ್ಕೆ ಮತ್ತು 2 ಕೋಟಿ ರೂ. ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು. ಪ್ರೊ| ಸೂರ್ಯಕಾಂತ ಶೀಲವಂತ ಗವಿಮಠದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷ ಅಜರ್‌ ಅಲಿ ನೌರಂಗ, ಗವಿಮಠದ ಕಾರ್ಯಾಧ್ಯಕ್ಷ ಶರಣಪ್ಪಾ ಬಿರಾದಾರ, ಶಿವಯೋಗಿ ಹುಲಕುಂತಿಮಠ, ಸಾಗರ ದಂಡೋತಿ, ಕಾಶಿನಾಥ ಸ್ವಾಮಿ, ಅನೀಲ ಪಾಟೀಲ, ಸುನೀಲ ಚಪಾತೆ, ವೀರಣ್ಣಾ ಶೀಲವಂತ, ಪರಮೇಶ್ವರ ಗಿಲ್ಕಿ, ಕಾರ್ತಿಕ ಬಿರಾದಾರ್‌, ಪ್ರೊ| ರುದ್ರೇಶ್ವರ ಸ್ವಾಮಿ ಗೋರ್ಟಾ ಇದ್ದರು. ಪ್ರೊ|ಬಸವರಾಜ ಹಿರೇಮಠ
ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next