Advertisement

ಬದುಕು ನಾವು ಅಂದುಕೊಂಡಂತೆ ನಡೆಯೋದಿಲ್ಲ…

10:12 AM Mar 04, 2020 | mahesh |

ನಿನ್ನ ನೆನಪೇ ಇನ್ನೂ ಹಸಿರಾಗಿದೆ. ಈಗ ನಾವಿಬ್ಬರೂ ಜೊತೆಗಿಲ್ಲ. ದೂರಾದದ್ದೂ ಸಣ್ಣ ವಿಷಯಕ್ಕೆ. ಅಂದು ನೀನಾದರೂ ತಾಳ್ಮೆ ವಹಿಸಲಿಲ್ಲ. ನಾನಾದರೂ ನನ್ನ ಹಠವನ್ನ ಬಿಡಲಿಲ್ಲ. ಅದರಿಂದ ನಮ್ಮಿಬ್ಬರ ಸಂಬಂಧದಲ್ಲಿ ಮಹಾ ಬಿರುಕಾಯಿತು. ಜಗಳ ನಡೆದಾಗಲೆಲ್ಲ ಸ್ವಲ್ಪ ದಿನದ ಬಳಿಕ ರಾಜಿಯಾಗಿ ಮತ್ತೆ ಮತ್ತೆ ಸೇರಿಕೊಳ್ಳುತ್ತಿದ್ದೆವು. ಆದರೀಗ ಹಾಗಾಗುವುದಿಲ್ಲ. ನಿನ್ನ ಮನಸ್ಸು ಹೇಳಿದ್ದು ಕೇಳುವ ನಿನಗೆ, ನಾನೊಬ್ಬ ತಪ್ಪಿತಸ್ಥನಂತೆ, ವಂಚಕನಂತೆ, ನಂಬಿಕೆ ದ್ರೋಹಿಯಂತೆ ಕಾಣಿಸಬಹುದು. ನನಗೆ ನೀನು ನಿಷ್ಠಾವಂತ ಪ್ರೇಮಿಯಂತೆ ಕಂಡರೂ ಮತ್ತೂಂದು ದೃಷ್ಟಿಯಲ್ಲಿ ಕೇರ್‌ಲೆಸ್‌ ಹುಡುಗಿ. ಪ್ರೀತಿ ಬಿಟ್ಟುಕೊಡಲು ಮನಸ್ಸಿಲ್ಲ. ಆದರೆ, ಬಲವಂತವಾಗಿ ಪ್ರೀತಿಸಿಕೊಳ್ಳುತ್ತ, ನಿನ್ನನ್ನ ಚಿನ್ನು, ಮುದ್ದು’ ಎಂದುಕೊಳ್ಳಲು ಸಾಧ್ಯವೂ ಆಗುತ್ತಿಲ್ಲ. ಒಮ್ಮೊಮ್ಮೆ ಹೋದರೆ ಹೋಗಲಿ ಅನಿಸಿದರೂ, ಮತ್ತೆ ಬರಬಾರದೇ ಎಂದು ನಾನೇ ಅಂದುಕೊಳ್ಳುತ್ತೇನೆ.

Advertisement

ಆದರೆ, ನಡೆದಿದ್ದೆಲ್ಲ ಮರೆತು ನೀನು ವಾಪಸ್‌ ಬಂದೇ ಬರುತ್ತೀಯ ಎಂಬ ನಂಬಿಕೆ ಈಗ ನನಗಿಲ್ಲ. ಅದು ನಡೆಯಬಹುದೆಂಬ ಸಣ್ಣ ಆಸೆಯನ್ನೂ ಇಟ್ಟುಕೊಂಡಿಲ್ಲ. ನೀನೇನು ಎಂಬುದು ನನಗೆ ಇಂಚಿಂಚು ತಿಳಿದಿದೆ. ಗೊತ್ತಿದ್ದರೂ ನಿರೀಕ್ಷೆ ಇಟ್ಟುಕೊಳ್ಳುವುದು ನೋವಿಗೆ ಆಹ್ವಾನ ಕೊಟ್ಟಂತೆ ಭವಿಷ್ಯದಲ್ಲಿ ನೀನಾಗಲೀ, ನಾನಾಗಲೀ ಒಬ್ಬರನ್ನೊಬ್ಬರು ಟೀಕಿಸಬಾರದು. ಆದದ್ದು ಆಯಿತಷ್ಟೇ. ಮರೆತು ಬಿಡೋಣ. ಹೊಸಜೀವನ ಇಬ್ಬರಿಗೂ ಸಿಗಲಿದೆ. ಕಠೊರ ವಾಸ್ತವದ ಸತ್ಯಗಳನ್ನು ಅರಿತು ಬದುಕಲು ಕಷ್ಟವಾಗಬಹುದು. ಆದರೇನು ಮಾಡಲು ಸಾಧ್ಯ? ನಾನು ಅಥವಾ ನೀನು ಅಂದುಕೊಂಡಂತೆ ಜೀವನದಲ್ಲಿ ನಡೆಯುವುದಿಲ್ಲ. ನಾವೇ ಹೊಂದಿಕೊಳ್ಳಬೇಕು. ಏನೇ ಆದರೂ ನಮ್ಮಿಬ್ಬರೆದೆಯಲ್ಲೂ ಗಾಢವಾದ ವೇದನೆ ಉಳಿದು ಬಿಡುವುದರಲ್ಲಿ ಅನುಮಾನವೇ ಇಲ್ಲ.

ಅಜಯ್‌ ಕುಮಾರ್‌ ಎಂ. ಗುಂಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next